ಲೋಕಸಭಾ ಚುನಾವಣೆಯಲ್ಲಿ ಎಎಪಿಗೆ ಮತ ನೀಡಿದರೆ ನಾನು ಮತ್ತೆ ಜೈಲಿಗೆ ವಾಪಸ್ ಹೋಗುವುದಿಲ್ಲ ಎಂಬ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್,ಇದು ಜಾಮೀನು ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ತಿಳಿಸಿದೆ.
ಕೇಜ್ರಿವಾಲ್ ಅವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದೆ. ಅದು ಅವರ ಊಹೆ. ಈ ಬಗ್ಗೆ ನಾವೇನು ಹೇಳುವುದಿಲ್ಲ. ಜೂನ್ 2 ರಂದು ನ್ಯಾಯಾಲಯಕ್ಕೆ ಶರಣಾಗಬೇಕು ಎಂಬ ನಮ್ಮ ಆದೇಶ ಸ್ಪಷ್ಟವಾಗಿದೆ. ಕಾನೂನಿನ ಅನ್ವಯದಂತೆ ಕೋರ್ಟ್ ನಿರ್ಧಾರ ಕೈಗೊಂಡಿದೆ ಎಂದು ಜಾರಿ ನಿರ್ದೇಶನಾಲಯ ಪರ ವಕೀಲರಿಗೆ ಕೋರ್ಟ್ ತಿಳಿಸಿತು.
ನಾವು ಯಾವುದೇ ವಿನಾಯಿತಿ ನೀಡಿಲ್ಲ. ನಮ್ಮ ನಿರ್ಧಾರದ ಬಗ್ಗೆ ಟೀಕೆಗಳನ್ನು ಸ್ವಾಗತಿಸುತ್ತೇವೆ. ಇದನ್ನು ನಾವು ವಿವಾದವಾಗಿ ಮುಂದುವರೆಸುವುದಿಲ್ಲ. ನಮ್ಮ ಆದೇಶ ಸ್ಪಷ್ಟವಾಗಿದೆ. ನಾವು ದಿನಾಂಕವನ್ನು ನಿಗದಿಪಡಿಸಿದ್ದೇವೆ. ಮಧ್ಯಂತರ ಜಾಮೀನಿಗೆ ಕಾರಣಗಳನ್ನು ನೀಡಿದ್ದೇವೆ ಎಂದು ಹೇಳಿದ ಸುಪ್ರೀಂ ಕೋರ್ಟ್ ಜಾಮೀನನ್ನು ರದ್ದುಪಡಿಸಿ ಕೇಜ್ರಿವಾಲ್ ಅವರನ್ನು ಮತ್ತೆ ಜೈಲಿಗೆ ವಾಪಸ್ ಕಳಿಸಲು ನಿರಾಕರಿಸಿತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮುಸ್ಲಿಮರು, ಮಾಧ್ಯಮಗಳು ಮತ್ತು ಮೂರು ಕೊಲೆಗಳು
ಈ ಮೊದಲು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಸಾಲಿಟರ್ ಜನರಲ್ ತುಷಾರ್ ಮೆಹತಾ, ಪ್ರಚಾರದ ಸಂದರ್ಭದಲ್ಲಿ ಕೇಜ್ರಿವಾಲ್ ಅವರು ಎಎಪಿ ಪರವಾಗಿ ಮತ ಚಲಾಯಿಸಿದರೆ ನಾನು ಮತ್ತೆ ಜೈಲಿಗೆ ವಾಪಸ್ ಹೋಗುವುದಿಲ್ಲ ಎಂದು ಹೇಳುತ್ತಿರುವುದನ್ನು ಕೋರ್ಟ್‌ಗೆ ಮನವರಿಕೆ ಮಾಡಿದರು.
“ಇದು ಕೋರ್ಟ್ ನೀಡಿದ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ನ್ಯಾಯಾಂಗದ ಕೆನ್ನೆಗೆ ಬಾರಿಸಿದಂತಾಗಿದೆ” ಎಂದು ವಾದ ಮಂಡಿಸಿದರು. ಆದರೆ ಕೋರ್ಟ್ ಸಾಲಿಟರ್ ಜನರಲ್ ವಾದವನ್ನು ಪರಿಗಣಿಸಲಿಲ್ಲ.
ಮೇ.12 ರಂದು ಸೋಮವಾರ ಚುನಾವಣಾ ಭಾಷಣ ಮಾಡಿದ್ದ ಕೇಜ್ರಿವಾಲ್, ನಾನು ಜೂನ್ 2 ರಂದು ಜೈಲಿಗೆ ಮರಳಲಿದ್ದು, ಜೈಲಿನಿಂದಲೇ ಜೂ.4 ರಂದು ಫಲಿತಾಂಶ ನೋಡುತ್ತೇನೆ. ಇಂಡಿಯಾ ಒಕ್ಕೂಟ ಜಯಗಳಿಸಿದರೆ ನಾನು ಜೂ.5 ರಂದು ವಾಪಸ್ ಜೈಲಿನಿಂದ ಬರುತ್ತೇನೆ ಎಂದು ಹೇಳಿದ್ದರು.
