ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ದಂಪತಿಗಳ ಇಬ್ಬರು ಮಕ್ಕಳು ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರ ಮೃತದೇಹವನ್ನು ಊರಿಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಲಭ್ಯವಾಗದ ಕಾರಣ, ಪೋಷಕರು ಮೃತದೇಹಗಳನ್ನು ಹೆಗಲ ಮೇಲೆಯೇ ಹೊತ್ತೊಯ್ದಿರುವ ಹೃದಯ ವಿದ್ರಾವಕ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಆಹೇರಿ ತಾಲೂಕಿನ ಯುವ ದಂಪತಿಗಳು ಜ್ವರಕ್ಕೆ ಬಲಿಯಾದ ತಮ್ಮ ಮಕ್ಕಳ ಮೃತದೇಹವನ್ನು ಆಸ್ಪತ್ರೆಯಿಂದ 15 ಕಿಮೀ ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಹೆಗಲ ಮೇಲೆಯೇ ಹೊತ್ತೊಯ್ದಿದ್ದಾರೆ. ದಂಪತಿಗಳು ತಮ್ಮ 10 ವರ್ಷದೊಳಗಿನ ಇಬ್ಬರು ಅಪ್ರಾಪ್ತ ಬಾಲಕರ ಮೃತದೇಹಗಳನ್ನು ಹೆಗಲ ಮೇಲೆ ಹೊತ್ತು ಕಾಡಿನ ಹಾದಿಯಲ್ಲಿ ಸಾಗುತ್ತಿರುವ ವಿಡಿಯೋವನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಜಯ ವಾಡೆತ್ತಿವಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
“ಇಬ್ಬರು ಸಹೋದರರು ಜ್ವರದಿಂದ ಬಳಲುತ್ತಿದ್ದರು. ಆದರೆ ಅವರಿಗೆ ಸಮಯಕ್ಕೆ ಚಿಕಿತ್ಸೆ ಸಿಗಲಿಲ್ಲ. ಒಂದೆರಡು ಗಂಟೆಗಳಲ್ಲಿ, ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ. ಅವರ ಮೃತದೇಹಗಳನ್ನು ತಮ್ಮ ಗ್ರಾಮ ಪಟ್ಟಿಗಾಂವ್‌ಗೆ ಕೊಂಡೊಯ್ಯಲು ಆ್ಯಂಬುಲೆನ್ಸ್ ಕೂಡ ಇರಲಿಲ್ಲ. ಮಳೆಯಿಂದಾಗಿ ಕೆಸರುಮಯವಾಗಿದ್ದ ಹಾದಿಯಲ್ಲಿ ಮೃತದೇಹಗಳನ್ನು ಹೊತ್ತು ಪೋಷಕರು 15 ಕಿ.ಮೀ ನಡೆದು ಹೋಗಿದ್ದಾರೆ. ಗಡ್ಚಿರೋಲಿಯ ಆರೋಗ್ಯ ವ್ಯವಸ್ಥೆಯ ಕಠೋರ ವಾಸ್ತವು ಇಂದು ಮತ್ತೆ ಮುನ್ನೆಲೆಗೆ ಬಂದಿದೆ” ಎಂದು ವಾಡೆತ್ತಿವಾರ್ ಪೋಸ್ಟ್ ಮಾಡಿದ್ದಾರೆ.
ಮಹಾಯುತಿ ಸರ್ಕಾರದ ಭಾಗವಾಗಿರುವ ಬಿಜೆಪಿಯ ಫಡ್ನವೀಸ್ ಅವರು ಗಡ್ಚಿರೋಲಿಯ ಉಸ್ತುವಾರಿ ಸಚಿವರಾಗಿದ್ದಾರೆ. ಎನ್‌ಸಿಪಿ (ಅಜಿತ್ ಬಣ)ದ ಧರ್ಮರಾವ್ ಬಾಬಾ ಅತ್ರಮ್ ಅವರು ಆಹಾರ ಮತ್ತು ಔಷಧ (ಎಫ್‌ಡಿಎ) ಸಚಿವರಾಗಿದ್ದಾರೆ. ಈ ಇಬ್ಬರೂ ಮಹಾರಾಷ್ಟ್ರದಾದ್ಯಂತ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ರಾಜ್ಯವು ಪ್ರತಿದಿನ ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ಅವರಿಬ್ಬರೂ ನೆಲಮಟ್ಟದ ವಾಸ್ತವವನ್ನು ಅರಿಯಲು ಗಡ್ಚಿರೋಗಿಗೆ ಭೇಟಿ ನೀಡಬೇಕು. ಜನರು ಹೇಗೆ ಜೀವನ ನಡೆಸುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಬೇಕು” ಎಂದು ವಾಡೆತ್ತಿವಾರ್ ಹೇಳಿದ್ದಾರೆ.
ಒಂದು ವಾರದ ಹಿಂದೆ, ಸೆಪ್ಟೆಂಬರ್ 1 ರಂದು, ಮರಾವತಿಯ ಮೆಲ್ಘಾಟ್ ಬುಡಕಟ್ಟು ಪ್ರದೇಶದಲ್ಲಿ ಬುಡಕಟ್ಟು ಸಮುದಾಯದ ಮಹಿಳೆ ತನ್ನ ಮನೆಯಲ್ಲಿಯೇ ಸತ್ತ ಮಗುವಿಗೆ ಜನ್ಮ ನೀಡಿದ್ದರು. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಲು ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ದೊರೆಯದ ಕಾರಣ, ಹೆರಿಗೆ ನೋವಿನಿಂದ ಸಾವನ್ನಪ್ಪಿದ್ದರು.
“ಭಾನುವಾರ ಬೆಳಗ್ಗೆ ತಾಯಿ ಮತ್ತು ಮಗು – ಇಬ್ಬರ ಬದುಕಿನ ಹೋರಾಟ ಕೊನೆಗೊಂಡಿತು. ಅಸಮರ್ಪಕ ಆರೋಗ್ಯ ಮೂಲಸೌಕರ್ಯದಿಂದಾಗಿ ಎರಡೂ ಜೀವಗಳು ಬಲಿಯಾದವು. ‘ಲಡ್ಕಿ ಬೆಹೆನ್’ ಯೋಜನೆಯಡಿ ತಿಂಗಳಿಗೆ 1,500 ರೂ. ಪಾವತಿಸುವ ಮೂಲಕ ಮತ ಕೇಳುತ್ತಿರುವ ಸರ್ಕಾರ, ಯೋಜನೆಯ ಪ್ರಚಾರಕ್ಕಾಗಿ ಸಾಕಷ್ಟು ಹಣ ಸುರಿಯುತ್ತಿದೆ. ಅದೇ ಹಣವನ್ನು ಆ್ಯಂಬುಲೆನ್ಸ್ ಖರೀದಿಗಾಗಿ ಖರ್ಚು ಮಾಡಬಹುದಿತ್ತು” ಎಂದು ವಡೆಟ್ಟಿವಾರ್ ಹೇಳಿದ್ದಾರೆ.