- ಜ್ಞಾನವಾಪಿ ಮಸೀದಿ ಒಳಗೆ ‘ವಝು’ಗೆ ಅವಕಾಶ ಕೋರಿ ಅರ್ಜಿ
- ಏಪ್ರಿಲ್ 21ರಂದು ಮುಂದಿನ ವಿಚಾರಣೆ ನಡೆಸಲಿರುವ ನ್ಯಾಯಾಲಯ
ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ರಂಜಾನ್ ಪವಿತ್ರ ಮಾಸದ ಸಮಯದಲ್ಲಿ ಮುಸ್ಲಿಮರಿಗೆ ‘ವಝು’ (ಧಾರ್ಮಿಕ ಅಂಗ ಶುದ್ಧಿ ಕ್ರಿಯೆ) ನಡೆಸಲು ಸೂಕ್ತ ವ್ಯವಸ್ಥೆ ನಡೆಸಲು ಸಭೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಏಪ್ರಿಲ್ 17) ವಾರಾಣಸಿ ಜಿಲ್ಲಾಧಿಕಾರಿಗೆ ಸೂಚಿಸಿದೆ.
ಮಸೀದಿ ಆಡಳಿತ ಸಮಿತಿ ಸದಸ್ಯರು ಮತ್ತು ಮುಸ್ಲಿಂ ಮುಖಂಡರೊಡನೆ ವಾರಾಣಸಿ ಜಿಲ್ಲಾಡಳಿತ ಸಭೆ ನಡೆಸಿ ಸೌಹಾರ್ದಯುತ ತೀರ್ಮಾನಕ್ಕೆ ಬರುವಂತೆ ನ್ಯಾಯಾಲಯ ಸೂಚಿಸಿದೆ.
ಮಸೀದಿ ವಿವಾದಕ್ಕೆ ಸಂಬಂಧಿಸಿ ಶುಕ್ರವಾರ (ಏಪ್ರಿಲ್ 21) ಮುಂದಿನ ವಿಚಾರಣೆ ನಡೆಯಲಿದೆ ಎಂದು ಅದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.
ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯ ಪ್ರತಿನಿಧಿಗಳು ಮತ್ತು ಇತರ ಮಧ್ಯಸ್ಥಗಾರರ ಜತೆ ಜಿಲ್ಲಾಧಿಕಾರಿ ಮಂಗಳವಾರ (ಏಪ್ರಿಲ್ 18) ಸಭೆ ನಡೆಸಲಿದ್ದಾರೆ ಎಂದು ಪೀಠ ತಿಳಿಸಿದೆ.
ಶುಕ್ರವಾರ ‘ವಝು’ ವ್ಯವಸ್ಥೆಗೆ ಸೂಕ್ತ ನಿರ್ದೇಶನಗಳನ್ನು ನೀಡಿದ ಮಸೀದಿಗೆ ಸಂಬಂಧಿಸಿದ ವಿಷಯವನ್ನು ಮತ್ತೆ ಕೈಗೆತ್ತಿಕೊಳ್ಳಲಾಗುವುದು ಎಂದು ಪೀಠ ಹೇಳಿದೆ.
ಕಳೆದ ವರ್ಷ ನಡೆದ ಸಮೀಕ್ಷೆಯ ವೇಳೆ ಜ್ಞಾನವಾಪಿ ಮಸೀದಿ ಒಳಗೆ ಶಿವಲಿಂಗ ಪತ್ತೆಯಾಗಿತ್ತು. ಈ ಕಾರಣದಿಂದ ಅಲ್ಲಿ ಯಾರಿಗೂ ಹೋಗಲು ಅವಕಾಶ ನೀಡಿರಲಿಲ್ಲ. ಅಲ್ಲಿ ಮುಸ್ಲಿಂ ಸಮುದಾಯಕ್ಕೂ ಪ್ರವೇಶ ನೀಡಿರಲಿಲ್ಲ.
“ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಒಂದು ವೇಳೆ ನಿಮಗೆ ಇಲ್ಲಿ ಪ್ರಾರ್ಥನೆ ಸಲ್ಲಿಸಲೇಬೇಕಾದರೆ ಸೌಹಾರ್ದಯುತ ಮಾತುಕತೆ ನಡೆಸಿ ಒಂದು ತೀರ್ಮಾನಕ್ಕೆ ಬನ್ನಿ” ಎಂದು ಪೀಠ ಹೇಳಿದೆ.
ವಕೀಲ ಫುಜೈಲ್ ಅಹ್ಮದ್ ಅಯ್ಯುಬಿ ಕೂಡ ಈ ಬಗ್ಗೆ ಪೀಠಕ್ಕೆ ಮನವಿ ಮಾಡಿದ್ದಾರೆ. ಹಿಂದಿನ ನ್ಯಾಯಾಲಯದ ಆದೇಶಗಳು ಈಗಾಗಲೇ ‘ವಝು’ ನಡೆಸಲು ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಹೇಳಿವೆ.
ರಂಜಾನ್ ದೃಷ್ಟಿಯಿಂದ ಈ ನಿರ್ದೇಶನಗಳನ್ನು ಸೂಕ್ತ ಅನುಷ್ಠಾನಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಕೀಲರು ಹೇಳಿದರು.
ಉತ್ತರ ಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ, ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯ ಪ್ರತಿನಿಧಿಗಳು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ವ್ಯವಸ್ಥೆ ಮಾಡಬಹುದು ಎಂದು ಹೇಳಿದರು.
ಇತರ ಸಮುದಾಯದ (ಹಿಂದೂಗಳ) ಧಾರ್ಮಿಕ ಸಂವೇದನೆಗಳ ದೃಷ್ಟಿಯಿಂದ ಈ ಕ್ರಮವನ್ನು ಸರಿಯಾಗಿ ನಿರ್ಧಾರಿಸಬೇಕು ಎಂದು ಪೀಠಕ್ಕೆ ತಿಳಿಸಿದರು.
“ಎಲ್ಲರೂ ಒಟ್ಟಾಗಿ ಕುಳಿತು ಸರಿಯಾದ ತೀರ್ಮಾನ ತಿಳಿಸಿ, ನಂತರ ನಮ್ಮ ಮುಂದೆ ಬನ್ನಿ. ನ್ಯಾಯಾಲಯವು ಎಲ್ಲರ ಒಮ್ಮತದ ಮೂಲಕ ಆದೇಶವನ್ನು ನೀಡಬಹುದು” ಎಂದು ಪೀಠ ಉಲ್ಲೇಖಿಸಿತು.
ಈ ಸುದ್ದಿ ಓದಿದ್ದೀರಾ? ಅಬಕಾರಿ ನೀತಿ ಹಗರಣ | ಸಿಬಿಐ ಬಳಿ ಸಾಕ್ಷಿಯೇ ಇಲ್ಲವೆಂದ ಕೇಜ್ರಿವಾಲ್; ದೆಹಲಿಯಲ್ಲಿ ಹೈಡ್ರಾಮ
ಮಸೀದಿಯ ಪಶ್ಚಿಮ ಗೋಡೆಯ ಹಿಂದೆ ಇದೆ ಎನ್ನಲಾದ ಪಾರ್ವತಿ ದೇವಿಯ ದೇಗುಲವಾದ ‘ಮಾ ಶೃಂಗಾರ ಗೌರಿ’ ಸ್ಥಳದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕೋರಿದ ಐವರು ಹಿಂದೂ ಮಹಿಳೆಯರ ಮೊಕದ್ದಮೆ ವಿರೋಧಿಸಿ ಮೇ ತಿಂಗಳಲ್ಲಿ ಮಸೀದಿ ಸಮಿತಿಯು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಪರಿಗಣಿಸಿದೆ.
ಜ್ಞಾನವಾಪಿ ಮಸೀದಿ ಪ್ರಕಣಕ್ಕೆ ಸಂಬಂಧಿಸಿ ಅಂಜುಮನ್ ಇಂತೇಝಾಮಿಯಾ ಮಸೀದಿ ಪರವಾಗಿ ಹಿರಿಯ ವಕೀಲ ಹುಝೆಫಾ ಅಹ್ಮದಿ, ರಂಜಾನ್ ಸಮಯದಲ್ಲಿ ಭಾರೀ ಜನದಟ್ಟಣೆ ಇರುವ ಕಾರಣ ಅವರು ಮಸೀದಿಯಲ್ಲಿ ‘ವಝು’ ಮಾಡಲು ವ್ಯವಸ್ಥೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು.