ಮುಸ್ಲಿಂ ಯುವಕ ಮತ್ತು ಹಿಂದು ಯುವತಿಯಲ್ಲಿ ಒಬ್ಬರು ಯಾವುದೇ ಧರ್ಮಕ್ಕೆ ಮತಾಂತರವಾಗದೆ, ವಿವಾಹವಾದರೆ, ಅದು ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿಯಲ್ಲಿ ಮಾನ್ಯವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿದೆ.
ಅಂತರ್‌ಧರ್ಮೀಯ ಯುವ ದಂಪತಿಯೊಂದು ವಿಶೇಷ ವಿವಾಹ ಕಾಯ್ದೆ-954ರ ಅಡಿಯಲ್ಲಿ ಅಂತರ್ ಧರ್ಮೀಯ ವಿವಾಹ ನೋಂದಣಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಅರ್ಜಿಯನ್ನು ತಿರಸ್ಕರಿಸಿದೆ. ಮುಸ್ಲಿಂ ಪುರುಷ ಮತ್ತು ಹಿಂದೂ ಮಹಿಳೆಯ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಅಸಿಂಧು ಎಂದು ಹೇಳಿದೆ.
ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಸಾರಿಕಾ ಸೇನ್ ಮತ್ತು ಸಫೀಕ್ ಖಾನ್ ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಕುಟುಂಬಗಳ ವಿರೋಧದ ನಡುವೆಯೂ ವಿವಾಹವಾಗಿದ್ದರು. ಆದರೆ, ಅವರು ತಮ್ಮ ಮದುವೆಯನ್ನು ವಿಶೇಷ ವಿವಾಹ ಕಾಯ್ದೆಯಡಿ ನೋಂದಾಯಿಸಲು ಅಧಿಕಾರಿ ಎದುರು ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಿವಾಹ ನೋಂದಣಿ ಮಾಡಿಸಲು ತಮಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಅರ್ಜಿದಾರ ದಂಪತಿ ಮನವಿ ಮಾಡಿದ್ದರು.
“ಮಹಮದೀಯ ಕಾನೂನಿನ ಪ್ರಕಾರ, ವಿಗ್ರಹ ಅಥವಾ ಅಗ್ನಿ ಆರಾಧಕ ಯುವತಿಯೊಂದಿಗೆ ಮುಸ್ಲಿಂ ಹುಡುಗನ ವಿವಾಹವು ಮಾನ್ಯವಾದುದಲ್ಲ. ವಿಶೇಷ ವಿವಾಹ ಕಾಯಿದೆಯಡಿ ವಿವಾಹವನ್ನು ನೋಂದಾಯಿಸಿದ್ದರೂ ಸಹ, ಮದುವೆಗೆ ಮಾನ್ಯತೆ ಇರುವುದಿಲ್ಲ” ಎಂದು ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ಪ್ರಕರಣದಲ್ಲಿ ಯುವಕ ತನ್ನ ಮುಸ್ಲಿಂ ಧರ್ಮದಲ್ಲಿಯೂ, ಯುವತಿ ತನ್ನ ಹಿಂದು ಧರ್ಮದಲ್ಲಿಯೂ ಮುಂದುವರೆಯಲು ಬಯಸುತ್ತಾರೆ. ಈ ಪರಿಸ್ಥಿತಿಯಲ್ಲಿ ಅವರ ವಿವಾಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಕೇಳಿರುವುದಾಗಿ ವರದಿಯಾಗಿದೆ.