ಭಾರತದಿಂದ ಮ್ಯಾನ್ಮಾರ್‌ಗೆ ಮಾನವ ಕೂದಲನ್ನು ಅಕ್ರಮವಾಗಿ ಸಾಗಿಸಿದ್ದ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಪ್ರಾಸಿಕ್ಯೂಷನ್ ದೂರನ್ನು ತೆಲಂಗಾಣದ ನಾಂಪಲ್ಲಿ ವಿಷೇಶ ನ್ಯಾಯಾಲಯ ಪರಿಗಣನೆಗೆ ತೆಗದುಕೊಂಡಿದೆ.
2022ರಲ್ಲಿ ‘ನಯ್ ಲಾ ಫ್ಯಾಮಿಲಿ ಎಕ್ಸ್‌ಪೋರ್ಟ್ಸ್’ ಮೂಲಕ ಮಿಜೋರಾಂ ನಿವಾಸಿಯೊಬ್ಬ ಸೇರಿದಂತೆ 16 ಮಂದಿ ಆರೋಪಿಗಳು ಕೂಲದನ್ನು ಕಳ್ಳ ಸಾಗಾಣಿಕೆ ಮಾಡಿದ್ದರು ಎಂದು ಇಡಿ ಆರೋಪಿಸಿದೆ. ಇಡಿ ದಾಖಲಿಸಿದ್ದ ದೂರನ್ನು ಇದೀಗ, ನ್ಯಾಯಾಲಯ ಪರಿಗಣಿಸಿದೆ.
ಹೈದರಾಬಾದ್‌ನಲ್ಲಿ ಅಕ್ರಮ ಹಣ ವರ್ಗಾವಣೆ ವಿರುದ್ಧ ನಡೆದ ಕಾರ್ಯಾಚರಣೆ ವೇಳೆ, 11,793 ಕೋಟಿ ರೂ. ಮೌಲ್ಯದ ಮಾನವ ಕೂದಲು ಕಳ್ಳಸಾಗಣೆ ದಂಧೆಯನ್ನು ಇಡಿ ಪತ್ತೆಹಚ್ಚಿದೆ ವರದಿಯಾಗಿದೆ.
ಚೀನಾದ ಜನರನ್ನು ಕಾಡುತ್ತಿರುವ ಬೋಳು ಸಮಸ್ಯೆಯ ನಡುವೆ, ಹೈದರಾಬಾದ್‌ನಿಂದ ಕಳ್ಳಸಾಗಣೆ ಮೂಲಕ ಕೂದಲನ್ನು ಚೀನಾಕ್ಕೆ ಸಾಗಿಸಲಾಗಿದೆ. ಹಾಗೆಯೇ ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ವಿಯೆಟ್ನಾಂನಂತಹ ಇತರ ದೇಶಗಳಿಗೆ ಹೈದರಾಬಾದ್ ವಿಮಾನ ನಿಲ್ದಾಣದಿಂದ ಮತ್ತು ಇತರ ಭೂ ಮಾರ್ಗಗಳ ಮೂಲಕ ಸಾಗಿಸಲಾಗಿದೆ ಎಂದು ಆರೋಪಿಸಲಾಗಿದೆ.
ಕಳ್ಳಸಾಗಣೆದಾರರು ಹವಾಲಾ ಜಾಲಗಳನ್ನು ಬಳಸಿಕೊಂಡು ಸರಕುಗಳ ವಿತ್ತೀಯ ವಹಿವಾಟು ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ನಕಲಿ ದಾಖಲೆಗಳ ಮೂಲಕ ಮಾನವ ಕೂದಲನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ‘ನಯ್ ಲಾ ಫ್ಯಾಮಿಲಿ ಎಕ್ಸ್‌ಪೋರ್ಟ್ಸ್’ ವಿರುದ್ಧ ಹೈದರಾಬಾದ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ 2022ರ ಫೆಬ್ರವರಿಯಲ್ಲಿ ಇಡಿ ತನಿಖೆ ಆರಂಭಿಸಿತ್ತು.
ಚೀನಾದ ಕೂದಲು ಉದುರುವಿಕೆಯ ಸಮಸ್ಯೆ
ಚೀನಾದಲ್ಲಿ 251 ಮಿಲಿಯನ್ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು 2020ರಲ್ಲಿ ವರದಿಯಾಗಿತ್ತು. ಅದರಲ್ಲಿ 88 ಮಿಲಿಯನ್ ಮಹಿಳೆಯರು ಇದ್ದಾರೆ. ಚೀನೀ ವ್ಯಕ್ತಿಗಳಲ್ಲಿ ಕಿರಿಯ ವಯಸ್ಸಿನಲ್ಲೇ ಕೂದಲು ಉದುರುವಿಕೆ ಸಮಸ್ಯೆ ಎದುರಾಗುತ್ತಿದೆ. ಅನೇಕರು, 21 ರಿಂದ 30 ವರ್ಷ ವಯಸ್ಸಿನಲ್ಲಿಯೇ ಈ ಸದಸ್ಯೆಗೆ ತುತ್ತಾಗುತ್ತಿದ್ದಾರೆ. ಹಿಂದಿನ ಪೀಳಿಗೆಗೆ ಹೋಲಿಸಿದರೆ ಗಣನೀಯ ಬದಲಾವಣೆಯಾಗಿದೆ ಎಂದು ಹೇಳಲಾಗಿದೆ.