ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯವಿದ್ದ ಕಾರಣ ಹಿರಿಯ ನ್ಯಾಯಾಧೀಶರೊಬ್ಬರು ತಮ್ಮ ಸಹೋದ್ಯೋಗಿ ನ್ಯಾಯಾಧೀಶೆಯನ್ನು ನಿಂದಿಸಿರುವ ಘಟನೆ ಗುಜರಾತ್ ಹೈಕೋರ್ಟ್‌ನಲ್ಲಿ ನಡೆದಿದೆ. ನಿಂದನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಎರಡು ದಿನಗಳ ಬಳಿಕ ಕ್ಷಮೆಯಾಚಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಅವರು ತಮ್ಮ ಸಹೋದ್ಯೋಗಿಯನ್ನು ಸೋಮವಾರ ನ್ಯಾಯಾಲಯದಲ್ಲಿ ನಿಂದಿಸಿದ್ದರು. ಘಟನೆ ಸಂಬಂಧ ಬುಧವಾರ ವಿಷಾಧ ವ್ಯಕ್ತಪಡಿಸಿದ್ದು, ನ್ಯಾಯಾಧೀಶೆ ಬಳಿ ಕ್ಷಮೆ ಕೇಳಿದ್ದಾರೆ. (ದಸರಾ ನಿಮಿತ್ತ ಮಂಗಳವಾರ ರಜೆ ಇತ್ತು)
ಸೋಮವಾರ ಪ್ರಕರಣವೊಂದರ ಸಂಬಂಧ ನ್ಯಾಯಮೂರ್ತಿ ವೈಷ್ಣವ್ ಅವರು ನ್ಯಾಯಾಧೀಶೆ ಮೌನಾ ಭಟ್ ಅವರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ್ದರು. ಪ್ರಕರಣದ ಆದೇಶ ನೀಡುವಾಗ ಭಟ್ ಅವರು ವೈಷ್ಣವ್ ಅವರ ನಿಲುವನ್ನು ಒಪ್ಪಿರಲಿಲ್ಲ. ಆ ಕಾರಣಕ್ಕೆ ಅವರ ಮೇಲೆ ನಿಂದನಾತ್ಮಕವಾಗಿ ಮಾತನಾಡಿದ್ದರು.
“ಸೋಮವಾರ ನಡೆದದ್ದು ಆಗಬಾರದಿತ್ತು. ನಾನು ತಪ್ಪು ಮಾಡಿದೆ. ಅದಕ್ಕಾಗಿ ಕ್ಷಮಿಸಿ. ನಾವು ಹೊಸ ವಿಚಾರಣೆಗಳನ್ನು ಪ್ರಾರಂಭಿಸೋಣ” ಎಂದು ನ್ಯಾಯಮೂರ್ತಿ ವೈಷ್ಣವ್ ಅವರು ನ್ಯಾಯಮೂರ್ತಿ ಮೌನ ಭಟ್ ಅವರ ಎದುರು ಕ್ಷಮೆ ಕೇಳಿದ್ದಾರೆ.
ನ್ಯಾಯಮೂರ್ತಿಗಳಾದ ವೈಷ್ಣವ್ ಮತ್ತು ಭಟ್ ಅವರ ನಡುವಿನ ಮಾತಿನ ಚಕಮಕಿ ನಡೆದಿದ್ದ ವಿಡಿಯೋವನ್ನು ಗುಜರಾತ್ ಹೈಕೋರ್ಟ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಿಂದ ತೆಗೆದುಹಾಕಲಾಗಿದೆ, ಘಟನೆಗೆ ಸಂಬಂಧಿಸಿದ ವೈರಲ್ ವಿಡಿಯೋದಲ್ಲಿ ನ್ಯಾಯಮೂರ್ತಿ ಭಟ್ ಅವರು ನ್ಯಾಯಮೂರ್ತಿ ವೈಷ್ಣವ್‌ಗೆ ಏನೋ ಹೇಳುತ್ತಿರುವುದು ಕಾಣಿಸುತ್ತದೆ.
ಈ ವೇಳೆ ನ್ಯಾಯಮೂರ್ತಿ ವೈಷ್ಣವ್, “ಹಾಗಾದರೆ ನೀವು ಭಿನ್ನಾಭಿಪ್ರಾಯ ಹೊಂದಿದ್ದೀರಿ… ನಾವು ಒಂದು ವಿಚಾರದಲ್ಲಿ ಭಿನ್ನವಾಗಿದ್ದೇವೆ ಇನ್ನೊಂದರಲ್ಲಿಯೂ ಭಿನ್ನವಾಗಿರಬಹುದು” ಎಂದು ಸಿಟ್ಟಿನಿಂದ ಹೇಳಿದ್ದಾರೆ. ಆಗ ನ್ಯಾಯಮೂರ್ತಿ ಭಟ್, ‘ಇದು ಭಿನ್ನಾಭಿಪ್ರಾಯದ ಪ್ರಶ್ನೆಯಲ್ಲ’ ಎಂದರು. ಇದಕ್ಕೆ ನ್ಯಾಯಮೂರ್ತಿ ವೈಷ್ಣವ್, “ಹಾಗಾದರೆ ಗೊಣಗಬೇಡಿ, ನೀವು ಪ್ರತ್ಯೇಕ ಆದೇಶ ನೀಡಿ, ನಾವು ಬೇರೆ ವಿಷಯಗಳನ್ನು ತೆಗೆದುಕೊಳ್ಳುತ್ತಿಲ್ಲ” ಎಂದು ಹೇಳಿರುವುದು ಕಂಡುಬಂದಿದೆ.