ಮೇಘಾಲಯದ ಗಾರೋ ಹಿಲ್ಸ್ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿದೆ. ನೀರಿನ ರಭಸಕ್ಕೆ ಭೂಕುಸಿತವೂ ಸಂಭವಿಸಿದ್ದು, ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಮಧ್ಯರಾತ್ರಿಯಿಂದಲೇ ಮಳೆ ಆರಂಭವಾಗಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ. ಗಾರೋ ಹಿಲ್ಸ್ ಪ್ರದೇಶದ ಐದು ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಿದೆ. ಹಲವೆಡೆ ಭೂಕುಸಿತ ಸಂಭವಿಸಿದೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ಅವರು ಪ್ರವಾಹ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ದಲು ಪ್ರದೇಶ ಹಾಗೂ ಪಶ್ಚಿಮ ಗಾರೋ ಬೆಟ್ಟ ಪ್ರದೇಶದಲ್ಲಿ ಪ್ರವಾಹ ಉಂಟಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
“ದಲು ಪ್ರದೇಶದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಪಶ್ಚಿಮ ಗಾರೋ ಹಿಲ್ಸ್ ಪ್ರದೇಶದಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಂಗ್ಮಾ ಸೂಚಿಸಿದ್ದಾರೆ” ಎಂದು ಸಿಎಂಒ ಕಚೇರಿ ಹೇಳಿದೆ.