“ಕನ್ನಡಿಗರು, ತಮಿಳರು, ತೆಲುಗರು ಹಿಂದಿ ಕಲಿಯಬೇಕು. ಹಿಂದಿ ಕಲಿತರೆ ಉತ್ತರ ಭಾರತದ ಜೊತೆಗಿನ ಸಂಪರ್ಕ ಉತ್ತಮವಾಗುತ್ತದೆ. ಉತ್ತರ-ದಕ್ಷಿಣ ಭಾರತದ ನಡುವಣ ಅಂತರ ಕಡಿಮೆಯಾಗುತ್ತದೆ. ನಾವು ಹಿಂದಿಯಂತಹ ರಾಷ್ಟ್ರೀಯ ಭಾಷೆಯನ್ನು ಕಲಿತರೆ, ದೆಹಲಿಗೆ ಹೋದರೂ ಕೂಡ ನಿರರ್ಗಳವಾಗಿ ಮಾತನಾಡಲು ಸುಲಭವಾಗುತ್ತದೆ. ಅನಗತ್ಯ ರಾಜಕೀಯದ ಬದಲು, ಸಂವಹನಕ್ಕೆ ಅಗತ್ಯವಿರುವಷ್ಟು ಭಾಷೆಗಳನ್ನು ನಾವು ಹೇಗೆ ಕಲಿಯಬಹುದು ಎಂಬುದರ ಮೇಲೆ ಗಮನ ಹರಿಸಬೇಕು. ರಾಜಕೀಯವು ಭಾಷಾ ಕಲಿಕೆಯ ಪ್ರಾಯೋಗಿಕ ಪ್ರಯೋಜನಗಳನ್ನು ಮರೆಮಾಡಬಾರದು” ಎಂದೆಲ್ಲ ಭಾಷಾಭಿಮಾನವನ್ನು ಪಸರಿಸುತ್ತಲೇ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಹಿಂದಿ ಹೇರಿಕೆ ಮಾಡುತ್ತಿದ್ದಾರೆ.
ಇದೀಗ ಮತ್ತೊಮ್ಮ ಜೂನ್ 11ರಂದು ತಮ್ಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಅವರು, “ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ನಮ್ಮ ಸ್ಥಳೀಯ ಭಾಷೆಗಳು. ನಾವು ಅವುಗಳನ್ನು ಕಲಿಯಬೇಕು. ಅದರ ಬಗ್ಗೆ ಯಾವುದೇ ರಾಜಿ ಇಲ್ಲ. ಆದರೆ ಹಿಂದಿಯನ್ನು ಹೆಚ್ಚುವರಿಯಾಗಿ ಕಲಿಯುವುದರಲ್ಲಿ ಮೌಲ್ಯವಿದೆ. ಇದು ನಮ್ಮ ಯುವಜನರಿಗೆ ಉದ್ಯೋಗಾವಕಾಶಗಳೊಂದಿಗೆ ಸಹಾಯ ಮಾಡುತ್ತದೆ. ಈ ದೇಶದ ಮಹಾನ್ ಜನರಾಗಿ ನಮ್ಮನ್ನು ಒಟ್ಟುಗೂಡಿಸುತ್ತದೆ” ಎಂದು ಬರೆದಿದ್ದಾರೆ.
ಕಳೆದ ಸೆಪ್ಟಂಬರ್ 14ರಂದು ಹಿಂದಿ ದಿವಸ್ ಆಚರಣೆಗೆ ಪ್ರತೀ ವರ್ಷದಂತೆ ತೀವ್ರ ವಿರೋಧ ವ್ಯಕ್ತವಾಯಿತು. ಹಲವೆಡೆ ಪ್ರತಿಭಟನೆಗಳು ನಡೆದ ವರದಿಗಳೂ ಬಂದವು. ಹಿಂದಿ ದಿವಸ ಎಂಬುದು ಹಿಂದಿಯನ್ನು ಹೇರುವ ಹುನ್ನಾರವಾಗಿದೆ. ಈ ಹಿಂದಿ ಹೇರಿಕೆ ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ಉಂಟುಮಾಡುತ್ತಿದೆ ಎಂಬ ವಾದಗಳು ಕೇಳಿಬಂದವು. ಎಲ್ಲ 22 ಅಧಿಕೃತ ಭಾಷೆಗಳನ್ನೂ ಸಮಾನವಾಗಿ ಕಾಣುವಂತಾಗಲು ಆಡಳಿತ ಭಾಷೆಗಳನ್ನಾಗಿ ಮಾಡಿ ದೇಶದ ಬಹುತ್ವ, ಸಾರ್ವಭೌಮತ್ವವನ್ನು ಕಾಪಾಡಬೇಕೆಂಬ ಒತ್ತಾಯವನ್ನೂ ಮಾಡಲಾಯಿತು.
ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ, ಹಿಂದಿ ಹೇರಿಕೆಯ ವಿರುದ್ಧ ದೀರ್ಘಕಾಲದ ಇತಿಹಾಸವಿದೆ. 1937ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಕಾಂಗ್ರೆಸ್ ಸರ್ಕಾರವು ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿದಾಗ ಆರಂಭವಾದ ಆಂದೋಲನಗಳು, 1960ರ ದಶಕದಲ್ಲಿ ತೀವ್ರಗೊಂಡವು. ದ್ರಾವಿಡ ಮುನ್ನೇತ್ರ ಕಳಗಂ(DMK) ಮತ್ತು ಇತರ ದ್ರಾವಿಡ ಪಕ್ಷಗಳು ಹಿಂದಿಯನ್ನು ʼಉತ್ತರ ಭಾರತದ ಪ್ರಾಬಲ್ಯʼವೆಂದು ಗುರುತಿಸಿ, ತಮಿಳು ಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಚಳವಳಿಗಳನ್ನು ನಡೆಸಿದವು. 2025ರಲ್ಲಿಯೂ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, NEPಯ ಮೂರು ಭಾಷಾ ನೀತಿಯನ್ನು ʼಹಿಂದಿ ಹೇರಿಕೆʼಯೆಂದು ಟೀಕಿಸಿದ್ದಾರೆ.
ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ವ್ಯವಹಾರದ ಭಾಷೆಯಾಗಬೇಕು. ಎಲ್ಲ ಬಗೆಯ ಪತ್ರ ವ್ಯವಹಾರ ಕನ್ನಡದಲ್ಲೇ ನಡೆಯಬೇಕೆಂಬ ಆಗ್ರಹವೂ ವ್ಯಕ್ತವಾಯಿತು. ಹೀಗೆ ಕರ್ನಾಟಕದಲ್ಲಿ ಹಿಂದಿ ವಿರುದ್ಧ ಆಕ್ರೋಶ ವ್ಯಕ್ತವಾದ ಕೂಡಲೇ ಬಿಜೆಪಿ ಮನಸ್ಥಿತಿಗಳು ಅದನ್ನು ಭಾಷಾ ಅಸಹನೆ, ಭಾಷಾ ಸಂಕುಚಿತತೆ ಎಂದೆಲ್ಲ ಹೇಳುತ್ತಿದ್ದು, ಇನ್ನೊಂದೆಡೆ ಪ್ರಬಲವಾಗುತ್ತಿವೆ.
ಹಿಂದಿ ವಿರುದ್ಧದ ಅಸಹನೆ ಮತ್ತು ಆಕ್ರೋಶದ ಹಿಂದಿರುವ ಕಳಕಳಿಯೇ ಬೇರೆ. ಅದು, ಪ್ರಾದೇಶಿಕ ಅಸ್ಮಿತೆಯನ್ನು ಅಳಿಸಿಹಾಕಲು ಹಿಂದಿ ಎಂಬ ಅಸ್ತ್ರ ಹಿಡಿದು ನಿಂತಿರುವವರಿಗೆ ಅರ್ಥವಾಗುವಂಥದ್ದಲ್ಲ. ಅರ್ಥವಾಗಿದ್ದರೂ ಬೇಕೆಂದೇ ನಿರ್ಲಕ್ಷಿಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವುದನ್ನು ನೋಡುತ್ತಿದ್ದೇವೆ. ಹಿಂದಿ ಹೇರಿಕೆ ವಿರುದ್ಧದ ಸಿಟ್ಟು ಕೇವಲ ಭಾವನಾತ್ಮಕವಾದುದಲ್ಲ. ಅದಕ್ಕೂ ಮಿಗಿಲಾದ ವಿಚಾರಗಳಿವೆ.
ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಬೋರ್ಡ್‌ಗಳಿಗೆ ಮಸಿ ಬಳಿಯುವುದರಿಂದ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿನ ಪ್ರತಿಕ್ರಿಯೆಗಳ ತನಕವೂ ಹಲವು ರೀತಿಯಲ್ಲಿ ಹಿಂದಿ ಹೇರಿಕೆ ವಿರುದ್ಧ ಆಕ್ರೋಶ ವ್ಯಕ್ತವಾಗಿರುವುದನ್ನು ಕಾಣಬಹುದು. ಇದನ್ನು ಕೆಲವೊಮ್ಮೆ ಬಹುತೇಕರು, ಭಾಷೆಯ ಕುರಿತ ಸಂಕುಚಿತ ಧೋರಣೆ ಎಂದೂ ಟೀಕಿಸುವುದಿದೆ. ಮಾಧ್ಯಮಗಳೂ ಹಾಗೆಯೇ ಹೇಳುವುದಿದೆ.
ಆದರೆ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಹಿಂದಿಯ ಪ್ರಾಬಲ್ಯ ಹೆಚ್ಚುತ್ತಿರುವ ಬಗ್ಗೆ ನಿಜವಾದ ಕಳವಳಗಳು ಯಾರಿಗೂ ಅರ್ಥವಾಗುತ್ತಿಲ್ಲ. ಹಿಂದಿ ಹೇರಿಕೆ ವಿರುದ್ಧದ ಹಿಂದಿರುವ ನಿಜವಾದ ಅಂಶಗಳು, ಭಾಷಾ ಹಕ್ಕುಗಳು, ಪ್ರಾದೇಶಿಕ ಅಸ್ಮಿತೆ, ಶಿಕ್ಷಣ ಮತ್ತು ಉದ್ಯೋಗದಲ್ಲಿನ ಅವಕಾಶಗಳ ವಿಚಾರವಾಗಿ ತಿಳಿಯಬೇಕಿದೆ. ಅದಕ್ಕೂ ಮೊದಲು ನಮ್ಮಲ್ಲಿ ಆಳವಾಗಿ ಬೇರೂರಿರುವ ಎರಡು ತಪ್ಪು ಕಲ್ಪನೆಗಳನ್ನು ಬಗೆಹರಿಸಿಕೊಳ್ಳಬೇಕು.
ಮೊದಲನೆಯದಾಗಿ, ಭಾರತೀಯರೆಲ್ಲರೂ ಒಗ್ಗೂಡಲು ಹಿಂದಿ ಬೇಕೆಂಬ ತಪ್ಪುಕಲ್ಪನೆಯನ್ನು ಬಿತ್ತಲಾಗುತ್ತಿದೆ. ಆದರೆ, ಒಗ್ಗೂಡುವುದಕ್ಕೆ ಹಿಂದಿ ಬೇಕೆಂಬುದು ಖಂಡಿತ ನಿಜವಲ್ಲ. ಭಾರತ ತನ್ನ ಬಹುಭಾಷೆ ಮತ್ತು ಬಹುಸಂಸ್ಕೃತಿಗಳ ಕಾರಣದಿಂದಲೇ ವಿಶಿಷ್ಟವಾಗಿರುವ ದೇಶ. ತನ್ನ ವೈವಿಧ್ಯತೆಯಲ್ಲೇ ಏಕತೆಯ ಗುಣವನ್ನು ಹೊಂದಿರುವ ದೇಶ. ಹಾಗಾಗಿ ಒಗ್ಗೂಡುವುದಕ್ಕೆ ನಿಜವಾಗಿಯೂ ಹಿಂದಿಯ ಅಗತ್ಯವಿದೆಯಾ ಎಂದು ನೋಡಿದರೆ, ಖಂಡಿತಾ ಇಲ್ಲ.
ಹಿಂದಿಯಂತಹ ಯಾವುದೇ ಒಂದು ಭಾಷೆಯನ್ನು ಯಾರದೇ ಮೇಲೆ ಹೇರುವುದೇ ಒಗ್ಗಟ್ಟನ್ನು ಹಾಳುಮಾಡುವ ನಿಜವಾದ ಅಂಶವಾಗಿಬಿಡುತ್ತದೆ. ಒಗ್ಗಟ್ಟಿನ ನೆಪ ಮಾಡಿ ಹಿಂದಿ ಹೇರಿಕೆಗೆ ಮುಂದಾದರೆ ಆಗ ಒಡಕು ಉಂಟಾಗುತ್ತದೆ. ಈ ಬಗ್ಗೆ ದಕ್ಷಿಣ ಭಾರತದ ರಾಜ್ಯಗಳ ಬಿಜೆಪಿಗರು ಒಂದೇ ಒಂದು ಮಾತಾಡುವುದಿರಲಿ ತುಟಿಯನ್ನೂ ಬಿಚ್ಚುವುದಿಲ್ಲ. ರಾಜ್ಯದ ಅಸ್ಮಿತೆಯ ಬಗ್ಗೆ
ಈ ಹಿಂದಿನಿಂದಲೂ ಹಿಂದಿ ನಮ್ಮ ರಾಷ್ಟ್ರಭಾಷೆ ಎಂದು ಹೇಳಿಕೊಂಡೇ ಬರಲಾಗಿದೆ. ಈಗ ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಕೂಡ ಇದೇ ಮನಸ್ಥಿತಿಯಲ್ಲಿ ʼಹಿಂದಿ ನಮ್ಮ ರಾಷ್ಟ್ರಭಾಷೆʼ ಹಾಗಾಗಿ ಹಿಂದಿ ಕಲಿಯುವುದರಿಂದ ದೆಹಲಿಯಲ್ಲಿ ನಿರರ್ಗಳವಾಗಿ ಸಂವಹನ ನಡೆಸಬಹುದು, ಉದ್ಯೋಗಗಳಿಗೂ ಅನುಕೂಲವಾಗುತ್ತದೆಂದು ಹೇಳುತ್ತ ಯುವಜನರಿಗೆ ತೇಪೆ ಹಾಕಲು ಮುಂದಾಗಿದ್ದಾರೆ.
ಹಿಂದಿ ರಾಷ್ಟೀಯ ಭಾಷೆ ಎಂಬ ವಾದವೇ ದೊಡ್ಡ ಸುಳ್ಳು. ಭಾರತಕ್ಕೆ ರಾಷ್ಟ್ರಭಾಷೆ ಎಂಬುದೇ ಇಲ್ಲ. ಭಾರತದ ಸಂವಿಧಾನದಲ್ಲಿ 22 ಅಧಿಕೃತ ಭಾಷೆಗಳು ಅಡಕವಾಗಿವೆ. ಅದರಲ್ಲಿ ನಮ್ಮ ಕನ್ನಡ ಹೇಗಿದೆಯೊ, ಹಿಂದಿ ಭಾಷೆಯೂ ಕೂಡಾ ಹಾಗೆಯೇ ಒಂದು ಪ್ರಾದೇಶಿಕ ಭಾಷೆ. ಅದುಬಿಟ್ಟರೆ ರಾಷ್ಟ್ರಭಾಷೆ ಎಂಬ ಯಾವುದೇ ವಿಶೇಷ ಸ್ಥಾನಮಾನ ಇಲ್ಲ.
ಹಿಂದಿಯನ್ನು ಸಂಪರ್ಕ ಭಾಷೆಯಾನ್ನಾಗಿ ಕಲಿಯಬೇಕು ಎಂಬ ವಾದಿಸುವ ಮೂಲಕ ಇದನ್ನೊಂದು ಸವಲತ್ತಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ಹುನ್ನಾರ ನಡೆಯುತ್ತಿದೆ. ಆದರೆ ಸಂಪರ್ಕ ಭಾಷೆಯಾಗಿ ಹಿಂದಿಗಿಂತಲೂ ಇಂಗ್ಲಿಷ್ ಹೆಚ್ಚು ಉತ್ತಮ. ಯಾಕೆಂದರೆ, ಅದು ಪ್ರಾದೇಶಿಕ ಒಡಕಿಗೆ ಕಾರಣವಾಗದೆ ವ್ಯಾವಹಾರಿಕವಾಗಿ ನೆರವಿಗೆ ಬರಬಲ್ಲ ಭಾಷೆ. ಅಲ್ಲದೆ ಜಾಗತಿಕ ಭಾಷೆ. ವಿದೇಶಗಳಿಗೆ ಹೋಗುವವರಿಗೂ ಅನುಕೂಲವಾಗುತ್ತದೆ. ಬದುಕಿನ ಭಾಷೆಯಾಗಿಯೂ ಬಳಸಿಕೊಳ್ಳಬಹುದು.
1965ರವರೆಗೆ ನೆಹರೂ ಕೂಡ, ʼಸಂಪರ್ಕ ಭಾಷೆಯಾಗಿ ಹಿಂದಿಯ ಜೊತೆಗೆ ಇಂಗ್ಲಿಷ್ ಕೂಡ ಇರುತ್ತದೆʼ ಎಂದು ಹೇಳಿದ್ದರು. ಅದಾದ ಬಳಿಕ ಹಿಂದಿಯೊಂದೇ ಪ್ರಬಲವಾಗಿಬಿಡಬಹುದು ಎನ್ನುವ ಆತಂಕದಿಂದ ತಮಿಳುನಾಡು ಹೋರಾಟ ಶುರು ಮಾಡಿದಾಗ, ಜನರಿಗೆ ಅಗತ್ಯವಿರುವವರೆಗೆ ಇಂಗ್ಲಿಷ್ ಇದ್ದೇ ಇರುತ್ತದೆಂದು ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಭರವಸೆ ನೀಡಿದ್ದರ ಬಗ್ಗೆ ಉಲ್ಲೇಖಗಳಿವೆ. ಆದರೆ ಬಿಜೆಪಿ ಸರ್ಕಾರ ಈಗ ಇಂಗ್ಲಿಷ್ ಭಾಷೆಯನ್ನು ಪರ್ಯಾಯ ಭಾಷೆಯನ್ನಾಗಿಸಲು ಮುಂದಾಗುವ ಮೂಲಕ ಹಿಂದಿಯನ್ನೇ ಹೇರುವ ವ್ಯವಸ್ಥಿತ ಯತ್ನ ನಡೆಸುತ್ತಿದೆ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ.
ಹಿಂದಿ ಹೇರಿಕೆಗೆ ತೀವ್ರ ವಿರೋಧ ವ್ಯಕ್ತ
ಸಂಸ್ಕೃತಿ ಮತ್ತು ರಾಜಕೀಯ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ವಿಚಾರ ಬಂದಾಗ, ಅದನ್ನು ಅತಿಕ್ರಮಿಸುವಂತೆ ಕಾಣುವ ಹಿಂದಿಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತ ಬಂದಿದೆ. ಕರ್ನಾಟಕದಂಥ ಪರಿಸರದಲ್ಲಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆ, ಕನ್ನಡ ಮತ್ತು ಕನ್ನಡಿಗರ ಅಸ್ಮಿತೆಗೆ ಪೆಟ್ಟು ಕೊಡುವ ಅಂಶವಾಗಿ ಕಾಣಿಸುವುದು ಸಹಜ. ಹಾಗಾಗಿ ವಿರೋಧ ವ್ಯಕ್ತವಾಗುತ್ತದೆ. ಆದರೆ ಭಾವನಾತ್ಮಕ ವಿಚಾರದ ಆಚೆಗೆ, ವ್ಯಾವಹಾರಿಕವಾಗಿ ಹಿಂದಿ ಹೇರಿಕೆಗೆ ವಿರೋಧ ತೀವ್ರವಾಗಿರುವುದು ಅದು ಕನ್ನಡಿಗರ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳನ್ನು ಕಸಿಯುತ್ತದೆ ಎಂಬ ಕಾರಣಕ್ಕೆ ಹಿಂದಿ ಹೇರಿಕೆ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗುತ್ತದೆ.
ಶಾಲೆಗಳಿಂದ ಹಿಡಿದು, ಉದ್ಯೋಗ ಸಂಬಂಧಿತ ಪರೀಕ್ಷೆಗಳವರೆಗೆ ಹಿಂದಿ ಕಡ್ಡಾಯ ನೀತಿ ಹಿಂದಿ ಬಾರದ, ಕನ್ನಡ ಮಾತ್ರ ಮಾತಾಡುವವರ ಪಾಲಿಗೆ ದೊಡ್ಡ ಶತ್ರುವಾಗಿಬಿಟ್ಟಿದೆ. ಅದರಿಂದಾಗಿ ಕನ್ನಡಿಗರು ಸಾಕಷ್ಟು ಅವಕಾಶಗಳಿಂದ ವಂಚಿತರಾಗುವಂತಾಗಿದೆ. ಕೇಂದ್ರ ಸರ್ಕಾರ ನೇರವಾಗಿ ಹಿಂದಿಯನ್ನು ಹೇರಿಕೆ ಮಾಡುವುದಕ್ಕೆ ನಿಂತುಬಿಟ್ಟಿರುವುದು ಹಲವು ಅನುಮಾನಗಳಿಗೆ ಕಾರಣವಾಗುತ್ತದೆ.
ಈಗಾಗಲೇ ಪ್ರಾದೇಶಿಕ ಅಸ್ಮಿತೆಗಳನ್ನು ಹಾಳುಮಾಡುವ ಅಜೆಂಡಾಗಳನ್ನು ಪರೋಕ್ಷವಾಗಿ ತನ್ನ ನಡೆ ಮತ್ತು ನಡಾವಳಿಗಳಲ್ಲಿ ತೋರಿಸುತ್ತ ಬಂದಿರುವ ಕೇಂದ್ರ ಸರ್ಕಾರ, ಹಿಂದಿಯನ್ನು ರಾಷ್ಟ್ರಭಾಷೆಯೆಂದು ಬಿಂಬಿಸಲು, ಒತ್ತೊತ್ತಿ ಹೇಳಲು ನೋಡುತ್ತಿದೆ. ಹಿಂದಿಯನ್ನು ಇಡೀ ದೇಶದ ಭಾಷೆಯಾಗಿ ಸ್ವೀಕರಿಸುವ ಅಗತ್ಯವಿದೆ’’ ಎಂದು ಅಮಿತ್ ಶಾ ಥರದವರು ಹೇಳುವಾಗ, ‘ಒಂದು ದೇಶ ಒಂದು ಭಾಷೆ’ ಎನ್ನುವಾಗ, ಅದರ ಹಿಂದಿರುವುದು ಪ್ರಾದೇಶಿಕತೆಯನ್ನು ಅಡಗಿಸಿಬಿಡುವ ರಾಜಕೀಯದಂತೆ ಕಾಣಿಸುತ್ತದೆ.
ಇಲ್ಲಿ ಕೇಂದ್ರ ಸರಕಾರದ ತಾರತಮ್ಯ ನೀತಿ ಸ್ಪಷ್ಟವಾಗಿದೆ ಮತ್ತು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳು ಅಸ್ತಿತ್ವವನ್ನೇ ಕಳೆದುಕೊಳ್ಳುವಂತೆ ಮಾಡಿಬಿಡಬಹುದಾದ ಹುನ್ನಾರವೂ ಇದೆ.
ಉತ್ತರ ಭಾರತದಲ್ಲಿ ತ್ರಿಭಾಷಾ ಸೂತ್ರದಡಿ ದಕ್ಷಿಣ ಭಾರತದ ಭಾಷೆಗಳನ್ನೇನೂ ಕಲಿಸಲಾಗುತ್ತಿಲ್ಲ. ಕರ್ನಾಟಕ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದೆ. ಆದರೆ ಸಾಧಿಸಿದ್ದೇನು? ತ್ರಿಭಾಷಾ ಸೂತ್ರ ಒಪ್ಪಿಕೊಳ್ಳದ ತಮಿಳುನಾಡು ಕಳೆದುಕೊಂಡಿದ್ದೇನು? ಏನೂ ಇಲ್ಲ.
2014ರಿಂದ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದಿ ಬಳಕೆಗೆ ಒತ್ತು ಕೊಡುವುದು ಅತಿಯಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಂದಿ ವಿರೋಧಿ ಹೋರಾಟಗಳನ್ನು ಅಥವಾ ಪ್ರಾದೇಶಿಕ ಅಸ್ಮಿತೆ ಪರ ಕಾಳಜಿಗಳನ್ನು ದೇಶವಿರೋಧಿ ಎಂದು ಹೇಳುವ ಮಟ್ಟಕ್ಕೆ ವ್ಯವಸ್ಥಿತವಾಗಿ ಹಿಂದಿ ಪರವಾದ ರಾಜಕೀಯವೊಂದು ನಡೆದಿದೆ.
96 ವರ್ಷದ ಹಿರಿಯ ಪತ್ರಕರ್ತ ಮತ್ತು ಕನ್ನಡ ಹೋರಾಟಗಾರ ಪಾಟೀಲ್ ಪುಟ್ಟಪ್ಪ ಹಾಗೂ ಇತರರು ರಾಜ್ಯಕ್ಕೆ ಪ್ರತ್ಯೇಕ ಅಧಿಕೃತ ಧ್ವಜ ಬೇಕೆಂದು ಒತ್ತಾಯಿಸಿ 2014ರಲ್ಲಿ ಕರ್ನಾಟಕ ಸರ್ಕಾರವನ್ನು ಸಂಪರ್ಕಿಸಿದರು. ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜೂನ್ 6ರಂದು ಬೇಡಿಕೆಯ ಸುತ್ತಲಿನ ಕಾರ್ಯಸಾಧ್ಯತೆ ಮತ್ತು ಕಾನೂನು ಸಮಸ್ಯೆಗಳನ್ನು ಪರಿಶೀಲಿಸಲು ಒಂಬತ್ತು ಸದಸ್ಯರ ಸಮಿತಿಯನ್ನು ರಚಿಸಲು ಸೂಚನೆ ನೀಡಿತ್ತು. ಕರ್ನಾಟಕ ಸರ್ಕಾರವು ಸಮಿತಿಯನ್ನು ರಚಿಸಿದಾಗ ಈ ವಿಷಯವು ಮತ್ತೊಮ್ಮೆ ಗಮನ ಸೆಳೆಯಿತು. ಸಿದ್ದರಾಮಯ್ಯ ಸರ್ಕಾರ ಕರ್ನಾಟಕದ್ದೇ ಅಧಿಕೃತ ಧ್ವಜವನ್ನು ತರಲು ಮುಂದಾದಾಗ, ʼಕಾಂಗ್ರೆಸ್ ನೇತೃತ್ವದ ಸರ್ಕಾರವು ಕನ್ನಡ ಪರ ಮತ ಬ್ಯಾಂಕ್ ಓಲೈಸುವ ಪ್ರಯತ್ನʼ ಎನ್ನುವಂತಹ ಅತಿ ಪ್ರಚೋದನಕಾರಿ ಮಾತುಗಳು ಕೇಳಿಬಂದವು.
ಇದನ್ನೂ ಓದಿದ್ದೀರಾ? ಮೋದಿ ಕಾಲದ ಮಾಧ್ಯಮ: ಪ್ರಶ್ನೆಗಳಿಗೆ ಹೆದರುವ ‘ಪ್ರಧಾನಿ’; ನೆನಪಾಗುವ ‘ಮೌನಿ’
ಕರ್ನಾಟಕದ ಬೆಂಗಳೂರಿನಂಥ ಸ್ಥಳದಲ್ಲಿ ಉದ್ಯೋಗ ಇತ್ಯಾದಿಗಳ ಕಾರಣದಿಂದ ಬೇರೆಡೆಯಿಂದ ಬಂದು ನೆಲೆಸುವುದರ ಪರಿಣಾಮ ನಿಧಾನವಾಗಿ ಇಲ್ಲಿನ ಸಂಸ್ಕೃತಿಯೇ ಅಳಿದುಹೋಗುತ್ತಿದೆ. ಸದ್ದಿಲ್ಲದೆ ಪ್ರಾದೇಶಿಕ ಅಸ್ಮಿತೆ ಇಲ್ಲವಾಗಿಬಿಡುವ ಅಪಾಯ ಇದಾಗಿದೆ. ಇತ್ತೀಚೆಗೆ ಬೆಂಗಳೂರಿನ ಚಂದಾಪುರದ ಎಸ್‌ಬಿಐ ಬ್ಯಾಂಕ್‌ನ ಮಹಿಳಾ ಅಧಿಕಾರಿ(ಮ್ಯಾನೇಜರ್) ಕನ್ನಡದಲ್ಲಿ ಮಾತನಾಡಲು ತಕರಾರು ತೆಗೆದಿದ್ದಲ್ಲದೆ. ʼಇದು ಭಾರತ, ನಾನು ಭಾರತೀಯಳು. ಹಾಗಾಗಿ ನಾನು ಹಿಂದಿಯಲ್ಲಿಯೇ ಮಾತನಾಡುತ್ತೇನೆ. ಕನ್ನಡದಲ್ಲಿ ನಾನು ಮಾತನಾಡುವುದಿಲ್ಲʼವೆಂಬ ಸೊಕ್ಕು ತೋರಿಸಿದ್ದನ್ನು ಗಮನಿಸಿದ್ದೇವೆ.
ಬ್ಯಾಂಕ್‌ಗಳ ರಾಷ್ಟ್ರೀಕರಣದಿಂದ ಪ್ರಾದೇಶಿಕ ಉದ್ಯೋಗಿಗಳಿಗಲ್ಲದೆ, ಗ್ರಾಹಕರೂ ಅನ್ಯಾಯ ದೋರಣೆ ಎದುರಿಸುವಂತಾಗಿದೆ. ಶ್ರಮಿಕರು, ರೈತರು, ಅಕ್ಷರ ಕಲಿತಿಲ್ಲದ ಹಿರಿಯರು ಬ್ಯಾಂಕ್‌ಗಳಿಗೆ ಹೋದರೆ, ಸಿಬ್ಬಂದಿಗಳೊಟ್ಟಿಗೆ ಸಂವಹನ ನಡೆಸಲು ಹೆಣಗಾಡುವುದುನ್ನು ಗಮನಿಸಬಹುದು. ಕೆಲವು ಬ್ಯಾಂಕ್‌ಗಳಲ್ಲಿ ಅಧಿಕಾರಿಗಳು ಕನ್ನಡಿಗರಿಲ್ಲದೆ, ಕನ್ನಡಪರ ಹೋರಾಟಗಾರರು ಇದರ ವಿರುದ್ಧ ಹೋರಾಟ ನಡೆಸಿದ್ದನ್ನೂ ಕಾಣಬಹುದು.
ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡಿನಂತಹ ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) 2020 ಮತ್ತು ಹಿಂದಿಯನ್ನು ಒಳಗೊಂಡ ಅದರ ತ್ರಿಭಾಷಾ ಸೂತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆಗಳು ಬಂದಿವೆ. ಭಾಷಾ ವೈವಿಧ್ಯತೆಯನ್ನು ಪಣಕ್ಕಿಟ್ಟು ಹಿಂದಿಯನ್ನು ಉತ್ತೇಜಿಸುವ ತನ್ನ ಪ್ರಯತ್ನಗಳ ಬಗ್ಗೆ ಬಿಜೆಪಿ ಬಹಳ ಹಿಂದಿನಿಂದಲೂ ಟೀಕೆಗಳನ್ನು ಎದುರಿಸುತ್ತಿದೆ. ಇದೀಗ ಚಂದ್ರಬಾಬು ನಾಯ್ಡು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ(ಎನ್‌ಡಿಎ) ಪ್ರಮುಖ ಮಿತ್ರರಾಗಿದ್ದಾರೆ. ಆ ಕಾರಣಕ್ಕಾಗಿ ಹಿಂದಿ ಭಾಷೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ ಸ್ಥಳೀಯರು ಅವರ ಮಾತುಗಳು ಕೇಳಿಲ್ಲವೆಂಬತೆ ತಮ್ಮ ತಮ್ಮ ರಾಜ್ಯಗಳ ಪ್ರಾದೇಶಿಕತೆ, ಅಸ್ಮಿತೆಯನ್ನು ಉಳಿಸಿಕೊಳ್ಳುವತ್ತ ಗಮನಹರಿಸಬೇಕಿದೆ.