ರಾಷ್ಟ್ರೀಯ ರಾಜಧಾನಿ ನವದೆಹಲಿ ಹಾಗೂ ಉತ್ತರ ಭಾರತದ ಕೆಲವು ಕಡೆ ಇಂದು ಬೆಳಿಗ್ಗೆ 5.36ಕ್ಕೆ ಪ್ರಬಲ ಭೂಕಂಪ ಉಂಟಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ(ಎನ್‌ಸಿಎಸ್) ಪ್ರಕಾರ ಭೂಕಂಪನದ ಕೇಂದ್ರಬಿಂದು ದೌಲಾ ಕುವಾನ್‌ನಲ್ಲಿರುವ ದುರ್ಗಾಬಾಯಿ ದೇಶಮುಖ್ ಮಹಾವಿದ್ಯಾಲಯದ ಬಳಿ ಪತ್ತೆಯಾಗಿದೆ.
ಭೂಕಂಪದಿಂದ ದೆಹಲಿ, ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿರುವ ಹಲವಾರು ಬಹುಮಹಡಿ ಕಟ್ಟಡಗಳ ನಿವಾಸಿಗಳು ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಬಿಹಾರದ ಕೆಲವು ಕಡೆಗಳಲ್ಲಿ ಭೂಕಂಪನ ಸಂಭವಿಸಿದೆ.
ಗಾಜಿಯಾಬಾದ್‌ನ ನಿವಾಸಿಯೊಬ್ಬರು ಈ ರೀತಿಯ ಅನುಭವವನ್ನು ನನ್ನ ಜೀವಮಾನದಲ್ಲಿ ಅನುಭವಿಸಿರಲಿಲ್ಲ ಎಂದು ಆತಂಕದಿಂದ ತಿಳಿಸಿದ್ದಾರೆ. ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದ ಪ್ರಯಾಣಿಕರು ಭೂಕಂಪನ ಉಂಟಾದಾಗ ಗಾಬರಿಗೊಂಡು ಎಲ್ಲರೂ ಅಲ್ಲಿಂದ ಹೊರಗೆ ಓಡಿಬಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಮೆರಿಕ ನೆಲದಲ್ಲಿ ಮೋದಿ ಸಾಧಿಸಿದ್ದಕ್ಕಿಂತ ತಲೆ ಬಾಗಿದ್ದೇ ಹೆಚ್ಚು
ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ. ಆದರೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 5 ಕಿಲೋಮೀಟರ್ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಕೂಡ ದೆಹಲಿಯ ನಾಗರಿಕರಿಗೆ ಸುರಕ್ಷತೆಯಿಂದಿರಲು ಮನವಿ ಮಾಡಿದ್ದಾರೆ. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ.ಪ್ರತಿಯೊಬ್ಬರು ಶಾಂತರೀತಿಯಲ್ಲಿ ಇದ್ದು, ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಮುಂದಿನ ಸಂಭವನೀಯ ತೊಂದರೆಗಳ ಬಗ್ಗೆ ಎಚ್ಚರವಾಗಿರಬೇಕು. ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ ಎಂದು ತಿಳಿಸಿದ್ದಾರೆ.
ದೆಹಲಿ ಪೊಲೀಸರು ನಾಗರಿಕರಿಗೆ ಸಹಾಯಕ್ಕಾಗಿ ತುರ್ತು ಸಹಾಯವಾಣಿ ಕರೆ 112 ಕ್ಕೆ ಕರೆ ಮಾಡಬೇಕೆಂದು ತಿಳಿಸಿದ್ದಾರೆ.
