ಜಮ್ಮು ಮತ್ತು ಕಾಶ್ಮೀರದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲದ ಬಳಿ ಮಂಗಳವಾರ ರಾತ್ರಿ ಭಾರೀ ಮಳೆಯಿಂದ ಭಾರಿ ಭೂಕುಸಿತ ಸಂಭವಿಸಿ ಕನಿಷ್ಠ 30 ಜನರು ಸಾವನ್ನಪ್ಪಿದ್ದರು. 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರು ಅವಶೇಷದಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕೇಂದ್ರಾಡಳಿತ ಪ್ರದೇಶದ ಹೆಚ್ಚಿನ ಪ್ರದೇಶಗಳಲ್ಲಿ ಭಾರೀ ಮಳೆ ಮುಂದುವರೆದಿದ್ದು, ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕಾಶ್ಮೀರದ ಉಧಂಪುರದಲ್ಲಿ 629 ಮಿ.ಮೀ ಮತ್ತು ಜಮ್ಮುವಿನಲ್ಲಿ 380 ಮಿ.ಮೀ ಮಳೆಯಾಗಿದೆ. ಅನಂತ್‌ನಾಗ್ ಮತ್ತು ಶ್ರೀನಗರದಲ್ಲಿ ಝೀಲಂ ಉಕ್ಕಿ ಹರಿಯುತ್ತಿರುವುದರಿಂದ ವಸತಿ ಮತ್ತು ವಾಣಿಜ್ಯ ಪ್ರದೇಶಗಳಿಗೆ ನೀರು ನುಗ್ಗಿದೆ.
ನೂರಾರು ಮನೆಗಳು, ಸೇತುವೆಗಳು, ನೀರಿನಲ್ಲಿ ಕೊಚ್ಚಿ ಹೋಗಿವೆ. ಎಲ್ಲಾ ಜಲಾಶಯಗಳು ತುಂಬಿ ತುಳುಕುತ್ತಿದ್ದು ನದಿಗಳಿಗೆ ನೀರು ಬಿಡಲಾಗಿದೆ. ನದಿಪಾತ್ರಗಳು ಮುಳುಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮೊಬೈಲ್ ಟವರ್‌ಗಳು ಮತ್ತು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ಮೂಲಸೌಕರ್ಯ ತೀವ್ರವಾಗಿ ಹಾನಿಗೊಳಗಾಗಿದೆ.
ಪಂಜಾಬ್‌ನ ಪ್ರವಾಹ ಪೀಡಿತ ಗ್ರಾಮದಿಂದ 22 ಸಿಆರ್‌ಪಿಎಫ್ ಸಿಬ್ಬಂದಿ ಮತ್ತು ಮೂವರು ನಾಗರಿಕರನ್ನು ಸೇನಾ ಹೆಲಿಕಾಪ್ಟರ್‌ನಲ್ಲಿ ರಕ್ಷಣೆ ಮಾಡಲಾಗಿದೆ. ಸೇನಾ ಹೆಲಿಕಾಪ್ಟರ್ ತೆರಳುತ್ತಲೇ ಇತ್ತ ಯೋಧರು ಆಶ್ರಯ ಪಡೆದಿದ್ದ ಕಟ್ಟಡ ಕೆಲವೇ ಕ್ಷಣಗಳಲ್ಲಿ ಕುಸಿದಿದೆ. ಗುರುದಾಸ್‌ಪುರದ ಕರ್ತಾರಪುರ ಕಾರಿಡಾರ್ ಮುಳುಗಡೆಯಾಗಿದೆ. ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಬಿಯಾಸ್ ನದಿಯ ಪ್ರವಾಹದ ಆತಂಕ ತರಿಸಿದೆ. ಉತ್ತರಾಖಂಡ್‌ನಲ್ಲಿ ಜೀವಗಂಗೆ, ಯಮುನೆಯ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.