ಗುಜರಾತ್ ವಿಮಾನ ದುರಂತದಲ್ಲಿ ಹಾಸ್ಟೆಲ್‌ನಲ್ಲಿ ಊಟ ಮಾಡುತ್ತಿದ್ದ ಒಂಬತ್ತು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಾಸ್ಟೆಲ್ ತೆರವುಗೊಳಿಸಲಾಗಿದೆ. ಗುರುವಾರ ಮಧ್ಯಾಹ್ನ ಬಿಜೆ ವೈದ್ಯಕೀಯ ಕಾಲೇಜಿನ ಮೆಸ್ ಕಟ್ಟಡಕ್ಕೆ ಏರ್ ಇಂಡಿಯಾ ವಿಮಾನ ಅಪ್ಪಳಿಸಿದ್ದು ಐವರು ವೈದ್ಯರು ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ಸಾವನ್ನಪ್ಪಿದ್ದಾರೆ.
ಈ ವಿಮಾನ ದುರಂತದ ವೇಳೆ ಅಡುಗೆಯವರು ಸೇರಿದಂತೆ 60ಕ್ಕೂ ಹೆಚ್ಚು ವೈದ್ಯರು ಮತ್ತು ಮೆಸ್ ಸಿಬ್ಬಂದಿ ಒಳಗೆ ಇದ್ದರು ಎನ್ನಲಾಗಿದೆ. ಊಟದ ಸಮಯವಾಗಿದ್ದ ಕಾರಣ ಅನೇಕ ವೈದ್ಯರು ಊಟಕ್ಕಾಗಿ ಮೆಸ್‌ಗೆ ಬಂದಿದ್ದರು. 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಐವರು ಗಂಭೀರವಾಗಿದ್ದಾರೆ.
ಇದನ್ನು ಓದಿದ್ದೀರಾ? ಊಟ ಮಾಡುತ್ತಿದ್ದಾಗಲೇ ಹಾಸ್ಟೆಲ್ ಮೇಲೆ ಬಿದ್ದ ವಿಮಾನ; 7 ವೈದ್ಯಕೀಯ ವಿದ್ಯಾರ್ಥಿಗಳ ಸಾವು
ಇನ್ನು ದುರಂತದಲ್ಲಿ ಮೃತಪಟ್ಟವರಲ್ಲಿ ಸಿವಿಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಡಾ. ಪ್ರದೀಪ್ ಸೋಲಂಕಿ ಅವರ ಗರ್ಭಿಣಿ ಪತ್ನಿ ಕೂಡ ಸೇರಿದ್ದಾರೆ. ವಿದ್ಯಾರ್ಥಿ ಡಾ. ನೀಲಕಂಠ್ ಅವರು ತಮ್ಮನ್ನು ಭೇಟಿಯಾಗಲು ಬಂದಿದ್ದ ತಾಯಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮನನ್ನು ಕಳೆದುಕೊಂಡಿದ್ದಾರೆ.
ಒಟ್ಟಾಗಿ ನಾಲ್ಕು ಕಟ್ಟಡಗಳ ಮೇಲೆ ಈ ವಿಮಾನ ಪತನ ಪರಿಣಾಮ ಬೀರಿದೆ. ಇವೆಲ್ಲವುದರ ನಡುವೆ ಇದೀಗ ಸಂಪೂರ್ಣ ಹಾಸ್ಟೆಲ್ ಅನ್ನೇ ತೆರವು ಮಾಡಬೇಕಾಗಿದೆ. ತನಿಖೆ ಪ್ರಾರಂಭಿಸುತ್ತಿದ್ದಂತೆ, ಹಾಸ್ಟೆಲ್ ಕಟ್ಟಡಗಳನ್ನು ಅಸುರಕ್ಷಿತವೆಂದು ಗುರುತಿಸಲಾಗಿದ್ದು, ಹಾಸ್ಟೆಲ್ ಖಾಲಿ ಮಾಡುವಂತೆ ಸೂಚಿಸಲಾಗಿದೆ.
Just in !
— India Watch (@IndiaWatchOff) June 12, 2025
Visuals from inside of the BJ Medical College UG Boys hostel mess in Ahmedabad Gujarat where Air India London bound flight crashed
Engine tore the walls of the hostel.Many students are feared to be dead as it was lunch time#PlaneCrash #BJMedicalCollege https://t.co/VQ5sk0wWk0 pic.twitter.com/fN52JtKhno
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿ ಜೆ ವೈದ್ಯಕೀಯ ಕಾಲೇಜಿನ ಡೀನ್ ಡಾ. ಮೀನಾಕ್ಷಿ ಪರೇಖ್, “ಸುರಕ್ಷತೆಗಾಗಿ ಸ್ಥಳಾಂತರ ಮಾಡುವುದು ಅಗತ್ಯ. ಹಾಸ್ಟೆಲ್ ಖಾಲಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ನಾಲ್ಕು ಕಟ್ಟಡಗಳಲ್ಲಿ ಇರುವವರನ್ನು ತೆರವು ಮಾಡಲಾಗುವುದು” ಎಂದು ತಿಳಿಸಿದ್ದಾರೆ.
“ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳನ್ನು ಯುಎನ್ ಮೆಹ್ತಾ ಹಾಸ್ಟೆಲ್, ದಂತ ಕಾಲೇಜು ಮತ್ತು ಮಿಥಿಲಾ ಹಾಸ್ಟೆಲ್‌ಗೆ ಸ್ಥಳಾಂತರಿಸಲಾಗಿದೆ. ಜಿಸಿಆರ್‌ಎಸ್ ವೈದ್ಯರು ಕ್ಯಾಂಪಸ್‌ನಲ್ಲಿಯೇ ಇದ್ದಾರೆ. ವಸತಿ ಸಮಸ್ಯೆ ಆಗದಿರಲಿ ಎಂದು ನಾವು ಒಂದು ವರ್ಷಕ್ಕೆ 50 ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.
