ರಾಜಸ್ಥಾನದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಕೋಟಾ ಸೇರಿದಂತೆ ಹಲವು ಜಿಲ್ಲಗಳಲ್ಲಿ ಈವರೆಗೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ. ರಾಜಸ್ಥಾನದ ಕೋಟಾ, ಪಾಲಿ, ಜಾಲೋರ್ ಮತ್ತು ಧೋಲ್ಪುರ್ ಜಿಲ್ಲೆಗಳು ಮಳೆಯಿಂದಾಗಿ ತೀವ್ರ ಹಾನಿಗೆ ಒಳಗಾಗಿದೆ.
ಜೋಧ್‌ಪುರದಲ್ಲಿ ಕೊಳವೆ ಬಾವಿಯಲ್ಲಿ ಕೆಲಸ ಮಾಡುತ್ತಿದ್ದ ರೈತ ಮತ್ತು ಲೈನ್‌ಮ್ಯಾನ್ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದಾರೆ. ಪಾಲಿಯಲ್ಲಿ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಇಂದು(ಜುಲೈ 15) ಶಾಲೆಗಳಿಗೆ ರಜೆ ನೀಡಲಾಗಿದೆ.
ಇದನ್ನು ಓದಿದ್ದೀರಾ? ಭಾರೀ ಮಳೆ | ಗೊರೂರಿನ ಹೇಮಾವತಿ ಜಲಾಶಯದ ಆರು ಕ್ರೆಸ್ಟ್ ಗೇಟ್‌ಗಳ ಮೂಲಕ ನೀರು ಬಿಡುಗಡೆ
ಜಾಲೋರ್ ಮತ್ತು ಜೋಧ್‌ಪುರದಲ್ಲಿ, ಮಾರ್ವಾರ್ ಜಂಕ್ಷನ್ ಮತ್ತು ಲುನಿ ನಡುವಿನ ಕೆಲವು ಪ್ರದೇಶಗಳಲ್ಲಿ ಹಳಿಗಳು ಮುಳುಗಿರುವುದರಿಂದ ರೈಲು ಸಂಚಾರ ವ್ಯತ್ಯಯವಾಗಿದೆ. ಪಾಲಿ ಮತ್ತು ಮಾರ್ವಾರ್ ಜಂಕ್ಷನ್ ನಡುವಿನ ಮಾರ್ಗಕ್ಕೂ ಪರಿಣಾಮ ಬೀರಿದೆ. ಹಲವು ರೈಲುಗಳ ವೇಳಾಪಟ್ಟಿ ಬದಲಾಗಿದೆ.
ಜೋಧ್‌ಪುರ-ಅಹಮದಾಬಾದ್ ಮಾರ್ಗದ ಸಬರಮತಿ ಎಕ್ಸ್‌ಪ್ರೆಸ್ ಅನ್ನು ಸಹ ರದ್ದುಗೊಳಿಸಲಾಗಿದೆ. ಮಾರ್ವಾರ್ ಜಂಕ್ಷನ್ ರೈಲು ವಿಭಾಗದ ಅಡಿಯಲ್ಲಿ ಮಾರ್ವಾರ್ ಜಂಕ್ಷನ್ ಮತ್ತು ಬೊಮಡೈನಲ್ಲಿ ಹಳಿಗಳು ಹಾನಿಗೊಳಗಾಗಿದೆ.
ಕೋಟಾ ಬ್ಯಾರೇಜ್‌ನಿಂದ ಎರಡು ಲಕ್ಷ ಕ್ಯೂಸೆಕ್‌ಗಳಿಗೂ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದ್ದು, ಉಕ್ಕಿ ಹರಿಯುವ ಚಂಬಲ್ ನದಿಯು ತಗ್ಗು ಪ್ರದೇಶಗಳನ್ನು ಮುಳುಗಿಸಿದೆ. ಮೀನುಗಾರಿಕೆಗಾಗಿ ತೆರಳಿದ್ದ ಏಳು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ಒಬ್ಬರ ರಕ್ಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.
ರಾಜಸ್ಥಾನದಲ್ಲಿ ಹವಾಮಾನ ಇಲಾಖೆ ಪಾಲಿ, ಕೋಟಾ, ಜೋಧ್‌ಪುರ, ಚಿತ್ತೋರ್‌ಗಢ, ನಾಗೌರ್ ಮತ್ತು ಅಜ್ಮೀರ್‌ಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ 48 ಗಂಟೆಗಳ ಕಾಲ ಭಿಲ್ವಾರಾ, ಸಿರೋಹಿ, ಬರಾನ್, ಟೋಂಕ್ ಬುಂಡಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
