ಬಿಜೆಪಿ ಅಭಿವೃದ್ಧಿಗೆ ಸಂಬಂಧಿಸಿದಂತೆ ಆರ್ಥಿಕ ಪರಿಭಾಷೆಯ ‘ಟ್ರಿಪಲ್-ಡೌನ್’ ಎಂಬುದನ್ನು ನಂಬುತ್ತದೆ. ಆದರೆ, ಸಾಮಾಜಿಕವಾಗಿ ಸಂಘರ್ಷಗಳ ಇಳಿಕೆ ಮತ್ತು ಸಾಮರಸ್ಯದ ಬೆಳವಣಿಗೆಯ ಆಧಾರದ ಮೇಲೆ ದೇಶವು ಉತ್ತಮವಾಗಿದೆ ಎಂಬುದನ್ನು ಕಾಂಗ್ರೆಸ್ ನಂಬುತ್ತದೆ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ತಮಿಳುನಾಡಿನ ಐಐಟಿ ಮದ್ರಾಸ್ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದದ ನಡೆಸಿದ್ದಾರೆ. ಈ ವೇಳೆ, ಬಿಜೆಪಿ ಮತ್ತು ಕಾಂಗ್ರೆಸ್ ಯಾವ ರೀತಿಯಲ್ಲಿ ಭಿನ್ನ ಎಂದು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗೆ ರಾಹುಲ್ ಗಾಂಧಿ ಉತ್ತರಿಸಿದ್ದಾರೆ. “ಸಂಪನ್ಮೂಲಗಳ ವಿತರಣೆ ಹೆಚ್ಚು ನ್ಯಾಯಯುತವಾಗಿ ಆಗಬೇಕು. ಅಭಿವೃದ್ಧಿಯು ವಿಶಾಲ ಮತ್ತು ಎಲ್ಲರನ್ನೂ ಒಳಗೊಂಡಿರಬೇಕು. ಇದನ್ನೇ ಕಾಂಗ್ರೆಸ್ ನಂಬಿದೆ” ಎಂದು ಹೇಳಿದ್ದಾರೆ.
“ಸರ್ಕಾರಗಳ ಪ್ರಮುಖ ಜವಾಬ್ಧಾರಿಗಳಲ್ಲಿ ದೇಶದ ಜನರಿಗೆ ಗುಣಮಟ್ಟದ ಶಿಕ್ಷಣ ಖಾತರಿಪಡಿಸುವುದು ಕೂಡ ಒಂದು. ಖಾಸಗೀಕರಣ ಮಾಡಿ, ಆರ್ಥಿಕ ಪ್ರೋತ್ಸಾಹ ನೀಡುವುದರಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ. ಸರ್ಕಾರಗಳು ಶಿಕ್ಷಣಕ್ಕಾಗಿ ಹೆಚ್ಚು ವೆಚ್ಚ ಮಾಡಬೇಕು. ಸಾರ್ವಜನಿಕ ಸಂಸ್ಥೆಗಳನ್ನು ಬಲಪಡಿಸಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
“ಭಾರತ ಜೋಡೋ ಯಾತ್ರೆಯ ಸಮಯದಲ್ಲಿಹಲವಾರು ಮಕ್ಕಳನ್ನು ‘ನೀವು ಮುಂದೆ ಏನಾಗಲು ಬಯಸುತ್ತೀರಿ’ ಎಂದು ಕೇಳಿದ್ದೆ. ಅವರು ವಕೀಲರು, ವೈದ್ಯರು, ಇಂಜಿನಿಯರ್, ಸೈನಿಕರಾಗಲು ಬಯಸಿರುವುದಾಗಿ ಹೇಳಿದರು. ಈ ದೇಶದಲ್ಲಿ ಕಲಿಯಲು ಕೇವಲ ಕೆಲವೇ ವಿಷಯಗಳಿವೆ ಎಂದಾಗಬಾರದು” ಎಂದು ಹೇಳಿದ್ದಾರೆ.