ವೇಮುಲ ಆತ್ಮಹತ್ಯೆ; ಅಂದಿನ ವಿ.ಸಿ. ಅಪ್ಪಾರಾವ್ ಅವರನ್ನು ಕುವೆಂಪು ವಿವಿಗೆ ಕರೆದವರು ಯಾರು?

Date:

Advertisements

ರೋಹಿತ್ ಚಕ್ರವರ್ತಿ ವೇಮುಲ ಎಂಬ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಾಗ ಮತ್ತು ಆನಂತರ ಹೈದರಾಬಾದ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಡಾ. ಅಪ್ಪಾರಾವ್ ಪೊದಿಲೆ ಅವರನ್ನು ಮೊನ್ನೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಲಾಗಿತ್ತು.

ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶರತ್ ಅನಂತಮೂರ್ತಿ ಅವರು ಈ ವಿಚಾರಸಂಕಿರಣದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಾಮಾಜಿಕ, ಆರ್ಥಿಕ ಅಥವಾ ಧಾರ್ಮಿಕ ಹಿನ್ನೆಲೆಯ ಆಧಾರದಲ್ಲಿ ವಿದ್ಯಾರ್ಥಿಗಳನ್ನು ತಾರತಮ್ಯದಿಂದ ಕಾಣುವಂತಿಲ್ಲ ಎಂಬ ‘ರೋಹಿತ್ ವೇಮುಲ ಕಾಯ್ದೆ’ ಜಾರಿಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿರುವ ಹಂತದಲ್ಲಿ ಅಪ್ಪಾರಾವ್ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದು ವಿಶೇಷವೇ ಸರಿ.

Advertisements

ದಲಿತರು, ಆದಿವಾಸಿಗಳು, ಇತರೆ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕು ಮತ್ತು ಆತ್ಮಗೌರವವನ್ನು ಸಂರಕ್ಷಿಸುವುದು ಈ ಕಾಯ್ದೆಯ ಉದ್ದೇಶ. ಕಾಂಗ್ರೆಸ್ ಪಕ್ಷ ತಾನೇ ನೀಡಿದ್ದ ಈ ಚುನಾವಣಾ ಭರವಸೆಯನ್ನು ಇನ್ನೂ ಈಡೇರಿಸಬೇಕಿದೆ.

ಕುವೆಂಪು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ 2024ರಲ್ಲಿ ಅಧಿಕಾರ ವಹಿಸಿಕೊಳ್ಳುವ ಮುನ್ನ 2017ರಿಂದ 2024ರ ಅವಧಿಯಲ್ಲಿ ಡಾ.ಶರತ್ ಅನಂತಮೂರ್ತಿ ಅವರು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸಿದ್ದರು. ಅಪ್ಪಾರಾವ್ ಪೊದಿಲೆ ಅವರು  2021ರ ಜೂನ್ ತನಕ ಇದೇ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು.

ಗುರುವಾರ (ಏಪ್ರಿಲ್ 10) ಮತ್ತು ಶುಕ್ರವಾರ (ಏ.11) ನಡೆದ ಈ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಪೊದಿಲೆ ಉದ್ಘಾಟಿಸಿದರು ಮತ್ತು ಭಾಷಣ ಮಾಡಿದರು ಕೂಡ. ಅಮೃತ್ ನೋನಿ ಎಂಬ ಖಾಸಗಿ ಔಷಧ ಕಂಪನಿಯೊಂದು ಈ ವಿಚಾರಸಂಕಿರಣದ ಪ್ರಾಯೋಜಕತ್ವ ವಹಿಸಿಕೊಂಡಿತ್ತು. ಈ ಇಡೀ ವಿಚಾರಸಂಕಿರಣ ನೋನಿ ಸಸ್ಯೌಷಧ ಕುರಿತದ್ದೇ ಆಗಿತ್ತು.
ಕಡೆಗೆ ರೋಹಿತ್ ವೇಮುಲ ಹಿಂದುಳಿದ ಜಾತಿಗೆ ಸೇರಿದ್ದನೇ ವಿನಾ ದಲಿತನಲ್ಲ ಎಂಬುದಾಗಿ ಪೊಲೀಸರು 2021ರಲ್ಲೇ ಮುಗಿತಾಯದ ವರದಿ ಸಲ್ಲಿಸಿದ್ದರು. ಆದರೆ ಈ ವರದಿ ಬೆಳಕಿಗೆ ಬಂದದ್ದು 2024ರಲ್ಲಿ. ಅಪ್ಪಾರಾವ್ ಸೇರಿದಂತೆ ಉಳಿದವರನ್ನೂ ಆರೋಪಮುಕ್ತರೆಂದು ನ್ಯಾಯಾಲಯ ಸಾರಿತ್ತು.

ವೇಮುಲ ತನ್ನ ಜಾತಿ ಪ್ರಮಾಣಪತ್ರವನ್ನು ಫೋರ್ಜರಿ ಮಾಡಿದ್ದನೆಂದೂ, ಈ ಸಂಗತಿ ಬೆಳಕಿಗೆ ಬರುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲಾದ ತಮ್ಮ ಕ್ಲೋಶರ್ ರಿಪೋರ್ಟ್ ನಲ್ಲಿ ಹೇಳಿದ್ದರು.

ಯೂನಿವರ್ಸಿಟಿ ಆಫ್ ಹೈದರಾಬಾದ್ ಎಂಬ ಕೇಂದ್ರೀಯ ವಿವಿಯ ವೇಮುಲ ಆತ್ಮಹತ್ಯೆ ಮಾಡಿಕೊಂಡದ್ದು 2016ರ ಜನವರಿ 17ರಂದು. ಮರುವರ್ಷ 2017ರಲ್ಲಿ ಡಾ.ಶರತ್ ಅನಂತಮೂರ್ತಿ ಈ ವಿವಿಯ ಭೌತಶಾಸ್ತ್ರದ ಪ್ರೊಫೆಸರ್ ಆಗಿ ನೇಮಕಗೊಂಡಿದ್ದರು..

2016ರ ಆ ದಿನಗಳು….

ವೇಮುಲನ ಪಿಎಚ್.ಡಿ. ಮಾಸಿಕ ಸ್ಟೈಪೆಂಡ್ 25,000 ರುಪಾಯಿಗಳ ಪಾವತಿಯನ್ನು 2015ರ ಜುಲೈ ನಿಂದ ಡಿಸೆಂಬರ್ ಅವಧಿಯಲ್ಲಿ ಸ್ಥಗಿತಗೊಳಿಸಿತ್ತು ಹೈದರಾಬಾದ್ ವಿವಿ. ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಹೆಸರಿನಲ್ಲಿ ಕ್ಯಾಂಪಸಿನಲ್ಲಿ ಹಲವು ಸಂಗತಿಗಳು ಸಮಸ್ಯೆಗಳನ್ನು ಎತ್ತಿದ್ದಕ್ಕಾಗಿ ಈ ‘ಶಿಕ್ಷೆ’ ನೀಡಲಾಗಿತ್ತು ಎಂಬುದು ಆತನ ಮಿತ್ರರ ಆರೋಪ. ಕಡತಗಳ ವಿಲೇವಾರಿಯಲ್ಲಿ ನಡೆದ ವಿಳಂಬವೇ ಪಾವತಿ ವಿಳಂಬಕ್ಕೆ ಕಾರಣವೆಂದು ಆನಂತರ ವಿವಿ ಸ್ಪಷ್ಟೀಕರಣ ನೀಡಿತ್ತು. ಎಬಿವಿಪಿಯ ಮುಖಂಡನನ್ನು ಥಳಿಸಿದ್ದನೆಂಬ ಆಪಾದನೆಯ ಮೇರೆಗೆ ವೇಮುಲನ ವಿರುದ್ಧ ವಿಚಾರಣೆಯನ್ನೂ ನಡೆಸಿತ್ತು ವಿವಿ. 2017ರ ಡಿಸೆಂಬರ್ 17ರಂದು ವೇಮುಲ ಮತ್ತು ಇತರೆ ನಾಲ್ವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಯಿತು.

2016ರ ಜನವರಿಯಲ್ಲಿ ಪ್ರತಿಭಟನೆಯ ಪ್ರಕ್ಷುಬ್ದ ವಾತಾವರಣ ಉಂಟಾಗಿತ್ತು. ವಿವಿಯ ಹಾಸ್ಟೆಲ್ ಮತ್ತು ಸಾರ್ವಜನಿಕ ಆವರಣಗಳಿಂದ ಐವರು ವಿದ್ಯಾರ್ಥಿಗಳನ್ನು ನಿಷೇಧಿಸಲಾಗಿತ್ತು. ಜನವರಿ 14ರ ಈ ನಿಷೇಧದ ಮೂರು ದಿನಗಳ ತರುವಾಯ ಜನವರಿ 17ರಂದು ಈ ಐವರು ವಿದ್ಯಾರ್ಥಿಗಳ ಪೈಕಿ ರೋಹಿತ್ ವೇಮುಲ ಆತ್ಮಹತ್ಯೆ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆಯ ಬ್ಯಾನರ್ ನ ಉರುಳಿಗೆ ಕೊರಳು ನೀಡಿದ್ದ. ತನ್ನ ಆತ್ಮಹತ್ಯೆಗೆ ‘ವ್ಯವಸ್ಥೆ’ಯೇ ಕಾರಣವೆಂದೂ ತನ್ನನ್ನು ಯಾರೂ ಪ್ರಚೋದಿಸಿಲ್ಲವೆಂದೂ ಮರಣಪತ್ರದಲ್ಲಿ ಹೇಳಿದ್ದ. ಕಾರ್ಲ್ ಸೆಗಾನ್ ನಂತೆ ಜಗತ್ಪ್ರಸಿದ್ಧ ವಿಜ್ಞಾನ ಲೇಖಕನಾಗುವ ತನ್ನ ಬಯಕೆಯನ್ನು ತಿಳಿಸಿದ್ದ. ರೋಹಿತ್ ಆತ್ಮಹತ್ಯೆಯು ಸಾಂಸ್ಥಿಕ ಹತ್ಯೆ ಎಂದು ಬಹುಜನ ಸಮಾಜ ಪಾರ್ಟಿಯ ನಾಯಕಿ ಕುಮಾರಿ ಮಾಯಾವತಿ ಖಂಡಿಸಿದ್ದರು. ಪ್ರಪಂಚದ ನಾನಾ ಭಾಗಗಳ 120 ಮಂದಿ ಅಕಾಡೆಮಿಕ್ ಗಣ್ಯರು ಹೈದರಾಬಾದ್ ವಿವಿ ಉಪಕುಲಪತಿಗೆ ಪತ್ರ ಬರೆದು, ರೋಹಿತ್ ಆತ್ಮಹತ್ಯೆಯಲ್ಲಿ ವಿವಿ ಪಾತ್ರವನ್ನು ಪ್ರತಿಭಟಿಸಿದ್ದರು.

ದೇಶದಾದ್ಯಂತ ಪ್ರತಿಭಟನೆಗಳು ಭುಗಿಲೆದ್ದಿದ್ದವು. ವಿಶ್ವವಿದ್ಯಾಲಯಗಳು ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಗಳಲ್ಲಿ ದಲಿತ ವಿದ್ಯಾರ್ಥಿಗಳ ವಿರುದ್ಧ ತೀವ್ರವಾಗಿರುವ ಜಾತಿ ತಾರತಮ್ಯ ಚರ್ಚೆಯ ಮುನ್ನೆಲೆಗೆ ಬಂದಿತ್ತು,  ನಾಲ್ವರು ವಿದ್ಯಾರ್ಥಿಗಳು ನೀಡಿದ ದೂರಿನಲ್ಲಿ ಪೊದಿಲೆ ವಿರುದ್ಧ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ ನಿಗ್ರಹ ಕಾಯಿದೆಯಡಿ ಆರೋಪ ಹೊರಿಸಲಾಗಿತ್ತು. ಪೊದಿಲೆ ಈ ಹಿಂದೆ (2011) ಚೀಫ್ ವಾರ್ಡನ್ ಆಗಿದ್ದಾಗಲೇ ದಲಿತ ವಿದ್ಯಾರ್ಥಿ ವಿರೋಧಿ ಎಂಬ ಆರೋಪ ಮಾಡಿತ್ತು ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ. ಹಾಸ್ಟೆಲ್ ನ ಮಾಸಿಕ ಶುಲ್ಕವನ್ನು ದಲಿತ ವಿದ್ಯಾರ್ಥಿಗಳು ಆಯಾ ತಿಂಗಳೇ ಪಾವತಿ ಮಾಡುತ್ತಿರಲಿಲ್ಲ. ವಿದ್ಯಾರ್ಥಿವೇತನ ಬಂದ ನಂತರ ಶುಲ್ಕ ಮತ್ತು ವೇತನದ ನಡುವಣ ಅಂತರದ ಮೊತ್ತವನ್ನು ಪಾವತಿ ಮಾಡುವ ಅವಕಾಶವಿತ್ತು. ಈ ಅವಕಾಶಕ್ಕೆ ಕಲ್ಲು ಹಾಕಿದ್ದರು ಪೊದಿಲೆ.

ಹಾಸ್ಟೆಲ್ ನ ಮೆಸ್ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಿದರು. ದಲಿತ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು.

ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಲಾಗಿತ್ತು. ಕೆಲ ವಿದ್ಯಾರ್ಥಿಗಳು ಪೊದಿಲೆ ಮತ್ತು ದಲಿತ ವಾರ್ಡನ್ ಕಪಾಳಕ್ಕೆ ಬಾರಿಸಿದ್ದರು. ಏಳು ಮಂದಿ ವಿದ್ಯಾರ್ಥಿಗಳನ್ನು ಪೊಲೀಸ್ ಠಾಣೆಗೆ ಒಯ್ಯಲಾಯಿತು. ಅಂದು ಕೇಂದ್ರ ಮಂತ್ರಿಯಾಗಿದ್ದ ಬಂಡಾರು ದತ್ತಾತ್ರೇಯ ಅವರು ಈ ಹುಡುಗರನ್ನು ನಕ್ಸಲೀಯರೆಂದು ಕರೆದು, ಶಿಕ್ಷಿಸುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದರೆನ್ನಲಾಗಿದೆ. ಹತ್ತು ಮಂದಿ ವಿದ್ಯಾರ್ಥಿಗಳನ್ನು ಎರಡು ವರ್ಷ ಕಾಲ ಅಮಾನತಿನಲ್ಲಿ ಇಡಲಾಯಿತು. ಅಮಾನತಿನ ಈ ಅವಧಿ ಇನ್ನೂ ಒಂದೂವರೆ ವರ್ಷಗಳ ಕಾಲ ಹೆಚ್ಚಿ ಮೂರೂವರೆ ವರ್ಷಗಳಿಗೆ ಹಿಗ್ಗಿತ್ತು.

ಕಾಲಾನುಕ್ರಮದಲ್ಲಿ ಈ ಹತ್ತು ವಿದ್ಯಾರ್ಥಿಗಳ ಪೈಕಿ ಎಂಟು ಮಂದಿ ನಾನಾ ವಿವಿಗಳಲ್ಲಿ ಪ್ರೊಫೆಸರ್ ಗಳಾದರು. ಒಬ್ಬಾತ ಬಹುರಾಷ್ಟ್ರೀಯ ಕಂಪನಿಯಲ್ಲಿ, ಮತ್ತೊಬ್ಬ ಎನ್.ಜಿ.ಒ.ದಲ್ಲಿ ಉದ್ಯೋಗ ಪಡೆದ.
ರೋಹಿತ್ ವೇಮುಲ ಆತ್ಮಹತ್ಯೆ (ಜನವರಿ 24) ದೇಶದ ಬಹುಸಂಖ್ಯಾತರ ಸಾಕ್ಷಿಪ್ರಜ್ಞೆಯನ್ನು ಕೆಲ ದಿನಗಳ ಕಾಲವಾದರೂ  ಅಲುಗಿಸಿತ್ತು. ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಈ ದಲಿತ ವಿದ್ಯಾರ್ಥಿ ಬರೆದಿಟ್ಟು ಹೋಗಿದ್ದ ಪತ್ರ ಮನ ಕಲಕಿತ್ತು. ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಮೋದಿ ಸರ್ಕಾರ ತಾನು ದಲಿತ ವಿರೋಧಿಯಲ್ಲ ಎಂದು ಸ್ಪಷ್ಟೀಕರಣ ನೀಡಬೇಕಾಗಿ ಬಂದಿತ್ತು.
ಅಂದಿನ ದಿನಗಳಲ್ಲಿ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದವರು ಡಾ.ಅಪ್ಪರಾವ್ ಪೊದಿಲೆ. ಈತನಿಗೆ ಪೂರ್ಣ ರಕ್ಷಣೆ ಒದಗಿಸಲಾಗಿತ್ತು. ಐದು ವರ್ಷಗಳ ಕಾಲ ಉಪಕುಲಪತಿಯಾಗಿ ಮುಂದುವರೆದ ಅಪ್ಪಾರಾವ್ ಕೂದಲೂ ಕೊಂಕಲಿಲ್ಲ. ಅಷ್ಟೇ ಅಲ್ಲ, ಈತನ ಅವಧಿಯನ್ನು ಒಂದೂವರೆ ವರ್ಷಗಳ ಕಾಲ ವಿಸ್ತರಿಸಲಾಯಿತು.

ದೇಶ ತನ್ನ ಮಹಾನ್ ಪುತ್ರನನ್ನು ಕಳೆದುಕೊಂಡಿದೆ ಎಂದಿದ್ದರು ಪ್ರಧಾನಿ ಮೋದಿ. ಆದರೆ ಮರುವರ್ಷವೇ ಅಪ್ಪಾರಾವ್ ಪೊದಿಲೆ ಅವರಿಗೆ ಇಂಡಿಯನ್ ಸೈನ್ಸ್ ಕಾಂಗ್ರೆಸ್ ವೇದಿಕೆಯಲ್ಲಿ ದಿ ಮಿಲೆನಿಯಂ ಗೌರವ ಫಲಕ ಪ್ರಶಸ್ತಿಯನ್ನು ಕೈಯಾರೆ ನೀಡಿದ್ದರು. ಭಾರತೀಯ ಜನತಾ ಪಾರ್ಟಿಯ ಬಾಲಬಡುಕ, ಸಾಬೀತುಪಡಿಸಲಾದ ಕೃತಿ ಚೋರ ಎಂದು ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಪ್ರಶಸ್ತಿ ನೀಡಿಕೆಯನ್ನು ಖಂಡಿಸಿ ಪತ್ರ ಬರೆದಿದ್ದರು. 

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X