ಪ್ರಧಾನಿ ನರೇಂದ್ರ ಮೋದಿ ಒಮ್ಮೆ ಧರಿಸಿದ ಸೂಟ್‌ಗಳನ್ನು ಪುನಃ ಧರಿಸಿದ್ದನ್ನು ನೋಡಿದ್ದೀರಾ? ಅವರು ಧರಿಸುವ ಸೂಟ್‌ಗಳ ಬೆಲೆ ಲಕ್ಷ ಲಕ್ಷ ರೂ. ಬೆಲೆಯಿರುತ್ತದೆ ಎಂದು ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಪ್ರದೇಶದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ಲಕ್ಷ ಲಕ್ಷ ರೂ.ಗಳ ಸೂಟ್‌ಗಳನ್ನು ಧರಿಸುತ್ತಾರೆ. ಆದರೆ ನಾನು ಧರಿಸುವುದು ಒಂದು ಬಿಳಿ ಶರ್ಟ್ ಮಾತ್ರ ಎಂದು ಹೇಳಿದರು.
“ನಾನು ಪ್ರಧಾನಿ ಮೋದಿಯವರ ಭಾಷಣವನ್ನು ಕೇಳಿದ್ದೇನೆ, ಅವರು ಪ್ರತಿ ಭಾಷಣದಲ್ಲಿ ನಾನು ಒಬಿಸಿ ಸಮುದಾಯಕ್ಕೆ ಸೇರಿದವನು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಪದೇ ಪದೇ ಹೇಳುವ ಮೂಲಕ ಅವರು ಪ್ರಧಾನಿಯಾದರು. ನಾನು ಜಾತಿ ಆಧಾರಿತ ಜನಗಣತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗ ಅವರ ಭಾಷಣದಿಂದ ಜಾತಿ ಏಕೆ ಕಣ್ಮರೆಯಾಯಿತು ಎಂದು ನಿಮಗೆ ತಿಳಿದಿದೆಯೇ? ನಾನು ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದಾಗಿನಿಂದ, ಮೋದಿ ಭಾರತದಲ್ಲಿ ಜಾತಿ ಇಲ್ಲ ಎಂದು ಹೇಳಲು ಪ್ರಾರಂಭಿಸಿದರು” ಎಂದು ರಾಹುಲ್ ಹೇಳಿದರು.
“ಜಾತಿ ಗಣತಿಯು ಜನರ ಜೀವನವನ್ನು ಬದಲಾಯಿಸುವ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಮಧ್ಯಪ್ರದೇಶ ಮತ್ತು ರಾಷ್ಟ್ರಮಟ್ಟದಲ್ಲಿ ಸಮೀಕ್ಷೆಯನ್ನು ನಡೆಸುತ್ತದೆ” ಎಂದು ಒತ್ತಿ ಹೇಳಿದರು.
ಇದೇ ಸಂದರ್ಭದಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ರಾಹುಲ್ ತರಾಟೆಗೆ ತೆಗೆದುಕೊಂಡರು.
ಈ ಸುದ್ದಿ ಓದಿದ್ದೀರಾ? ‘ನೀವು ಬೆಂಕಿಯೊಂದಿಗೆ ಆಟವಾಡುತ್ತಿದ್ದೀರಿ’: ಮಸೂದೆ ವಿಳಂಬದ ಬಗ್ಗೆ ಪಂಜಾಬ್, ತಮಿಳುನಾಡು ರಾಜ್ಯಪಾಲರಿಗೆ ಸುಪ್ರೀಂ ಎಚ್ಚರಿಕೆ
“ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ, ಮಧ್ಯಪ್ರದೇಶದಲ್ಲಿ ಒಬಿಸಿಗಳ ನಿಖರ ಸಂಖ್ಯೆಯನ್ನು ತಿಳಿಯಲು ಜಾತಿ ಗಣತಿಯನ್ನು ನಡೆಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇದು ಎಲ್ಲ ಇತರ ಹಿಂದುಳಿದ ವರ್ಗಗಳ ಸಂಖ್ಯೆಯನ್ನು ಬಹಿರಂಗಪಡಿಸುವ ಎಕ್ಸ್-ರೇನಂತಿದೆ. ಅದರ ಪ್ರಕಾರ ಶೋಷಿತರ ಕಲ್ಯಾಣಕ್ಕಾಗಿ ನೀತಿಗಳನ್ನು ರೂಪಿಸಲಾಗುವುದು” ಎಂದು ರಾಹುಲ್ ಗಾಂಧಿ ಹೇಳಿದರು.
“ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರಮಟ್ಟದಲ್ಲಿ ಜಾತಿ ಗಣತಿಯನ್ನು ಸಹ ನಡೆಸಲಿದೆ. ಈ ಕಾರ್ಯಕ್ರಮವು ಜನರ “ಕ್ರಾಂತಿಕಾರಿ ಮತ್ತು ಜೀವನವನ್ನು ಬದಲಾಯಿಸುವ ಹೆಜ್ಜೆಯಾಗಿದೆ” ಎಂದರು.
“ನಮ್ಮ ದೇಶದ ಯುವಕರು ಸಮರ್ಥರಿದ್ದಾರೆ. ಈ ದೇಶವನ್ನು ಬಲಪಡಿಸಲು ಬಯಸುತ್ತಾರೆ. ಆದರೆ ಅವರಿಗೆ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ” ಎಂದು ರಾಹುಲ್ ಅವರು ಹೇಳಿದರು.
ನವೆಂಬರ್ 17 ರಂದು 230 ಕ್ಷೇತ್ರಗಳ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದೆ.