ಹಸು ಕಳ್ಳಸಾಗಾಣಿಕೆ ಮಾಡುತ್ತಿದ್ದಾನೆಂಬ ಶಂಕೆ ಮೇಲೆ ಹರಿಯಾಣದ ಫರಿದಾಬಾದ್‌ನಲ್ಲಿ ಆರ್ಯನ್ ಮಿಶ್ರಾ ಎಂಬಾತನನ್ನು ಗೋರಕ್ಷಣೆಯ ಹೆಸರಿನಲ್ಲಿ ದುಷ್ಕರ್ಮಿಗಳ ಗುಂಪೊಂದು ಹತ್ಯೆಗೈದಿತ್ತು. ಇದೀಗ, ಕೊಲೆ ಆರೋಪಿ ಹೇಳಿದ್ದಾನೆಂಬ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹತ್ಯೆಗೀಡಾದ ಆರ್ಯನ್ ಮಿಶ್ರಾ ಅವರ ತಂದೆಯ ಬಳಿ ಕೊಲೆ ಆರೋಪಿ ಮೋನು ಮಾನೇಸರ್, ‘ಮುಸ್ಲಿಮನೆಂದು ಭಾವಿಸಿ ಬ್ರಾಹ್ಮಣನನ್ನು ಕೊಂದಿದ್ದಕ್ಕೆ ಪಶ್ವಾತಾಪ ಪಡುತ್ತೇನೆ’ ಎಂದಿದ್ದಾನೆ ಎಂದು ವರದಿಯಾಗಿದೆ.
ಕಳೆದ ತಿಂಗಳು (ಆಗಸ್ಟ್) 24ರ ಮುಂಜಾನೆ ಹರಿಯಾಣದ ಫರಿದಾಬಾದ್‌ನ ಗಢಪುರಿ ಟೋಲ್ ಬಳಿ ದುಷ್ಕರ್ಮಿಗಳ ಗುಂಪು 12ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಆರ್ಯನ್ ಮಿಶ್ರಾನನ್ನು 30 ಕಿ.ಮೀ ಬೆನ್ನಟ್ಟಿ, ಗುಂಡಿಕ್ಕಿ ಹತ್ಯೆಗೈದಿತ್ತು. ಹಸು ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾನೆಂಬ ಶಂಕೆಯ ಮೇಲೆ ಆತನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಮೋನು, ಸೌರಭ್, ಅನಿಲ್, ವರುಣ್, ಕೃಷ್ಣ ಮತ್ತು ಆದೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ, ಆರ್ಯನ್ ಮಿಶ್ರಾ ಅವರ ತಂದೆ ಸಿಯಾನಂದ್ ಮಿಶ್ರಾ ಅವರ ಹೇಳಿಕೆ ವೈರಲ್ ಆಗುತ್ತಿದ್ದು, “ಕೊಲೆ ಆರೋಪಿ ಮೋನು ಮಾನೇಸರ್‌ನನ್ನು ಜೈಲಿನಲ್ಲಿ ಭೇಟಿಯಾಗಿದ್ದೆ. ತನ್ನ ಮಗನನ್ನು ಮುಸ್ಲಿಂ ಹಸು ಕಳ್ಳಸಾಗಣೆದಾರನೆಂದು ತಪ್ಪಾಗಿ ಭಾವಿಸಿ ಹತ್ಯೆ ಮಾಡಿದ್ದಾಗಿ ಮೋನು ಹೇಳಿದ್ದಾನೆ” ಎಂದು ಮಿಶ್ರಾ ಹೇಳಿದ್ದಾರೆ.
“ನನ್ನ ಮಗ ಮುಸ್ಲಿಮನೆಂದು ಅವರು ಭಾವಿಸಿದ್ದರು. ಮುಸ್ಲಿಮನೆಂದು ಭಾವಿಸಿ ಬ್ರಾಹ್ಮಣನನ್ನು ಕೊಂದಿದ್ದಕ್ಕೆ ಪಶ್ಚಾತ್ತಾಪ ಪಡುತ್ತೇನೆಂದು ಮೋನು ಹೇಳಿದ್ದಾನೆ. ನನ್ನ ಪಾದಗಳನ್ನು ಮುಟ್ಟಿ ಕ್ಷಮೆ ಯಾಚಿಸಿದ್ದಾನೆ” ಎಂದು ಸಿಯಾನಂದ್ ಮಿಶ್ರಾ ಹೇಳಿದ್ದಾರೆ.
“ಆರೋಪಿಗಳ ಬಂಧನವು ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ, ನನಗೆ ಕೆಲವು ಪ್ರಶ್ನೆಗಳು ಕಾಡುತ್ತಿವೆ. ಅಂದು ಕಾರಿನಲ್ಲಿ ನನ್ನ ಮಗನೊಂದಿಗೆ ಇನ್ನೂ ಹಲವರಿದ್ದರು. ಆದರೆ, ಅವರು ನನ್ನ ಮಗನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಳಿದ ಯಾರಿಗೂ ಯಾವುದೇ ಅಪಾಯವಾಗಿಲ್ಲ. ಈ ಬಗ್ಗೆ ಗಂಭೀರ ತನಿಖೆ ನಡೆಯಬೇಕು” ಎಂದು ಆಗ್ರಹಿಸಿದ್ದಾರೆ.