ಜಾತೀಯತೆ, ಜಾತಿ ದೌರ್ಜನ್ಯವನ್ನು ತೊಡೆದು ಹಾಕಲು ಸಂವಿಧಾನದಲ್ಲಿ ನಾನಾ ಕಾನೂನುಗಳನ್ನು ರೂಪಿಸಲಾಗಿದೆ. ಆದರೂ, ಪ್ರಬಲ ಜಾತಿಗಳಲ್ಲಿ ಜಾತಿ ರೋಗ ವಾಸಿಯಾಗಿಲ್ಲ. ಜಾತಿಯ ಕಾರಣಕ್ಕಾಗಿ ದೌರ್ಜನ್ಯಗಳು, ಅತ್ಯಾಚಾರಗಳು, ಹತ್ಯೆಗಳು ಮುಂದುವರೆದಿವೆ. ಅಂತಹದ್ದೇ ಪ್ರಕರಣವೊಂದರಲ್ಲಿ ತನ್ನ ಅಳಿತ ತಳ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೆ ಅಳಿಯನನ್ನು ಜಾತಿವಾದಿ ಮಾವನೊಬ್ಬ ಗುಂಡಿಕ್ಕಿ ಕೊಂದರುವ ಅಮಾನುಷ ‘ಮರ್ಯಾದೆಗೇಡು ಹತ್ಯೆ’ ಘಟನೆ ಬಿಹಾರದಲ್ಲಿ ನಡೆದಿದೆ.
ಬಿಹಾರದ ದರ್ಭಂಗಾದಲ್ಲಿ ಘಟನೆ ನಡೆದಿದೆ. ದರ್ಭಂಗಾ ವೈದ್ಯಕೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿ ರಾಹುಲ್ ಎಂಬವರನ್ನು ಆತನ ಮಾವ ಕೊಂದಿದ್ದಾನೆ.
ತಳಸಮುದಾಯದ ರಾಹುಲ್ ಮತ್ತು ಆತನ ಸಹಪಾಠಿ, ಪ್ರಬಲ ಜಾತಿಯ ಯುವತಿ ಪರಸ್ಪರ ಪ್ರೀತಿಸಿ ಇದೇ ವರ್ಷದ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು. ಆ ಕಾರಣಕ್ಕಾಗಿಯೇ ಯುವತಿ ತಂದೆ ಪ್ರೇಮಶಂಕರ್ ಝಾ ಎಂಬಾತ ರಾಹುಲ್‌ನನ್ನು ಕಾಲೇಜಿನ ಆವರಣದಲ್ಲಿಯೇ ಗುಂಡು ಹಾರಿಸಿ ಕೊಂದಿದ್ದಾನೆ ಎಂದು ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಬಿಹಾರದಲ್ಲಿ ಎದುರಾಳಿಗಳ ಕೈಕಾಲು ಕಟ್ಟಿ, ತಾನು ಗೆಲ್ಲುವುದು ಬಿಜೆಪಿ ಹುನ್ನಾರ
ರಾಹುಲ್ ಮೇಲೆ ಪ್ರೇಮಾಶಂಕರ್ ಗುಂಡು ಹಾರಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನನ್ನು ಕಾಲೇಜಿನ ವಿದ್ಯಾರ್ಥಿಗಳು ಹಿಡಿದು, ಥಳಿಸಿದ್ದಾರೆ. ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಹುಲ್ ಹತ್ಯೆಯನ್ನು ಖಂಡಿಸಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸಾಮಾಜಿಕ ಜಾಗೃತಿ, ಅರಿವು ಮೂಡಿಸಲು ಸಾವಿರಾರು ಕಾರ್ಯಕ್ರಮಗಳು ನಡೆಯುತ್ತಿದ್ದರೂ ಕೂಡಾ ಜನರಲ್ಲಿ ಅಂಟಿಕೊಂಡಿರುವ ಜಾತಿಯ ವೈರಸ್ ಇನ್ನೂ ತೊಲಗದೇ ಇರುವುದು ವಿಪರ್ಯಾಸ. ಭಾರತೀಯ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳು ಮತ್ತು ಸಮಾನತೆಯನ್ನು ಬೋಧಿಸಲಾಗಿದೆ. ಆದರೂ ಇಂದಿಗೂ ಜಾತಿ ಧರ್ಮಗಳ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಹತ್ಯೆಗೈಯ್ಯುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.