ಪ್ರವಾಸಿ ಮತ್ತು ಭಕ್ತಿ ತಾಣವಾಗಿರುವ ಉತ್ತರಾಖಂಡದ ಹರಿದ್ವಾರದಲ್ಲಿ ಪ್ರವಾಸಿಗರು ಮತ್ತು ಸ್ಥಳೀಯ ವ್ಯಾಪಾರಿಗಳ ನಡುವೆ ಶನಿವಾರ ಮಾರಾಮಾರಿ ನಡೆದಿದೆ. ಎರಡೂ ಗುಂಪುಗಳು ಕೋಲುಗಳು, ಬಡಿಗೆಗಳಲ್ಲಿ ರಕ್ತಸಿಕ್ತವಾಗಿ ಹೊದಾಡಿಕೊಂಡಿದ್ದಾರೆ. ಘಟನೆಯಲ್ಲಿ 6 ಮಂದಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಮೊದಲಿಗೆ, ಹರ್ ಕಿ ಪೌರಿ ಪ್ರದೇಶದಲ್ಲಿ ಪ್ರವಾಸಿಗರು ಮತ್ತು ವ್ಯಾಪಾರಿಗಳ ನಡುವೆ ಸಣ್ಣ ವಾಗ್ವಾದ ಆರಂಭವಾಗಿದ್ದು, ಬಳಿಕ ತೀವ್ರ ಸ್ವರೂಪ ಪಡೆದಿದೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ; ಒಬ್ಬ ವ್ಯಕ್ತಿ ದೊಣ್ಣೆ ಹಿಡಿದು ದಾಳಿ ಮಾಡುತ್ತಿರುವುದು ಕಂಡುಬಂದಿದೆ. ಆತನ ಬೆನ್ನಿನ ಮೇಲೂ ಗಾಯಗಳಾಗಿದ್ದು, ರಕ್ತ ಬಂದಿದೆ. ದಾಳಿ ಮಾಡುತ್ತಿದ್ದ ಆತನನ್ನು ಇತರ ಮೂವರು ಹಿಡಿಯುತ್ತಿರುವುದು ಮತ್ತು ಆತನ ಕಪಾಳಕ್ಕೆ ಹೊಡೆಯುವುದು ಕಾಣಿಸುತ್ತದೆ.
ಘಟನೆ ಸಂಬಂಧ ಪೊಲೀಸರು 6 ಮಂದಿಯನ್ನು ಬಂಧಿಸಿದ್ದಾರೆ.
“ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಭೀಕರತೆಯನ್ನು ಪಡೆದುಕೊಂಡಿದೆ. ಹರಿದ್ವಾರದ ಧಾರ್ಮಿಕ ಮೌಲ್ಯ ಮತ್ತು ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುವವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇಂತಹ ಪವಿತ್ರ ಸ್ಥಳಗಳಲ್ಲಿ, ದೇಶದಾದ್ಯಂತ ಭಕ್ತರು ಬರುವ ಈ ಜಾಗದಲ್ಲಿ, ಅಶಿಸ್ತು ಮತ್ತು ಅಶಾಂತಿಯನ್ನು ಹರಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹರಿದ್ವಾರ ಪೊಲೀಸ್ ಅಧಿಕಾರಿ ರಿತೇಶ್ ಶಾ ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಮುಂದಿನ ತನಿಖೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.