ಉತ್ತರ ಭಾರತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಹಿಮಾಚಲ ಪ್ರದೇಶ, ಪಂಜಾಬ್, ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ರಾಜಸ್ಥಾನ, ಲಡಾಖ್, ಚಂಢೀಗಡದಲ್ಲಿ ದೆಹಲಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ. ಈಗಾಗಲೇ ತೀವ್ರ ಮಳೆಯಿಂದಾಗಿ ದೆಹಲಿಯಲ್ಲಿ ಯಮುನಾ ನದಿ ಅಪಾಯ ಮಟ್ಟವನ್ನು ದಾಟಿದ್ದು ಐಎಂಡಿ ಎಚ್ಚರಿಕೆ ನೀಡಿದೆ.
ಪಶ್ಚಿಮ ಹಿಮಾಲಯ ಮತ್ತು ಪಕ್ಕದ ಬೆಟ್ಟದ ತಪ್ಪಲುಗಳಲ್ಲಿ ಈಗಾಗಲೇ ಭಾರೀ ಮಳೆಯಿಂದಾಗಿ ಪ್ರವಾಹ ಸ್ಥಿತಿ ಉಂಟಾಗಿದೆ. ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ ಮತ್ತು ದೆಹಲಿಯಲ್ಲಿ ತೀವ್ರ ಪ್ರಮಾಣದಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಭಾರೀ ಮಳೆ: ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಈ ವರ್ಷ ಪೂರ್ವ ಮತ್ತು ಈಶಾನ್ಯದಲ್ಲಿ ಶೇಕಡ 17ರಷ್ಟು ಮಳೆ ಕೊರತೆಯಾದರೆ ಮಧ್ಯ ಭಾರತ ಮತ್ತು ದಕ್ಷಿಣ ಪರ್ಯಾಯ ದ್ವೀಪದಲ್ಲಿ ಶೇಕಡ 14ರಷ್ಟು ಮಳೆ ಹೆಚ್ಚಾಗಿದೆ. ಮಳೆ ಪ್ರಮಾಣ ಅಧಿಕವಾದ ಕಾರಣ ಉತ್ತರ ಭಾರತದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ನೂರಾರು ಮಂದಿ ಮಳೆಯಿಂದಾಗಿ ಉಂಟಾದ ಅವಘಡಕ್ಕೆ ಬಲಿಯಾಗಿದ್ದಾರೆ.
ಪ್ರವಾಹ ಸ್ಥಿತಿ, ನೂರಾರು ಮಂದಿ ಸಾವು
ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಮೃತರ ಸಂಖ್ಯೆ 257 ದಾಟಿದೆ. ಸುಮಾರು 15 ಪಂಚಾಯತ್‌ಗಳಿಗೆ ಸಂಪೂರ್ಣವಾಗಿ ರಸ್ತೆ ಮಾರ್ಗ ಕಡಿತಗೊಂಡಿದೆ. 352 ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ. ಇನ್ನು 1,067 ಕಡೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಇನ್ನು ಸುಮಾರು 116 ಕಡೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿದೆ. ಅದರಲ್ಲೂ ಮುಖ್ಯವಾಗಿ ಕುಲ್ಲು ಜಿಲ್ಲೆಯಲ್ಲೇ ಹೆಚ್ಚು ಸಂಚಾರ ಸಮಸ್ಯೆ, ಹಾನಿ ಉಂಟಾಗಿದೆ.
ಪಂಜಾಬ್‌ನಲ್ಲಿ ಆರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗುರುದಾಸಪುರ ಮತ್ತು ತರ್ನ್ ತರನ್‌ನಲ್ಲಿ ಪ್ರವಾಹ ಉಂಟಾಗುವ ಎಚ್ಚರಿಕೆ ನೀಡಲಾಗಿದೆ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಪ್ರವಾಸ ಸ್ಥಿತಿ ಉಂಟಾಗಿದೆ. ಸರ್ಕಾರ ಪುನರ್ವಸತಿಗಾಗಿಯೇ 111 ಕೋಟಿ ರೂಪಾಯಿ ಹಣವನ್ನು ಕಳೆದ 14 ವರ್ಷಗಳಲ್ಲಿ ತೆತ್ತಿದೆ ಎಂದು ವರದಿಯಾಗಿದೆ. ಇದೇ ಅವಧಿಯಲ್ಲಿ 245 ಗ್ರಾಮಗಳು ಭೂಕುಸಿತ, ಪ್ರವಾಹದಿಂದಾಗಿ ಸಂಪೂರ್ಣವಾಗಿ ನಾಶವಾಗಿದೆ. ಅಲ್ಲಲ್ಲಿ ಮೇಘಸ್ಫೋಟಗಳು ಸಂಭವಿಸುತ್ತಿದೆ.
ಜಮ್ಮು ಕಾಶ್ಮೀರದಲ್ಲಿ ಇತ್ತೀಚೆಗೆ ಮೇಘಸ್ಫೋಟ ಸಂಭವಿಸಿ 72ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದಾದ ಒಂದೆರಡು ದಿನದಲ್ಲೇ ಮತ್ತೆ ಮೇಘಸ್ಫೋಟ ಉಂಟಾಗಿದ್ದು 7 ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣ ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಪ್ರವಾಹದ ಅಪಾಯ ಉಂಟಾಗಿದೆ. ಈ ಬೆನ್ನಲ್ಲೇ 18 ಗೇಟ್‌ಗಳನ್ನು ತೆರೆಯಲಾಗಿದೆ. ದೆಹಲಿಯಲ್ಲೂ ಯಮುನಾ ನದಿ ನೀರು ಅಪಾಯ ಮಟ್ಟಕ್ಕೆ ಏರಿಕೆಯಾಗಿದೆ.
ತೀವ್ರ ಮಳೆ ಮತ್ತು ಬೆಳೆ ಹಾನಿ
ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದಂತೆ ಹವಾಮಾನದಲ್ಲೂ ತೀವ್ರ ಬದಲಾವಣೆ ಉಂಟಾಗುತ್ತಿದೆ. ಅಕಾಲಿಕ ಮಳೆ, ಅತಿ ಮಳೆ, ಮಳೆ ಕೊರತೆ, ಬರ, ಪ್ರವಾಹ- ಹೀಗೆ ಹಲವು ವೈಪರೀತ್ಯಗಳು ಉಂಟಾಗುತ್ತಿದೆ. ಇವೆಲ್ಲವುದರಿಂದಾಗಿ ತೀವ್ರ ಬೆಳೆ ಹಾನಿಯಾಗುತ್ತಿದೆ. ಬೆಳೆ ಹಾನಿ ಮಾತ್ರವಲ್ಲ ಬಿತ್ತನೆಯೂ ವಿಳಂಬವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಅಕ್ಕಿ, ಜೋಳದಂತಹ ಬೆಳೆಗೆ ಅತಿ ಮಳೆಯಿಂದಾಗಿ ಬೇರು ಕೊರೆತದಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಜೊತೆಗೆ ಬೆಳೆಯ ಗುಣಮಟ್ಟವೂ ಇಳಿಕೆಯಾಗುತ್ತದೆ.
