ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ ತಂದೆಗೆ ಆತ ಸಾಯುವವರೆಗೂ ಜೈಲಿನಲ್ಲಿರುವ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ.
ಗುಜರಾತ್‌ನ ಅಹಮದಾಬಾದ್ ಜಿಲ್ಲೆಯಲ್ಲಿ ಕಾಮುಕ ತಂದೆ ತನ್ನ ಮಗಳ ಮೇಲೆ ಸತತ ಆರು ತಿಂಗಳಿನಿಂದ ನಿರಂತರವಾಗಿ ಪದೇ-ಪದೇ ಅತ್ಯಾಚಾರ ಎಸಗಿದ್ದ. 2024ರ ಏಪ್ರಿಲ್‌ನಲ್ಲಿ ಸಂತ್ರಸ್ತೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ತಂದೆಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿರುವ ಮೆಹ್ಸಾನಾದ ವಿಶೇಷ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಸ್. ಕಾಳೆ ಅವರು ಕೃತ್ಯವನ್ನು ‘ಅತ್ಯಂತ ಕ್ರೂರ ಅಪರಾಧ’ ಎಂದು ಕರೆದಿದ್ದಾರೆ.
“ಈ ಪ್ರಕರಣವು ಘೋರ ಅಪರಾಧದ ವ್ಯಾಪ್ತಿಗೆ ಬರುತ್ತದೆ. ಆರೋಪಿ ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅಂತಹ ಮನಸ್ಥಿತಿ ಹೊಂದಿರುವ ವ್ಯಕ್ತಿಯನ್ನು ಸಮಾಜದಲ್ಲಿ ಬದುಕಲು ಬಿಟ್ಟರೆ, ಯಾವುದೇ ಹುಡುಗಿ ಸುರಕ್ಷಿತವಾಗಿರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಆರೋಪಿಗೆ ಶಿಕ್ಷೆಯ ವಿಷಯದಲ್ಲಿ ಗರಿಷ್ಠ ಶಿಕ್ಷೆ ನೀಡಬೇಕಿದೆ. ಆತನಿಗೆ ಜೀವಿತಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ” ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ.