ದೆಹಲಿ, ಯುಪಿ ಪೊಲೀಸರ ಕಿರುಕುಳ; ಕರ್ನಾಟಕ ಸರ್ಕಾರದ ನಿಷ್ಕ್ರಿಯತೆಗೆ ಖಂಡನೆ

Date:

Advertisements

ವಕೀಲರು, ಹೋರಾಟಗಾರರು, ವಿದ್ಯಾರ್ಥಿಗಳು ಸೇರಿದ ನಿಯೋಗದಿಂದ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ

ನಾಗರಿಕ ಹಕ್ಕುಗಳ ರಕ್ಷಣೆ ಸಂಘಟನೆಯ (ಎಪಿಸಿಆರ್‌) ರಾಷ್ಟ್ರೀಯ ಕಾರ್ಯದರ್ಶಿ ನದೀಂ ಖಾನ್‌ ಅವರ ವಿಚಾರವಾಗಿ ದೆಹಲಿ ಪೊಲೀಸರು, ಆಲ್ಟ್‌ ನ್ಯೂಸ್ ಸಹಸಂಸ್ಥಾಪಕ ಮೊಹಮ್ಮದ್ ಝುಬೇರ್‌ ವಿಚಾರದಲ್ಲಿ ಉತ್ತರ ಪ್ರದೇಶದ ಪೊಲೀಸರು ಕಾನೂನು ಉಲ್ಲಂಘನೆ ಮಾಡುತ್ತಿರುವುದನ್ನು ಖಂಡಿಸಿ, ರಾಜ್ಯ ಸರ್ಕಾರ ಈ ಸಂಬಂಧ ನಿಷ್ಕ್ರಿಯವಾಗಿರುವುದನ್ನು ಪ್ರಶ್ನಿಸಿ ಹಾಗೂ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿ ವಕೀಲರು, ಹೋರಾಟಗಾರರು, ವಿದ್ಯಾರ್ಥಿಗಳು ಇದ್ದ ನಿಯೋಗವು ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರವನ್ನು ಸಲ್ಲಿಸಿದೆ.

ದೆಹಲಿ ಮತ್ತು ಉತ್ತರ ಪ್ರದೇಶದ ಪೊಲೀಸರು ಬೆಂಗಳೂರಿಗೆ ಬಂದು ಇಲ್ಲಿನ ಪೊಲೀಸರ ಅನುಮತಿ ಪಡೆಯದೆ ಕಾನೂನುಬಾಹಿರವಾಗಿ ನದೀಂ ಮತ್ತು ಝುಬೇರ್ ಅವರನ್ನು ಬಂಧಿಸಲು ಯತ್ನಿಸಿದ್ದರು. ಝುಬೇರ್ ಅವರ ಪ್ರಕರಣದಲ್ಲಿ ಯುಪಿ ಪೊಲೀಸರು 2024ರ ಅಕ್ಟೋಬರ್ 27ರಂದು, ನದೀಂ ಪ್ರಕರಣದಲ್ಲಿ 2024ರ ನವೆಂಬರ್‌ 30ರಂದು ದೆಹಲಿಯ ಶಾಹೀನ್ ಬಾಗ್ ಪೊಲೀಸರು ಅಕ್ರಮ ಕೃತ್ಯ ಎಸಗಿದ್ದಾರೆ. ಈ ವಿಚಾರವಾಗಿ ರಾಜ್ಯ ಪೊಲೀಸ್ ಇಲಾಖೆ ಗಂಭೀರವಾಗಿ ಕಾನೂನು ಕ್ರಮ ಜರುಗಿಸಬೇಕು ಎಂದು ನಿಯೋಗ ಆಗ್ರಹಿಸಿದೆ.

Advertisements

ರಾಜ್ಯ ಪೊಲೀಸ್ ಕಚೇರಿ ಎದುರು ಮಾಧ್ಯಮಗಳ ಜೊತೆ ಮಾತನಾಡಿದ ಅಡ್ವೊಕೇಟ್ ವಿನಯ್ ಶ್ರೀನಿವಾಸ್, “ಮೂರು ವರ್ಷಗಳ ಹಿಂದೆ ದೆಹಲಿ ಪೊಲೀಸರು ಬೆಂಗಳೂರಿಗೆ ಬಂದು ಇಲ್ಲಿನ ನಿವಾಸಿ ದಿಶಾ ರವಿ ಅವರನ್ನು ಅಕ್ರಮವಾಗಿ ಬಂಧಿಸಿದ್ದರು. ಈಗ ಝುಬೇರ್ ಮತ್ತು ನದೀಂ ಖಾನ್ ಅವರ ಪ್ರಕರಣಗಳಲ್ಲೂ ಇದೇ ಪುನರಾವರ್ತನೆ ಆಗುತ್ತಿದೆ. ಕರ್ನಾಟಕ ಪೊಲೀಸರು ಏನು ಮಾಡುತ್ತಿದ್ದಾರೆ, ಬೇರೆ ರಾಜ್ಯದ ಪೊಲೀಸರು ಇಲ್ಲಿಗೆ ಬಂದು ಕಾನೂನು ಬಾಹಿರವಾಗಿ ಬಂಧಿಸಲು ಏಕೆ ಯತ್ನಿಸುತ್ತಿದ್ದಾರೆ” ಎಂದು ಪ್ರಶ್ನಿಸಿದರು.

“ಪ್ರಿಯಾ ಇಂಡೋರಿಯಾ ವರ್ಸಸ್ ಕರ್ನಾಟಕ ಮತ್ತು ಇತರರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪು, ಸಂದೀಪ್‌ ಕುಮಾರ್ ವರ್ಸಸ್ ದೆಹಲಿ ಸರ್ಕಾರ ನಡುವಿನ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಅಂತರರಾಜ್ಯಗಳಲ್ಲಿನ ಅಕ್ರಮ ಬಂಧನಗಳನ್ನು ನಿರ್ಬಂಧಿಸಿವೆ. ಈ ತೀರ್ಪುಗಳ ಪ್ರಕಾರ ಒಂದು ರಾಜ್ಯದ ಪೊಲೀಸರು ಇನ್ನೊಂದು ರಾಜ್ಯಕ್ಕೆ ಹೋಗಿ ಆರೋಪಿಯನ್ನು ಬಂಧಿಸುವ ಮುನ್ನ ಅಲ್ಲಿನ ಮ್ಯಾಜಿಸ್ಟ್ರೇಟ್ ಬಳಿ ಟ್ರಾನ್ಸಿಟ್ ರಿಮ್ಯಾನ್ಡ್ ಕಾಪಿ ಅಥವಾ ಹಿರಿಯ ಅಧಿಕಾರಿಗಳ ಲಿಖಿತ ಅನುಮತಿ ಪಡೆಯಬೇಕು, ಕೇಸ್ ಡೈರಿಯಲ್ಲಿ ನಮೂದಿಸಬೇಕು ಇತ್ಯಾದಿ ನಿಯಮಗಳಿವೆ. ಇಷ್ಟಾದರೂ ಇವರು ಹೇಗೆ ಕರ್ನಾಟಕಕ್ಕೆ ಬಂದರು? ಇದು ನಮ್ಮ ಒಕ್ಕೂಟದ ಉಲ್ಲಂಘನೆ, ನಾವು ಇದನ್ನು ಡಿಜಿಪಿಗೆ ಕೇಳುತ್ತಿದ್ದೇವೆ” ಎಂದು ವಿವರಿಸಿದರು.

ಇದನ್ನೂ ಓದಿರಿ: ದಿಲ್ಲಿ ಪೊಲೀಸರಿಂದ ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಅಕ್ರಮ ಬಂಧನಕ್ಕೆ ಯತ್ನ: ಎಪಿಸಿಆರ್ ಖಂಡನೆ

“ಶಾಹೀನ್ ಅಬ್ದುಲ್ಲಾ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ದ್ವೇಷ ಭಾಷಣಗಳ ಕಡಿವಾಣಕ್ಕೆ ಮಹತ್ವದ ಸೂಚನೆಗಳನ್ನು ನೀಡಿದೆ. ಅದರನ್ವಯ ಸ್ವಯಂಪ್ರೇರಿತ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಳ್ಳಬೇಕಾಗುತ್ತದೆ. ಆದರೆ ರಾಜ್ಯದಲ್ಲಿ ದ್ವೇಷ ಭಾಷಣಗಳು ಹೆಚ್ಚುತ್ತಿವೆ. ಯಾರಾದರೂ ದೂರು ಕೊಟ್ಟರೆ ಮಾತ್ರ ಪ್ರಕರಣ ದಾಖಲಿಸುತ್ತಾರೆ, ಇಲ್ಲವಾದರೆ ಸುಮ್ಮನಿರುತ್ತಾರೆ. ದಾಖಲಾದ ಎಫ್‌ಐಆರ್‌ಗಳು ತೆರವಾಗುತ್ತಿವೆ ಅಥವಾ ತಡೆಗೆ ಒಳಗಾಗುತ್ತಿವೆ. ಈ ವಿಚಾರವಾಗಿ ಪೊಲೀಸ್ ಇಲಾಖೆ ಏನು ಮಾಡುತ್ತಿದೆ?” ಎಂದು ಆತಂಕ ವ್ಯಕ್ತಪಡಿಸಿದರು.

ಹೋರಾಟಗಾರ ತನ್ವೀರ್ ಮಾತನಾಡಿ, “ಸರ್ವಜನಾಂಗದ ಶಾಂತಿಯ ತೋಟ ಎಂದು ಕರ್ನಾಟಕವನ್ನು ಬಣ್ಣಿಸುತ್ತಾರೆ. ಆದರೆ ಇಲ್ಲಿ ದ್ವೇಷ ಭಾಷಣ ಹೆಚ್ಚುತ್ತಿದೆ. ಯಾವುದೇ ಕ್ರಮ ಜರುಗಿಸುತ್ತಿಲ್ಲ. ಯಾರಾದರೂ ದೂರು ಕೊಡಲು ಹೋದರೆ ಪೊಲೀಸರು ತೊಂದರೆ ಕೊಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.

“ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ಬಣ್ಣ ಬದಲಾಗುತ್ತಿದೆ. ಅಲ್ಪಸಂಖ್ಯಾತರ ವಿಚಾರದಲ್ಲಿ ಸಾಕಷ್ಟು ವಿದ್ಯಮಾನಗಳಾಗುತ್ತಿವೆ. ದ್ವೇಷ ಬಿತ್ತುವವರ ವಿರುದ್ಧ ದಿಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ನಾವು ಆಶಿಸುತ್ತೇವೆ” ಎಂದು ತಿಳಿಸಿದರು.

ನಿಯೋಗದಲ್ಲಿ ಎಸ್.ಆರ್.ಶಶಾಂಕ್, ಶ್ರೀಲಕ್ಷ್ಮಿ, ಮಾನ್ವಿ, ಮೆಹದಿ, ರವಿ ಸೇರಿದಂತೆ ಎಪಿಸಿಆರ್‌ ಸದಸ್ಯರು ಇದ್ದರು. ಮನವಿ ಸಲ್ಲಿಕೆಗೆ ಮುನ್ನ ರಾಜ್ಯ ಪೊಲೀಸ್ ಕಚೇರಿ ಮುಖ್ಯದ್ವಾರದ ಬಳಿ ಘೋಷಣಾ ಫಲಕಗಳನ್ನು ಪ್ರದರ್ಶಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X