ಭಾರತದ ಹಲವು ಪ್ರದೇಶಗಳಲ್ಲಿ ಕಳೆದ ಮೂರು ವರ್ಷಗಳಿಂದ ವಾಡಿಕೆಗಿಂತಲೂ ಅಧಿಕ ಮಳೆಯಾಗುತ್ತಿದೆ. ಕರ್ನಾಟಕ ಬೆಂಗಳೂರಿನಲ್ಲಿ ಮಳೆ ಅಬ್ಬರದಿಂದಾಗಿ ಹಲವಾರು ಪ್ರದೇಶಗಳು ಮಳೆಗಾಲದಲ್ಲಿ ಜಲಾವೃತಗೊಂಡು, ಜನಜೀವನ ಅಸ್ತವ್ಯಸ್ತವಾಗುವುದು ಸಾಮಾನ್ಯ ಎನ್ನುವಂತಾಗಿದೆ. ಬೆಂಗಳೂರು ಮಾತ್ರವಲ್ಲದೆ, ಚೆನ್ನೈ, ಹೈದ್ರಾಬಾದ್ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಇಂಥದ್ದೇ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ, ಹೆಚ್ಚು ಮಳೆ ಬೀಳುವ ನಗರಗಳಲ್ಲಿ ‘ಸ್ಪಾಂಜ್ ನಗರ’ ಅಭಿಯಾನ ಕೈಗೊಳ್ಳಲು ಭಾರತೀಯ ಹವಾಮಾನ ಇಲಾಖೆ ಚಿಂತಿಸಿದೆ.
‘ಸ್ಪಾಂಜ್ ನಗರ’ ಅಭಿಯಾನದಡಿ ಹೆಚ್ಚು ಮಳೆ ಬೀಳುವ ನಗರದಲ್ಲಿ ಮಳೆ ನೀರಿನ ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವಿರುವ ರಸ್ತೆಗಳನ್ನು ನಿರ್ಮಾಣ ಮಾಡುವುದು, ಕಟ್ಟಡಗಳ ಛಾವಣಿ ಮೇಲೆ ತಾರಸಿ ತೋಟ, ಮಳೆ ನೀರಿನ ಸಂಗ್ರಹಕ್ಕೆ ಒತ್ತು ಕೊಡುವುದು, ಉದ್ಯಾನವನಗಳ ನಿರ್ಮಾಣ ಹಾಗೂ ಕೆರೆಗಳನ್ನು ಅಭಿವೃದ್ಧಿಪಡಿಲು ಒತ್ತು ಕೊಡಲು ಚಿಂತನೆ ನಡೆದಿದೆ.
ಗಮನಾರ್ಹವಾಗಿ, ಭಾರತದಲ್ಲಿ ನಗರಗಳು ಅವೈಜ್ಞಾನಿಕವಾಗಿ ಬೆಳೆದು ಹೋಗಿವೆ. ನೀರಿನ ಹರಿವು, ನೀರಿನ ಸಂಗ್ರಹ ಹಾಗೂ ಇಂಗುವಿಕೆಗೆ ಅವಕಾಶ ಇಲ್ಲದ ಪರಿಸ್ಥಿತಿಯಲ್ಲಿ ನಗರಗಳು ನಿರ್ಮಾಣವಾಗಿವೆ. ಈ ಕಾರಣದಿಂದಾಗಿಯೇ, ಕೊಂಚ ಮಳೆಯಾದರೂ ನಗರ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಪ್ರವಾಹದ ಪರಿಸ್ಥಿತಿ ಎದುರಾಗುತ್ತಿದೆ. ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಅಲ್ಲದೆ, ಮಳೆ ನೀರು ಸಂಗ್ರಹವಾಗದೆ ಪೋಲಾಗುತ್ತಿದೆ. ಹೀಗಾಗಿ, ಮಳೆ ನೀರಿನ್ನು ಸಂಗ್ರಹಿಸುವ ಉದ್ದೇಶವೂ ಸೇರಿದಂತೆ ಮಳೆಯನ್ನು ಉತ್ತಮವಾಗಿ ನಿರ್ವಹಿಸಲು ‘ಸ್ಪಾಂಜ್ ನಗರ’ ಅಭಿಯಾನ ನೆರವಾಗಲಿದೆ ಎಂದು ಹೇಳಲಾಗಿದೆ.
ಅಭಿಯಾನದಡಿ, ನಗರ ಪ್ರದೇಶಗಳಲ್ಲಿ ಬೀಳುವ ಮಳೆ ನೀರು ಭೂಮಿಯಲ್ಲಿ ಇಂಗುವ ಮೂಲಕ ಅಂತರ್ಜಲದ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಇಂಗಾಲದ ಡೈಆಕ್ಸೈಡ್ ಹೊರಸುವಿಕೆಯನ್ನು ತಗ್ಗಿಸಲು ಅಗತ್ಯ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ. ಇದರಿಂದ, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.