- ರಾಜ್ಯದ ಕರಾವಳಿಗೂ ತಟ್ಟಲಿದೆ ಚಂಡಮಾರುತದ ಪರಿಣಾಮ
- ಪೋರ್‌ಬಂದರ್‌ನಲ್ಲಿ ಬಿರುಗಾಳಿ ಸಹಿತ ಮಳೆಗೆ ವ್ಯಕ್ತಿ ಬಲಿ
ಬಿಪೊರ್‌ಜಾಯ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಜೂನ್ 15ರ ಹೊತ್ತಿಗೆ ಗುಜರಾತ್‌ನ ಕಚ್ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಈ ಹಿನ್ನೆಲೆ ಕರಾವಳಿ ತೀರಕ್ಕೆ ಹೊಂದಿಕೊಂಡಿರುವ ಕಚ್ ಜಿಲ್ಲೆ ಮತ್ತ ಸೌರಾಷ್ಟ್ರ ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಪೋರ್‌ಬಂದರ್ ಸೇರಿದಂತೆ ಕಚ್ ಜಿಲ್ಲೆಯ ಹಲವೆಡೆ ಈಗಾಗಲೇ ಗಾಳಿ ಸಹಿತ ಮಳೆ ಶುರುವಾಗಿದೆ. ಕೆಲವೆಡೆ ದೈತ್ಯ ಮರಗಳು ಧರೆಗುರುಳಿದ್ದು, ಪೋರ್‌ಬಂದರ್‌ನಲ್ಲಿ ಬಿರುಗಾಳಿ-ಮಳೆಗೆ ಮನೆಯ ಗೋಡೆ ಕುಸಿದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಈ ಹಿನ್ನೆಲೆ ಪರಿಸ್ಥಿತಿ ಅವಲೋಕಿಸುವ ಸಲವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರಭಾಯ್ ಪಟೇಲ್ ಮತ್ತು ಕರಾವಳಿ ತೀರದ ಜಿಲ್ಲೆಗಳ ಸಂಸದರ ಜೊತೆಗೆ ಸಭೆ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಜೊತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಕಚ್ ಜಿಲ್ಲೆಗೆ ಭೇಟಿ ನೀಡಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಚ್ ಕಡಲ ತೀರದುದ್ದಕ್ಕೂ ವಾಸಿಸುತ್ತಿರುವ 8 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಕರ್ನಾಟಕದ ಕರಾವಳಿಯಲ್ಲೂ ಬಿಪರ್‌ಜಾಯ್ ಅಬ್ಬರ

ರಾಜ್ಯದ ಕರಾವಳಿ ತೀರದಲ್ಲೂ ಬಿಪೊರ್‌ಜಾಯ್ ಚಂಡಮಾರುತದ ಭೀತಿ ಹೆಚ್ಚಿದೆ. ಉಳ್ಳಾಲದ ಸಮುದ್ರ ತೀರಕ್ಕೂ ಚಂಡಮಾರುತದ ಪರಿಣಾಮ ತಟ್ಟುವ ಸಾಧ್ಯತೆ ಇದೆ. ಈ ಹಿನ್ನೆಲೆ ಎಚ್ಚೆತ್ತುಕೊಂಡಿರುವ ಸ್ಥಳೀಯ ಆಡಳಿತ ಉಚ್ಚಿಲ ಬಟ್ಟಪ್ಪಾಡಿಯ ಸಮುದ್ರ ತೀರದಲ್ಲಿ ಕಲ್ಲು ಹಾಕುವ ತುರ್ತು ಕಾಮಗಾರಿಯನ್ನು ಆರಂಭಿಸಿದೆ.