ಲೋಕಸಭೆ ಚುನಾವಣೆಯ ನಡುವೆ ಹರಿಯಾಣ ದ ಬಿಜೆಪಿ ಸರ್ಕಾರಕ್ಕೆ ರಾಜಕೀಯ ಅನಿಶ್ಚಿತತೆ ತಲೆದೋರಿದೆ. ಮೂವರು ಪಕ್ಷೇತರರು ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂಪಡೆದಿರುವುದಾಗಿ ಘೋಷಿಸಿದ್ದಾರೆ.
ಮೂವರು ಪಕ್ಷೇತರ ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್ ಅವರ ಉಪಸ್ಥಿತಿಯಲ್ಲಿ ರೋಹ್ಟಕ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದರು.
ಸರ್ಕಾರಕ್ಕೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯುತ್ತಿದ್ದು, ಕಾಂಗ್ರೆಸ್‌ಗೆ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ಗೊಂಡರ್ ಹೇಳಿದರು. “ರೈತರಿಗೆ ಸಂಬಂಧಿಸಿದ ವಿಷಯಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಸರ್ಕಾರದ ನಡೆ ವಿರುದ್ಧ ಅಸಮಾಧಾನಗೊಂಡು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ
ಮೂವರು ಸ್ವತಂತ್ರ ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಸಿಂಗ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂಪಡೆದು ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದಾಗಿ ಉದಯ್ ಭಾನು ತಿಳಿಸಿದರು.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಪ್ರಸ್ತುತ 88 ಸದಸ್ಯರ ಬಲ ಹೊಂದಿದೆ. ಇದರಲ್ಲಿ ಬಿಜೆಪಿಯ 40 ಸದಸ್ಯರಿದ್ದಾರೆ. ಬಿಜೆಪಿಗೆ ಈ ಹಿಂದೆ ಜೆಜೆಪಿ ಶಾಸಕರು, ಪಕ್ಷೇತರರ ಬೆಂಬಲವಿತ್ತು. ಆದರೆ, ಜೆಜೆಪಿ ಕೂಡಾ ಬೆಂಬಲ ಹಿಂಪಡೆದಿದ್ದು, ಇದೀಗ ಪಕ್ಷೇತರರು ಕೂಡಾ ಬೆಂಬಲ ವಾಪಸ್ ಪಡೆದಿದ್ದಾರೆ.
“ನಯಾಬ್ ಸಿಂಗ್ ಸೈನಿ ಸರ್ಕಾರ ಬಹುಮತವಿಲ್ಲದ ಸರ್ಕಾರವಾಗಿದೆ. ಒಂದು ನಿಮಿಷವೂ ಅಧಿಕಾರದಲ್ಲಿರಲು ಹಕ್ಕಿಲ್ಲದ ಕಾರಣ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು. ತಕ್ಷಣವೇ ವಿಧಾನಸಭಾ ಚುನಾವಣೆ ನಡೆಸಬೇಕು” ಎಂದು ಉದಯ್ ಭಾನು ಆಗ್ರಹಿಸಿದರು.
