ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ಕೆಲವರು ಜೈಲಿನಲ್ಲಿದ್ದಾರೆ, ಇನ್ನುಳಿದವರು ಬೇಲ್‌ನಲ್ಲಿದ್ದಾರೆ (ಜಾಮೀನಿನಲ್ಲಿದ್ದಾರೆ) ಎಂದು ಇಂಡಿಯಾ ಒಕ್ಕೂಟದ ನಾಯಕರನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದರು.
ರಾಜಸ್ಥಾನದ ಜಲಾವರ್‌ನಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ನಡ್ಡಾ ಅವರು, “ಇಂಡಿ (ಇಂಡಿಯಾ) ಒಕ್ಕೂಟವು ‘ಭ್ರಷ್ಟಾಚಾರ ಉಳಿಸಿ ಮೈತ್ರಿ’ ಆಗಿದೆ. ಈ ಒಕ್ಕೂಟದಲ್ಲಿ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಸಚಿವರುಗಳೆಲ್ಲರೂ ಒಂದೇ ಕುಟುಂಬದವರಾಗಿರುವ ಪಕ್ಷವಿದೆ. ಇದು ಕುಟುಂಬಗಳ ಪಕ್ಷ” ಎಂದು ಟಾಂಗ್ ನೀಡಿದರು.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ| ರಾಹುಲ್ ಗಾಂಧಿ ವಿರುದ್ಧದ ಬಿಜೆಪಿ ಅಭ್ಯರ್ಥಿ ಮೇಲಿದೆ 242 ಪ್ರಕರಣಗಳು!
ಇನ್ನು “ಕಾಂಗ್ರೆಸ್ ಎಲ್ಲೆಡೆ ಹಗರಣಗಳನ್ನು ಮಾಡಿದೆ” ಎಂದು ಆರೋಪಿಸಿದ ಬಿಜೆಪಿ ಅಧ್ಯಕ್ಷರು, “ರಾಹುಲ್ ಗಾಂಧಿ ಜಾಮೀನಲ್ಲಿ ಹೊರಗಿರುವುದಲ್ಲವೇ?, ಸೋನಿಯಾ ಗಾಂಧಿ, ಚಿಂದಂಬರಂ, ಎಎಪಿ ಸಂಸದ ಸಂಜಯ್ ಸಿಂಗ್ ಜಾಮೀನಿನಲ್ಲಿ ಹೊರಗಿರುವುದಲ್ಲವೇ, ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಜೈಲಿನಲ್ಲಿದ್ದಾರೆ ಅಲ್ವೆ” ಎಂದು ಛೇಡಿಸಿದರು.
ಇನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿಪಕ್ಷ ನಾಯಕರುಗಳನ್ನು ಬಂಧಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯಲೆಂದೇ ಚುನಾವಣೆ ಸಮೀಪಿಸುತ್ತಿರುವಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ ಎಂದು ಕೇಜ್ರಿವಾಲ್ ಪರ ವಕೀಲ ಆರೋಪಿಸಿದ್ದಾರೆ. ಜರ್ಮನಿ, ಅಮೆರಿಕಾ, ವಿಶ್ವ ಸಂಸ್ಥೆಯು ಕೇಜ್ರಿವಾಲ್ ಬಂಧನದ ಬಳಿಕ “ನ್ಯಾಯಯುತ ತನಿಖೆ ನಡೆಯಲಿ” ಎಂದು ಹೇಳಿಕೆ ನೀಡಿದೆ.