ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ. ಇತ್ತೀಚೆಗೆ, ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಸದಸ್ಯರ ನೇಮಕಾತಿ ಕಾನೂನನ್ನು ತಿದ್ದುಪಡಿ ಮಾಡಿತ್ತು. ನೇಮಕ ಸಮಿತಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯನ್ನು ಹೊರಗಿಟ್ಟು, ಕೇಂದ್ರದ ಸಚಿವರನ್ನು ಸೇರಿಸಲಾಗಿತ್ತು. ಪ್ರಧಾನಿ, ಕೇಂದ್ರ ಸಚಿವ ಹಾಗೂ ವಿಪಕ್ಷ ನಾಯಕರಿದ್ದ ಹೊಸ ಸಮಿತಿಯು ಜ್ಞಾನೇಶ್ ಕುಮಾರ್ ಅವನ್ನು ಮುಖ್ಯ ಆಯುಕ್ತರನ್ನಾಗಿ ನೇಮಿಸಿದೆ.
ಈ ಹಿಂದೆ, ಚುನಾವಣಾ ಆಯುಕ್ತರಾಗಿದ್ದ ರಾಜೀವ್ ಕುಮಾರ್ ಅವರು ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಅವರ ಸ್ಥಾನಕ್ಕೆ ಜ್ಞಾನೇಶ್ ಕುಮಾರ್ ಅವರನ್ನು ನೇಮಿಸಲಾಗಿದೆ. ಜ್ಞಾನೇಶ್ ಕುಮಾರ್ ಅವರು ಚುನಾವಣಾ ಆಯೋಗದ ಸದಸ್ಯರಾಗಿದ್ದರು. ಇದೀಗ, ಮುಖ್ಯ ಆಯುಕ್ತರಾಗಿ ನೇಮಕಗೊಂಡಿದ್ದಾರೆ. ಅವರು 26ನೇ ಮುಖ್ಯ ಚುನಾವಣಾ ಆಯುಕ್ತರಾಗಿದ್ದಾರೆ. ಅವರ ಅಧಿಕಾರಾವಧಿಯು 2029ರ ಜನವರಿ 26ರವರೆಗೆ ಇರಲಿದೆ.
ಜ್ಞಾನೇಶ್ ಕುಮಾರ್ ಅವರು 1988ರ ಬ್ಯಾಚ್, ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರು ಸಹಕಾರ, ಸಂಸದೀಯ ವ್ಯವಹಾರಗಳು ಹಾಗೂ ರಕ್ಷಣಾ ಸಚಿವಾಲಯ ಸೇರಿದಂತೆ ಹಲವು ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಅಲ್ಲದೆ, ಗೃಹ ಸಚಿವಾಲಯದಲ್ಲಿಯೂ ಜ್ಞಾನೇಶ್ ಕುಮಾರ್ ಕೆಲಸ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ರನ್ನು ರದ್ದುಗೊಳಿಸಿದಾಗ ಅವರು ಗೃಹ ಸಚಿವಾಲಯದ ಕಾಶ್ಮೀರ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದರು. ಆ ಬಳಿಕ, 2020ರಲ್ಲಿ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕಗೊಂಡರು. ರಾಮ ಮಂದಿರ ನಿರ್ಮಾಣಕ್ಕಾಗಿ ರಚನೆಯಾಗಿದ್ದ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯಲ್ಲಿಯೂ ಅವರ ಪಾತ್ರವಿತ್ತು ಎಂದು ಹೇಳಲಾಗಿದೆ.
ಅವರು ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿ ಕೆಲಸ ಮಾಡುವುದಕ್ಕೂ ಮುನ್ನ, ಕೇರಳದ ಎರ್ನಾಕುಲಂನಲ್ಲಿ ಸಹಾಯಕ ಜಿಲ್ಲಾಧಿಕಾರಿ ಕಲೆಕ್ಟರ್, ಅಡೂರ್‌ನ ಉಪ ಜಿಲ್ಲಾಧಿಕಾರಿ, ಕೇರಳ ರಾಜ್ಯ ಎಸ್‌ಸಿ/ಎಸ್‌ಟಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಕೊಚ್ಚಿನ್ ಕಾರ್ಪೊರೇಶನ್‌ನ ಮುನ್ಸಿಪಲ್‌ನ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು.
ಇದೀಗ, ಅವರು ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ 2025ರ ಕೊನೆಯಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. 2026ರಲ್ಲಿ ಕೇರಳ, ಪುದುಚೇರಿ, ತಮಿಳುನಾಡು ಹಾಗೂ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಳು ನಡೆಯಲಿವೆ. 2028ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯೂ ನಡೆಯಲಿದೆ. ಬಹುಶಃ, 2029ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನೂ ಜ್ಞಾನೇಶ್ ಕುಮಾರ್ ಅವರೇ ಪ್ರಕಟಿಸುವ ಸಾಧ್ಯತೆಯೂ ಇದೆ.
ಇನ್ನು, ಚುನಾವಣಾ ಆಯುಕ್ತರಾಗಿ ಹರ್ಯಾಣ ಕೇಡರ್‌ನ 1989ರ ಬ್ಯಾಚ್‌ನ ಐಎಎಸ್ ಅಧಿಕಾರಿ ವಿವೇಕ್ ಜೋಶಿ ನೇಮಕವಾಗಿದ್ದಾರೆ.