72 ವರ್ಷದ ಅಜ್ಜಿಯೊಬ್ಬರು ತಮ್ಮ ಗಾಯಗೊಂಡ ಮೊಮ್ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸುಮಾರು ಅರ್ಧ ಗಂಟೆಗಳ ಕಾಲ ಡ್ರಿಪ್ ಬಾಟಲಿಯನ್ನು ಹಿಡಿದುಕೊಂಡು ನಿಂತಿದ್ದ ಮನಕಲಕುವ ಘಟನೆ ಮಧ್ಯಪ್ರದೇಶದ ಸತ್ನಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆ ಸಿಬ್ಬಂದಿ ಡ್ರಿಪ್ ಸ್ಟ್ಯಾಂಡ್‌ಅನ್ನು ನೀಡದ ಕಾರಣದಿಂದಾಗಿ, ಅಜ್ಜಿಯೇ ಡ್ರಿಪ್ ಬಾಟಲಿಯನ್ನು ಹಿಡಿದು ನಿಂತಿದ್ದರು ಎಂದು ವರದಿಯಾಗಿದೆ.
ರಸ್ತೆ ಅಪಘಾತಕ್ಕೀಡಾಗಿದ್ದ ಅಶ್ವನಿ ಮಿಶ್ರಾ ಅವರನ್ನು ಅಜ್ಜಿ ಆಸ್ಪತ್ರೆಗೆ ಕರೆತಂದಿದ್ದರು. ಆತನ ಸ್ಥಿತಿ ಗಂಭೀರವಾಗಿದ್ದ ಪರಿಣಾಮ, ಡ್ರಿಪ್ ಹಾಕಲಾಗಿತ್ತು. ಆದರೆ, ಡ್ರಿಪ್ ಸ್ಟ್ಯಾಂಡ್ ಲಭ್ಯವಿಲ್ಲವೆಂದು ಸಿಬ್ಬಂದಿಗಳು ಸ್ಟ್ಯಾಂಡ್‌ಅನ್ನು ಒದಗಿಸಲಾಗದೆ ಮೂಕ ಪ್ರೇಕ್ಷಕರಾಗಿದ್ದರು. ಈ ವೇಳೆ, ಡ್ರಿಪ್ ಬಾಟಲಿಯನ್ನು ಕೈಯಲ್ಲಿ ಹಿಡಿದು, ಬಾಲಟಲಿಯಲ್ಲಿದ್ದ ಗ್ಲೂಕೋಸ್ ಪೂರ್ತಿಯಾಗಿ ದೇಹಕ್ಕೆ ಇಳಿಯುವವರೆಗೂ ನಿಂತಿದ್ದರು ಎಂದು ತಿಳಿದುಬಂದಿದೆ.
ಆದಾಗ್ಯೂ, ಆಸ್ಪತ್ರೆಯಲ್ಲಿ ಡ್ರಿಪ್ ಸ್ಟ್ಯಾಂಡ್‌ಗಳ ಕೊರತೆಯಿಲ್ಲ. ಸಿಬ್ಬಂದಿಗಳ ಅಸಡ್ಡೆಯಿಂದ ಇಂತಹ ಪರಿಸ್ಥಿತಿ ಎದುರಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ದೃಢಪಡಿದ್ದಾರೆ.
ಈ ಲೇಖನ ಓದಿದ್ದೀರಾ?: 1947 – ಅಂದು ಭಾರತವು ಸ್ವಾತಂತ್ರ್ಯ ಗಳಿಸಿತು; ಇಂದು ಜಾತ್ಯತೀತ ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದೆ!
ಮಿಶ್ರಾ ಅವರನ್ನು ಕರೆತಂದ ಆ್ಯಂಬುಲೆನ್ಸ್ ಕೂಡ ಸುಸ್ಥಿತಿಯಲ್ಲಿ ಇರಲಿಲ್ಲ. ಹೀಗಾಗಿ, ಆ್ಯಂಬುಲೆನ್ಸ್‌ನಲ್ಲಿ ಬಂದರೂ, ಆತನ ಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಮಿಶ್ರಾ ಅವರನ್ನು ಆಸ್ಪತ್ರೆಯ ಗೇಟ್‌ನಲ್ಲಿ ಇಳಿಸಿದ ನಂತರ, ವಾಹನವು ಕೆಟ್ಟುಹೋಯಿತು. ಅದನ್ನು ಮತ್ತೆ ಸ್ಟಾರ್ಟ್ ಮಾಡಲು, ಪಕ್ಕದಲ್ಲಿದ್ದವರು ಅದನ್ನು ತಳ್ಳಬೇಕಾಯಿತು ಎಂದು ವರದಿಯಾಗಿದೆ.
ಪ್ರತಿದಿನ ನೂರಾರು ರೋಗಿಗಳನ್ನು ನಿಭಾಯಿಸುವ ಸರ್ಕಾರಿ ಜಿಲ್ಲಾ ಆಸ್ಪತ್ರೆಯು ಮೂಲಭೂತ ಸೌಲಭ್ಯಗಳು, ಸ್ಟ್ರೆಚರ್‌ಗಳು, ಹಾಸಿಗೆಗಳು ಹಾಗೂ ಸಕಾಲಿಕ ನೆರವನ್ನು ಒದಗಿಸದಿದ್ದಕ್ಕಾಗಿ ಪದೇ ಪದೇ ಟೀಕೆಗಳನ್ನು ಎದುರಿಸುತ್ತಿದೆ. ಇದೀಗ, ಮತ್ತೊಂದು ಘಟನೆ ನಡೆದಿದೆ.