ತಮ್ಮ ನಿವಾಸದ ಎದುರು ಪಟಾಕಿ ಸಿಡಿಸುವುದನ್ನು ವಿರೋಧ ಮಾಡಿದ್ದಕ್ಕೆ ವೃದ್ದರೊಬ್ಬರಿಗೆ ಥಳಿಸಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮೃತರ ಪುತ್ರ ವಿನೋದ್ ಪೊಲೀಸರಿಗೆ ದೂರು ನೀಡಿದ್ದಾರೆ.
“ರಾಜು, ಧೀರಜ್ ಮತ್ತು ನಂದು ಎಂಬ ಮೂವರು ಯುವಕರು ಗುರುವಾರ ಸಂಜೆ ಫರಿದಾಬಾದ್‌ನ ಸೆಕ್ಟರ್ 18 ರ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿರುವ ನಮ್ಮ ನಿವಾಸದ ಮುಂದೆ ಪಟಾಕಿ ಸಿಡಿಸುತ್ತಿದ್ದರು. ಇದಕ್ಕೆ ನನ್ನ ತಂದೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಮಾತಿನ ಚಕಮಕಿ ನಡೆದಿದೆ” ಎಂದು ವಿನೋದ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಹರಿಯಾಣದಲ್ಲಿ ದಲಿತರಿಗೆ ಬಹಿಷ್ಕಾರ: ಮಾಜಿ ಡಿಜಿಪಿಗಳಿಂದ ಸ್ವತಂತ್ರ ತನಿಖೆಗೆ ಸುಪ್ರೀಂ ಆದೇಶ
“ವಾಗ್ವಾದ ನಡೆದಾಗ ನಾನು ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದೆ. ಆದರೆ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮೂವರು ವ್ಯಕ್ತಿಗಳು ಹಿಂತಿರುಗಿ ಮತ್ತೆ ನಮ್ಮ ಮನೆಯ ಮುಂದೆ ಪಟಾಕಿ ಸಿಡಿಸಲು ಪ್ರಾರಂಭಿಸಿದರು” ಎಂದು ದೂರಿನಲ್ಲಿ ವಿನೋದ್ ಉಲ್ಲೇಖಿಸಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿನೋದ್‌ನ ತಂದೆ ಮನೆಯಿಂದ ಹೊರಗೆ ಬಂದಿದ್ದಾರೆ. ಈ ವೇಳೆ ಮೂವರು ಆರೋಪಿಗಳು ವೃದ್ದ ವ್ಯಕ್ತಿಗೆ ಥಳಿಸಿದ್ದಾರೆ. ವಿನೋದ್ ಮತ್ತು ಅವರ ಪತ್ನಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಮೂವರು ಸೇರಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೂರುದಾರರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
