ಸುಮಾರು 120ಕ್ಕೂ ಅಧಿಕ ಮಂದಿಯ ಸಾವಿಗೆ ಕಾರಣವಾದ ಹತ್ರಾಸ್ ಕಾಲ್ತುಳಿತ ಪ್ರಕರಣ ನ್ಯಾಯಾಂಗ ತನಿಖೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶಿಸಿದ್ದಾರೆ. ದುರಂತದ ಬಗ್ಗೆ ಅಲಹಾಬಾದ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಬ್ರಿಜೇಶ್ ಕುಮಾರ್ ಶ್ರೀವಾಸ್ತವ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಲಿದೆ.
ನಿವೃತ್ತ ಐಎಎಸ್ ಅಧಿಕಾರಿ ಹೇಮಂತ್ ರಾವ್ ಮತ್ತು ಮಾಜಿ ಐಪಿಎಸ್ ಅಧಿಕಾರಿ ಭವೇಶ್ ಕುಮಾರ್ ಸಿಂಗ್ ನ್ಯಾಯಾಂಗ ತನಿಖಾ ತಂಡದ ಇತರ ಸದಸ್ಯರಾಗಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳನ್ನು ಭೇಟಿ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್, “ನಾವು ಈ ವಿಚಾರದಲ್ಲಿ ಪಿತೂರಿಯ ದೃಷ್ಟಿಕೋನವನ್ನು ತಳ್ಳಿಹಾಕುವಂತಿಲ್ಲ. ಎಲ್ಲಾ ರೀತಿಯಲ್ಲಿಯೂ ಸಮಿತಿಯು ತನಿಖೆ ನಡೆಸಲಿದೆ” ಎಂದು ಹೇಳಿದೆ.
“ಸಮಿತಿಯು ಈ ತನಿಖೆಯಲ್ಲಿ ಪೂರ್ಣಗೊಳಿಸಿ ಎರಡು ತಿಂಗಳೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ. ಇಂತಹ ದುರ್ಘಟನೆಗಳು ಮರುಕಳಿಸದಂತೆ ತಡೆಯಲು, ಇಂತಹ ಘಟನೆಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನ್ಯಾಯಾಂಗ ಆಯೋಗವು ಸೂಚಿಸಲಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಹತ್ರಾಸ್ ಕಾಲ್ತುಳಿತ ದುರಂತ| ಮೃತರ ಸಂಖ್ಯೆ 121ಕ್ಕೆ ಏರಿಕೆ, ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ
ಇನ್ನು, “ಕಾಲ್ತುಳಿತ ಸಂಭವಿಸಿದ ಸಂದರ್ಭದಲ್ಲಿ ಭೋಲೆ ಬಾಬಾ ಅವರ ಸ್ವಯಂಸೇವಕರು ಅದರ ನಿರ್ವಹಣೆ ಮಾಡುತ್ತಿದ್ದರು. ಜಿಲ್ಲಾಡಳಿತದ ಅಧಿಕಾರಿಗಳಿಗೆ ಪೆಂಡಲ್ ಒಳಗೆ ಹೋಗಲು ಅವಕಾಶವಿರಲಿಲ್ಲ” ಎಂದು ಆಗ್ರಾ ವಲಯದ ಎಡಿಜಿ ಅನುಪಮ್ ಕುಲಶ್ರೇಷ್ಠ ನೇತೃತ್ವದ ವಿಶೇಷ ತನಿಖಾ ತಂಡವು ಸಲ್ಲಿಸಿದ ಆರಂಭಿಕ ವರದಿಯನ್ನು ಉಲ್ಲೇಖಿಸಿ ಯುಪಿ ಸಿಎಂ ಹೇಳಿದ್ದಾರೆ.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರೊಂದಿಗಿನ ಬಾಬಾನ ಚಿತ್ರಗಳು ಮತ್ತು ವೀಡಿಯೊಗಳನ್ನು ಉಲ್ಲೇಖಿಸಿದ ಆದಿತ್ಯನಾಥ್, ಇದು ಬಾಬಾ ಅವರ ರಾಜಕೀಯ ಸಂಪರ್ಕವನ್ನು ತೋರಿಸುತ್ತದೆ ಎಂದರು. “ಪೆಂಡಲ್ ಹೊರಗೆ ಪೊಲೀಸ್ ಸಿಬ್ಬಂದಿಗಳು ಇದ್ದರು. ಕಾಲ್ತುಳಿತದ ನಂತರ ಗಾಯಾಳುಗಳಿಗೆ ಸಹಾಯ ಮಾಡುವ ಪ್ರಯತ್ನವನ್ನು ಕೂಡಾ ಮಾಡದೆ ಬಾಬಾ ಅವರ ಸ್ವಯಂಸೇವಕರು ಅಲ್ಲಿಂದ ಓಡಿಹೋಗಿದ್ದಾರೆ” ಎಂದು ಹೇಳಿದರು.
ಇನ್ನು ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಹೆಸರು ಉಲ್ಲೇಖಿಸದೆ ಇರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶ ಸರ್ಕಾರವೇ ಭೋಲೆ ಬಾಬಾರ ರಕ್ಷಣೆ ಮಾಡಲು ಯತ್ನಿಸುತ್ತಿದೆ. ಆದರೆ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಲಿಯುತ್ತಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಹತ್ರಾಸ್ ಕಾಲ್ತುಳಿತ ದುರಂತ | ಮೃತ ದೇಹಗಳನ್ನು ನೋಡಿ ಹೃದಯಾಘಾತದಿಂದ ಪೊಲೀಸ್ ಕಾನ್‌ಸ್ಟೆಬಲ್ ಸಾವು!
ಈ ಬಗ್ಗೆ ಮಾತನಾಡಿದ ಯೋಗಿ ಆದಿತ್ಯನಾಥ್, “ತನಿಖೆ ಮುಂದುವರೆದಂತೆ, ದುರಂತದ ಜವಾಬ್ದಾರಿ ಯಾರೆಂದು ಹೆಸರು ಸೇರಿಸಲಾಗುವುದು” ಎಂದು ಹೇಳಿದರು.
ಇನ್ನು ಬಾಬಾ ಪರಾರಿಯಾಗಿದ್ದು, ಪೊಲೀಸರು ಟ್ರಸ್ಟ್ ಮೇಲೆ ದಾಳಿ ಮಾಡಿದ್ದಾರೆ. ಬಾಬಾ ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ಹತ್ರಾಸ್ ಉಪ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕುಮಾರ್ ತಿಳಿಸಿದ್ದಾರೆ. ಬುಧವಾರ, ಮೈನ್‌ಪುರಿ ಜಿಲ್ಲೆಯ ರಾಮ್ ಕುಟಿರ್ ಚಾರಿಟೇಬಲ್ ಟ್ರಸ್ಟ್‌ನಲ್ಲಿರುವ ಬಾಬಾ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
#WATCH | Hathras stampede incident | Uttar Pradesh CM Yogi Adityanath says, “…The State Government and Central Government have announced monetary compensation too. The minor children of the innocent people who became victims of this incident, who are school students, will be… pic.twitter.com/R3e7M97B88
— ANI (@ANI) July 3, 2024