ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್‌ನ (HDFC Bank) ಇಬ್ಬರು ಹಿರಿಯ ಅಧಿಕಾರಿಗಳು ಸಂಸ್ಥೆಯ ಗೌಪ್ಯ ಮತ್ತು ಮಾರುಕಟ್ಟೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿರುವುದು ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ ಎಂದು ‘ಬ್ಲೂಮ್‌ಬರ್ಗ್ ನ್ಯೂಸ್’ ವರದಿ ಮಾಡಿದೆ.
ಬ್ಯಾಂಕಿನ ವಾಣಿಜ್ಯ ಕಾರ್ಯತಂತ್ರಗಳು ಹಾಗೂ ಷೇರು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಬಹುದಾದ ಮಹತ್ವದ ಮಾಹಿತಿ ಸೋರಿಕೆಯಾಗುತ್ತಿರುವ ಕುರಿತು ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳಲ್ಲಿ ಅನುಮಾನ ಮೂಡಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಆಂತರಿಕ ತನಿಖೆಯನ್ನು ಆರಂಭಿಸಿತ್ತು. ತನಿಖೆಯ ವೇಳೆ ಇಬ್ಬರು ಹಿರಿಯ ಅಧಿಕಾರಿಗಳು ಈ ಅಕ್ರಮದಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಾಗಿದೆ.
ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ವಕ್ತಾರರು, “ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ವಾಸ್ತವಾಂಶಗಳನ್ನು ಸಂಗ್ರಹಿಸಿ, ಮೌಲ್ಯಮಾಪನ ಮಾಡಲು ಪ್ರಸ್ತುತ ಆಂತರಿಕ ಪರಾಮರ್ಶೆ ಪ್ರಕ್ರಿಯೆ ನಡೆಯುತ್ತಿದೆ. ಪರಿಶೀಲನೆ ಪೂರ್ಣಗೊಂಡ ನಂತರ ಲಭ್ಯವಾಗುವ ವರದಿಯ ಆಧಾರದ ಮೇಲೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ. ಆದರೆ, ತನಿಖಾ ಪ್ರಕ್ರಿಯೆಯ ಪಾವಿತ್ರ್ಯತೆ ಹಾಗೂ ವ್ಯಕ್ತಿಗಳ ಗೌಪ್ಯತೆಯನ್ನು ಕಾಪಾಡುವ ಉದ್ದೇಶದಿಂದ ಪ್ರಸ್ತುತ ನಡೆಯುತ್ತಿರುವ ತನಿಖೆಯ ಹೆಚ್ಚಿನ ವಿವರಗಳನ್ನು ನೀಡಲು ಬ್ಯಾಂಕ್ ನಿರಾಕರಿಸಿದೆ.
ಆಂತರಿಕ ತನಿಖೆಯ ಈ ಆಘಾತಕಾರಿ ಅಂಶಗಳನ್ನು ಈ ವರ್ಷದ ಆರಂಭದಲ್ಲೇ ಬ್ಯಾಂಕಿನ ಹಿರಿಯ ಆಡಳಿತ ಮಂಡಳಿ ಹಾಗೂ ಕೆಲ ಆಡಳಿತ ಮಂಡಳಿ ಸದಸ್ಯರ (Board Members) ಗಮನಕ್ಕೆ ತರಲಾಗಿತ್ತು. ಬಳಿಕ ಈ ಇಬ್ಬರೂ ಅಧಿಕಾರಿಗಳಿಗೆ ತನಿಖೆಯ ಫಲಿತಾಂಶಗಳ ಕುರಿತು ಅಧಿಕೃತವಾಗಿ ಮಾಹಿತಿ ನೀಡಲಾಗಿದೆ. ಆದರೆ, ಅವರ ವಿರುದ್ಧ ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ ಎಂದು ವರದಿ ಹೇಳಿದೆ.





