ವರ್ಚುವಲ್ ವಿಚಾರಣೆಯ ಸಮಯದಲ್ಲಿ ದಾವೆದಾರರಲ್ಲಿ ಓರ್ವ ಶೌಚಾಲಯದಿಂದ ಮತ್ತು ಇನೊಬ್ಬ ಮಲಗುವ ಕೋಣೆಯಿಂದ ಹಾಜರಾಗಿದ್ದು, ಆ ಇಬ್ಬರಿಗೂ ಗುಜರಾತ್ ಹೈಕೋರ್ಟ್ ದಂಡ ವಿಧಿಸಿದೆ. ‘ಇದು ಕೋರ್ಟ್ ಹಾಲ್, ಸಿನಿಮಾ ಹಾಲ್ ಅಲ್ಲ’ ಎಂದು ಎಚ್ಚರಿಕೆ ನೀಡಿದೆ.
ಶೌಚಾಲಯದಿಂದ ವಿಚಾರಣೆಗೆ ಹಾಜರಾದ ವ್ಯಕ್ತಿಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಸಮಾಜ ಸೇವೆ ಮಾಡುವಂತೆ ಆದೇಶಿಸಿದೆ. ಮಲಗುವ ಕೋಣೆಯಲ್ಲಿ ಹಾಸಿಗೆಯ ಮೇಲೆ ಮಲಗಿ ವಿಚಾರಣೆಗೆ ಹಾಜರಾದ ವ್ಯಕ್ತಿಗೆ 25,000 ರೂ. ದಂಡ ವಿಧಿಸಿದೆ.
ಕೋರ್ಟ್ ವಿಚಾರಣೆ ವೇಳೆ ದುರ್ವರ್ತನೆ ತೋರಿದ ಇಬ್ಬರು ಒಬ್ಬರು ದಾವೆದಾರರ ಮಗ ಧವಲ್ ಪಟೇಲ್ ಎಂದು ಹೇಳಲಾಗಿದೆ. ಆತ ವಿಚಾರಣೆ ವೇಳೆ ಶೌಚಾಲಯದಿಂದ ಹಾಜರಾಗಿದ್ದಕ್ಕೆ, ಆತನ ವರ್ಚುವಲ್ ಸಂಪರ್ಕವನ್ನು ಕೋರ್ಟ್ ಕಡಿತಗೊಳಿಸಿದೆ. ಬಳಿಕ ಆತನ ಬಗ್ಗೆ ನ್ಯಾಯಮೂರ್ತಿ ಎಂ.ಕೆ ಥಕ್ಕರ್ ಅವರು ವಿಚಾರಿಸಿದ್ದು, ಆತ ಬೃಹತ್ ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಕೊಂಡಿದ್ದಾರೆ.
ಬಳಿಕ, ಆತನಿಗೆ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಆ ಹಣದಲ್ಲಿ 1.5 ಲಕ್ಷ ರೂ.ಗಳನ್ನು ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು ಮತ್ತು 50,000 ರೂ.ಗಳನ್ನು ಅನಾಥಾಶ್ರಮಕ್ಕೆ ದಾನ ನೀಡಬೇಕು. ಜೊತೆಗೆ, ಹೈಕೋರ್ಟ್ ಸಂಕೀರ್ಣದ ಉದ್ಯಾನಗಳನ್ನು ಎರಡು ವಾರಗಳ ಕಾಲ ಸ್ವಚ್ಛಗೊಳಿಸಿ, ಅಲ್ಲಿನ ಗಿಡಗಳಿಗೆ ನೀರುಣಿಸಬೇಕು ಎಂದು ಆದೇಶಿಸಿದ್ದಾರೆ.
ಈ ವರದಿ ಓದಿದ್ದೀರಾ?: ಸ್ತನ ಮುಟ್ಟುವುದು – ಪೈಜಾಮದ ಲಾಡಿ ಬಿಚ್ಚುವುದು ಅತ್ಯಾಚಾರವಲ್ಲ; ಹೈಕೋರ್ಟ್ ತೀರ್ಪಿನ ವಿರುದ್ಧ ವ್ಯಾಪಕ ಆಕ್ರೋಶ
”ನ್ಯಾಯ ಮತ್ತು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಗಾಗಿ ಆನ್‌ಲೈನ್ ವಿಚಾರಣೆಯ ಸೌಲಭ್ಯವನ್ನು ಒದಗಿಸಲಾಗಿದೆ. ಆದರೆ, ವರ್ಚುವಲ್ ವಿಚಾರಣೆಯಲ್ಲಿ ಹಾಜರಾಗುವ ವ್ಯಕ್ತಿಯು ನ್ಯಾಯಾಲಯದ ಘನತೆಯನ್ನು ಕಾಪಾಡಲು ಅತ್ಯಂತ ಶಿಸ್ತು ಮತ್ತು ಸಭ್ಯತೆಯಿಂದ ವರ್ತಿಸಬೇಕು. ಅರ್ಜಿದಾರರು ತಮ್ಮ ಹಾಸಿಗೆಯ ಮೇಲೆ ಮಲಗಿ ನ್ಯಾಯಾಲಯದ ಕಲಾಪಗಳನ್ನು ಸಿನಿಮಾ ನೋಡುತ್ತಿರುವಂತೆ ನೋಡುತ್ತಿದ್ದರು. ಇಂತಹ ನಡವಳಿಕೆಯು ನ್ಯಾಯಾಲಯದ ಘನತೆಗೆ ಧಕ್ಕೆ ತರುತ್ತದೆ. ಇಂತಹ ನಡವಳಿಕೆಯನ್ನು ಸಹಿಸಲಾಗುವುದಿಲ್ಲ” ಎಂದು ನ್ಯಾಯಮೂರ್ತಿ ಥಕ್ಕರ್ ಹೇಳಿದ್ದಾರೆ.