ಹಿಮಾಚಲ ಪ್ರದೇಶದ ಪಾಂಗ್ಲುಯೆಡ್ ಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಎರಡು ಕುಟುಂಬಗಳ ಒಟ್ಟು ಒಂಬತ್ತು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ. ಈ ಪೈಕಿ ನಾಲ್ವರ ಮೃತದೇಹ ಜ್ವಾಲಾಪುರದಲ್ಲಿ 150 ಕಿ.ಮೀ ದೂರದಲ್ಲಿ ಪತ್ತೆಯಾಗಿದೆ. ಇನ್ನೂ ಐವರು ಕಾಣೆಯಾಗಿದ್ದಾರೆ.
ಹತ್ತು ದಿನಗಳ ಹಿಂದೆ ಒಟ್ಟು ಒಂಬತ್ತು ಮಂದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್) ಇನ್ನೂ ಕಾಣೆಯಾದ ಐವರ ಶೋಧ ಮುಂದುವರೆಸಿದೆ. ಈ ಕುಟುಂಬದಲ್ಲಿ 23 ವರ್ಷದ ಖೇಮ್ ಲತಾ ಎಂಬ ಯುವತಿ ಮಾತ್ರ ಬದುಕುಳಿದಿದ್ದಾರೆ.
ಇದನ್ನು ಓದಿದ್ದೀರಾ? ಜಮ್ಮು ಕಾಶ್ಮೀರ | ಭಾರೀ ಮಳೆಯಿಂದಾಗಿ ಪ್ರವಾಹ; ಮೂವರ ಸಾವು
ಜೂನ್ 20ರಂದು ಮುಂಗಾರು ಆರಂಭವಾದಾಗಿನಿಂದ ಈವರೆಗೆ ಹಿಮಾಚಲ ಪ್ರದೇಶದಲ್ಲಿ ಒಟ್ಟು 91 ಮಂದಿ ಸಾವನ್ನಪ್ಪಿದ್ದಾರೆ, 34 ಜನರು ನಾಪತ್ತೆಯಾಗಿದ್ದಾರೆ. ಹಠಾತ್ ಪ್ರವಾಹ ಮತ್ತು ಮೇಘಸ್ಫೋಟದಿಂದಾಗಿ ಗಾಯಗೊಂಡವರ ಸಂಖ್ಯೆ 130ಕ್ಕೆ ಏರಿದೆ.
ಮಳೆಯ ಅಬ್ಬರದಿಂದಾಗಿ ಹಲವು ಮೂಲಸೌಕರ್ಯಗಳಿಗೆ ಹಾನಿಯಾಗಿದೆ. ಒಂದು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 207 ರಸ್ತೆಗಳನ್ನು ಮುಚ್ಚಲಾಗಿದೆ. 132 ವಿದ್ಯುತ್ ಪರಿವರ್ತಕಗಳು ಕಾರ್ಯನಿರ್ವಹಿಸುತ್ತಿಲ್ಲ. ಸುಮಾರು 840 ನೀರಿನ ಯೋಜನೆಗಳು ಸಹ ಸದ್ಯ ಸ್ಥಗಿತಗೊಂಡಿವೆ.
ಸೇನೆ, ಎನ್‌ಡಿಆರ್‌ಎಫ್ ತಂಡಗಳು, ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ(ಎಸ್‌ಡಿಆರ್‌ಎಫ್), ಇಂಡೋ ಟಿಬೆಟಿಯನ್ ಗಡಿ ಪೊಲೀಸ್(ಐಟಿಬಿಪಿ) ಮತ್ತು ಹಿಮಾಚಲ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಕಾಣೆಯಾದವರಿಗಾಗಿ ಹುಡುಕಾಟ ನಡೆಯುತ್ತಿದೆ.
ಜುಲೈ 16ರವರೆಗೆ ಹಿಮಾಚಲ ಪ್ರದೇಶದ ಹವಾಮಾನ ಕೆಟ್ಟದಾಗಿರುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ತಿಳಿಸಿದೆ. ಕಾಂಗ್ರಾ ಮತ್ತು ಸಿರ್ಮೌರ್‌ನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
