ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಕೊಲೆಗೆ ಸಂಬಂಧಿಸಿದಂತೆ ಹರಿಯಾಣ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಸೋಮವಾರ ತಿಳಿಸಿದ್ದಾರೆ.
ಶನಿವಾರ ನರ್ವಾಲ್ ಅವರ ಮೃತದೇಹವು ಸೂಟ್‌ಕೇಸ್‌ನಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮೃತ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. ಆದರೆ ಕಾಂಗ್ರೆಸ್ ನಾಯಕರುಗಳು ಮಹಿಳೆಯು ಕಾಂಗ್ರೆಸ್ ಕಾರ್ಯಕರ್ತೆ ಎಂದು ತಿಳಿಸಿದ್ದರು. ಅದಾದ ಬಳಿಕ ಪೊಲೀಸರು ಗುರುತು ದೃಢಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾಂಗ್ರೆಸ್ ಕಾರ್ಯಕರ್ತೆ ಶವ ಸೂಟ್‌ಕೇಸ್‌ನಲ್ಲಿ ಪತ್ತೆ
ಸದ್ಯ ಪೊಲೀಸರು ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಹರಿಯಾಣ ಪೊಲೀಸ್ ಅಧಿಕಾರಿಯೋರ್ವರು, “ಸದ್ಯ ನಾವು ಓರ್ವ ಆರೋಪಿಯನ್ನು ಬಂಧಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.
ಇನ್ನು ನರ್ವಾಲ್ ಅವರ ಕುಟುಂಬಸ್ಥರು ಆರೋಪಿಗಳ ಬಂಧನವಾಗುವವರೆಗೂ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎಂದು ವರದಿಯಾಗಿದೆ. ನರ್ವಾಲ್ ರೋಹ್ಟಕ್‌ನ ವಿಜಯ ನಗರದ ನಿವಾಸಿಯಾಗಿದ್ದರು ಎಂದು ಹೇಳಲಾಗಿದೆ.
ಇದನ್ನು ಓದಿದ್ದೀರಾ? ಹರಿಯಾಣ, ಮಹಾರಾಷ್ಟ್ರ ಮತದಾರರ ಪಟ್ಟಿ ಬಿಡುಗಡೆ ಕೋರಿ ಕಾಂಗ್ರೆಸ್ ಅರ್ಜಿ: 3 ತಿಂಗಳಲ್ಲಿ ಇತ್ಯರ್ಥವೆಂದ ಇಸಿಐ
ನರ್ವಾಲ್ ಬಗ್ಗೆ ಮಾಹಿತಿ ನೀಡಿರುವ ಹರಿಯಾಣ ಕಾಂಗ್ರೆಸ್ ನಾಯಕರು, “ನರ್ವಾಲ್ ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತೆಯಾಗಿದ್ದರು. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿಯೂ ಭಾಗಿಯಾಗಿದ್ದರು. ಕಾನೂನು ಪದವಿ ಪಡೆಯುತ್ತಿದ್ದರು” ಎಂದು ತಿಳಿಸಿದ್ದಾರೆ.
ಈ ನಡುವೆ ನರ್ವಾಲ್ ರಾಜಕೀಯ ಪ್ರಗತಿಯನ್ನು ನೋಡಿ ಕಾಂಗ್ರೆಸ್‌ನ ಕೆಲವು ನಾಯಕರಿಗೆ ಇರಿಸುಮುರಿಸು ಇತ್ತು ಎಂದು ತಾಯಿ ಸವಿತಾ ಆರೋಪಿಸಿದ್ದಾರೆ. “ನನ್ನ ಮಗಳು ಶೀಘ್ರವಾಗಿ ರಾಜಕೀಯ ಪ್ರಗತಿ ಕಾಣುತ್ತಿರುವುದನ್ನು ನೋಡಿ ಅಸೂಯೆ ಪಡುತ್ತಿದ್ದ ಪಕ್ಷದೊಳಗಿನ ಯಾವುದೇ ನಾಯಕರು ಈ ಕೃತ್ಯ ಎಸಗಿರಬಹುದು. ನಮಗೆ ನ್ಯಾಯ ಸಿಗುವವರೆಗೂ ನಾವು ಅಂತ್ಯಸಂಸ್ಕಾರ ಮಾಡುವುದಿಲ್ಲ” ಎಂದಿದ್ದಾರೆ.
