ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಹೆಚ್ಚಾಗಿದೆ. ಪರಿಸರ ಅಸಮತೋಲನ ಉಂಟಾಗಿದೆ. ಪರಿಣಾಮ, ಪ್ರವಾಹ, ಶಾಖ ಹೆಚ್ಚತ್ತಿದೆ. ಇದು ಹೀಗೆಯೇ ಮುಂದುವರೆದರೆ ಭೂಪಟದಿಂದ ಹಿಮಾಚಲ ಪ್ರದೇಶ ರಾಜ್ಯವೇ ಅಳಿಸಿಹೋಗುತ್ತದೆ ಎಂದು ಸುಪ್ರೀಂ ಕೋರ್ಟ್ ಕಟುವಾಗಿ ನುಡಿದಿದೆ. ಅರಣ್ಯ ನಾಶವನ್ನು ಖಂಡಿಸಿದೆ.
ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳನ್ನು ‘ಹಸಿರು ಪ್ರದೇಶ’ ಎಂದು ಘೋಷಿಸಲು ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ಕೆಲವು ಕಾರ್ಪೋರೇಟ್‌ಗಳು ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರಿದ್ದ ಪೀಠವು, “ಹಿಮಾಚಲ ಪ್ರದೇಶದ ಪರಿಸ್ಥಿತಿ ಹದಗೆಟ್ಟಿದೆ. ಇಂತ ಪರಿಸ್ಥಿತಿಯಲ್ಲಿ ಹಸಿರು ಪ್ರದೇಶದ ಘೋಷಣೆ ಅತೀ ಮುಖ್ಯ. ಇದು ನಿರ್ದಿಷ್ಟ ಪ್ರದೇಶದಲ್ಲಿ ನಿರ್ಮಾಣ ಚಟುವಟಿಕೆಗಳನ್ನು ತಡೆಯುತ್ತದೆ. ಇಲ್ಲವಾದಲ್ಲಿ, ಇಡೀ ರಾಜ್ಯವೇ ಭೂಪಟದಿಂದ ಕಾಣೆಯಾಗಿಬಿಡುತ್ತದೆ” ಎಂದು ಹೇಳಿಕೆ. ಅರ್ಜಿಯನ್ನು ವಜಾಗೊಳಿಸಿದೆ.
ಈ ಲೇಖನ ಓದಿದ್ದೀರಾ?: ಹೆಣ್ಣು ಮಕ್ಕಳ ಸುರಕ್ಷತೆಗೆ ‘ಶಕ್ತಿಶ್ರೀ’ ಸಾಕೇ?
“ಆದಾಯ ಗಳಿಸುವುದೇ ಮುಖ್ಯವಲ್ಲ. ಪರಿಸರ ಮತ್ತು ಪರಿಸರ ವಿಜ್ಞಾನವನ್ನು ಬಲಿಕೊಟ್ಟು ಆದಾಯ ಗಳಿಸಲು ಸಾಧ್ಯವಿಲ್ಲ ಆದಾಯಕ್ಕಿಂತ ಪ್ರಕೃತಿ ಮುಖ್ಯ. ಇದು ಆಳುವವರಿಗೂ ಮನವರಿಕೆಯಾಗಬೇಕು” ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಿವಿಮಾತು ಹೇಳಿದೆ.
“ಹಿಮಾಚಲ ಪ್ರದೇಶದ ಪರಿಸ್ಥಿತಿ ಹದಗೆಟ್ಟಿದೆ. ಪರಿಸರ ಅಸಮತೋಲನ ತೀವ್ರಗೊಂಡಿದ್ದು, ಗಂಭೀರ ನೈಸರ್ಗಿಕ ವಿಕೋಪಗಳಿಗೆ ಕಾರಣವಾಗಿದೆ. ನಿರಂತರ ಭೂಕುಸಿತ, ಮನೆಗಳು ಮತ್ತು ಕಟ್ಟಡಗಳು ಕುಸಿಯುವುದು, ರಸ್ತೆ ಕುಸಿತ ಮುಂತಾದ ವಿದ್ಯಮಾನಗಳಿಗೆ ಪ್ರಕೃತಿ ಕಾರಣವಲ್ಲ, ಮಾನವರು ಕಾರಣ. ಹಿಮಾಚಲವು ಹಿಮಾಲಯ ಪರ್ವತಗಳ ಅಡಿಯಲ್ಲಿ ನೆಲೆಸಿದೆ. ಇಲ್ಲಿ ಯಾವುದೇ ಯೋಜನೆಯನ್ನು ಆರಂಭಿಸುವ ಮೊಲು ಭೂವಿಜ್ಞಾನಿಗಳು, ಪರಿಸರ ತಜ್ಞರು ಮತ್ತು ಸ್ಥಳೀಯರ ಅಭಿಪ್ರಾಯವನ್ನು ಪಡೆಯುವುದು ಮುಖ್ಯ. ಪ್ರಕೃತಿ ವಿಕೋಪವನ್ನು ತಡೆಯಲು ಈಗಲೂ ಎಚ್ಚೆತ್ತುಕೊಳ್ಳಲಿದ್ದರೆ, ಭವಿಷ್ಯವೇ ಇಲ್ಲವಾಗುತ್ತದೆ” ಎಂದು ಕೋರ್ಟ್ ಎಚ್ಚರಿಸಿದೆ.