ಅಯೋಧ್ಯೆಯಲ್ಲಿ ಜನವರಿ 22 ರಂದು(ನಾಳೆ) ನಡೆಯುವ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ದಿನದಂದು ಹಿಮಾಚಲ ಪ್ರದೇಶ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿದೆ.
ರಾಜ್ಯದ ಎಲ್ಲ ಸರ್ಕಾರಿ ನೌಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುವು ಮಾಡಿಕೊಡುವ ಉದ್ದೇಶದಿಂದ ನಾಳೆ ಎಲ್ಲ ಶಾಲೆಗಳು, ಕಾಲೇಜುಗಳು, ವಿವಿಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ರಜೆಯು ದಿನಗೂಲಿ ಉದ್ಯೋಗಿಗಳಿಗೂ ಅನ್ವಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಮ ಮಂದಿರ ಉದ್ಘಾಟನೆ ದಿನದಂದು ಸಾರ್ವಜನಿಕ ರಜೆ ಘೋಷಿಸಿದ ದೇಶದಲ್ಲಿರುವ ಕಾಂಗ್ರೆಸ್ ನೇತೃತ್ವದ ಮೂರು ರಾಜ್ಯಗಳಲ್ಲಿ ಹಿಮಾಚಲ ಪ್ರದೇಶ ಮೊದಲ ರಾಜ್ಯವಾಗಿದೆ. ಹಲವು ರಾಜ್ಯ ಸರ್ಕಾರಗಳು, ಕೇಂದ್ರ ಸರ್ಕಾರ ಕೂಡ ಅರ್ಧ ದಿನ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಉದ್ಘಾಟನೆ ದಿನದಂದು ರಜೆ ಘೋಷಿಸಿದೆ.
ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್‌ನ ಉನ್ನತ ನಾಯಕರು ನಿರಾಕರಿಸಿದ ನಿಲುವಿಗೆ ವ್ಯತಿರಿಕ್ತವಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಜೆ ಘೋಷಿಸಿದೆ. ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಒಳಗೊಂಡು ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಅಧೀರ್ ರಂಜನ್ ಚೌಧರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ?
ಕಾರ್ಯಕ್ರಮದಿಂದ ಬಿಜೆಪಿಯು ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ಹಲವು ವಿಪಕ್ಷಗಳು ಕಾರ್ಯಕ್ರಮದಿಂದ ದೂರ ಉಳಿದಿವೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ರಾಜಕಾರಣಿಗಳು, ನಟರು, ಉದ್ಯಮಿಗಳು ಹಾಗೂ ಕ್ರೀಡಾಪಟುಗಳು ಅಯೋಧ್ಯೆಯ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.