ಬೆಂಗಳೂರಿನ ಐದು ಮಹಾನಗರ ಪಾಲಿಕೆಗಳನ್ನು ಒಳಗೊಂಡ ‘ಗ್ರೇಟರ್ ಬೆಂಗಳೂರು ಅಥಾರಿಟಿ’ (GBA) ಚುನಾವಣೆಗಳನ್ನು ಡಿಸೆಂಬರ್ನಲ್ಲಿ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕಾರ್ಯ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಕಾಲಾವಕಾಶ ವಿಸ್ತರಣೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಾಲಯ, ಈ ಆದೇಶ ಹೊರಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ. ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾ. ವಿ. ಮೋಹನ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಈ ವಿಚಾರಣೆ ನಡೆಸಿತು. ನವೆಂಬರ್ನಲ್ಲಿ ಮತದಾರರ ಪಟ್ಟಿ ಅಂತಿಮವಾಗಿ ಪ್ರಕಟವಾಗಲಿದೆ ಎಂಬ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗದ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ, ಡಿಸೆಂಬರ್ 2026ರೊಳಗೆ ಈ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆಗಳನ್ನು ನಡೆಸಲೇಬೇಕು ಎಂದು ಸ್ಪಷ್ಟಪಡಿಸಿದೆ.
ಚುನಾವಣೆ ನಡೆಸಲು ಈ ಹಿಂದೆ ಜೂನ್ 30ರಿಂದ ಆಗಸ್ಟ್ 31ರವರೆಗೆ ನೀಡಲಾಗಿದ್ದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗವು ಈ ಹಿಂದೆ ಜೂನ್ ತಿಂಗಳಿನಲ್ಲಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದರೂ, ನಂತರ ಮತದಾರರ ಪಟ್ಟಿಯ ಪರಿಷ್ಕರಣೆ ಮತ್ತು ಆಡಳಿತಾತ್ಮಕ ಸವಾಲುಗಳನ್ನು ಉಲ್ಲೇಖಿಸಿ ಕಾಲಾವಕಾಶ ಕೋರಿದ್ದವು.
ಇದನ್ನೂ ಓದಿ: ‘ಮಹಾಪ್ರಭು ಜಗನ್ನಾಥ’ ಅನಿಮೇಟೆಡ್ ಚಿತ್ರ ಬಿಡುಗಡೆಗೆ ಸುಪ್ರೀಂ ಕೋರ್ಟ್ ಅಸ್ತು
ಸರ್ಕಾರದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಈಗ ಚುನಾವಣೆ ನಡೆಸಿದರೆ ಸಾವಿರಾರು ಮತದಾರರು ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ತೊಡಗಿರುವ ಸಿಬ್ಬಂದಿಯೇ ಚುನಾವಣಾ ಕರ್ತವ್ಯಕ್ಕೂ ಬೇಕಾಗುವುದರಿಂದ, ಎರಡು ಪ್ರಕ್ರಿಯೆಗಳನ್ನು ಒಟ್ಟಿಗೆ ನಿರ್ವಹಿಸುವುದು ಕಷ್ಟಸಾಧ್ಯ ಎಂದು ರಾಜ್ಯ ಸರ್ಕಾರ ತನ್ನ ಅರ್ಜಿಯಲ್ಲಿ ವಿವರಿಸಿತ್ತು. ಪರಿಷ್ಕರಣೆ ಮಾಡದ ಹಳೆಯ ಮತದಾರರ ಪಟ್ಟಿಯೊಂದಿಗೆ ಚುನಾವಣೆ ನಡೆಸಿದರೆ ಮತದಾರರ ಪಟ್ಟಿಯಲ್ಲಿ ಗೊಂದಲ ಉಂಟಾಗಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆಯಾಗಲಿದೆ ಎಂಬ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿತ್ತು.
2015ರಲ್ಲಿ ಕೊನೆಯದಾಗಿ ಚುನಾವಣೆ ನಡೆದಿದ್ದ ಬೆಂಗಳೂರಿನಲ್ಲಿ, ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿಯು 2020ರಲ್ಲೇ ಮುಕ್ತಾಯಗೊಂಡಿದೆ. ಇದೀಗ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ, ಡಿಸೆಂಬರ್ನಲ್ಲಿ ಚುನಾವಣೆ ನಡೆಯುವುದು ಖಚಿತವಾಗಿದೆ.




