ಪಂಜಾಬ್‌ನಲ್ಲಿ ಭತ್ತದ ಹುಲ್ಲನ್ನು ಸುಡಲಾಗುತ್ತಿದೆ. ಅದರ ಹೊಗೆ ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ಈ ಆರೋಪಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿರುವ ಎಎಪಿ, “ಪಂಜಾಬ್‌ನ ಹೊಗೆ ಬಿಜೆಪಿ ಆಡಳಿತವಿರುವ ಹರಿಯಾಣವನ್ನು ‘ಬೈ-ಪಾಸ್’ ಮಾಡಿ ನೇರವಾಗಿ ದೆಹಲಿಗೆ ಬರಲು ಪೈಪ್‌ಲೈನ್ ಇದೆಯೇ?” ಎಂದು ಜರಿದಿದೆ.
ದೆಹಲಿಯ ವಾಯುಮಾಲಿನ್ಯಕ್ಕೆ ಪಂಜಾಬ್‌ನಲ್ಲಿ ಭತ್ತದ ಹುಲ್ಲು ಸುಡುವಿಕೆಯೇ ಕಾರಣವೆಂದು ದೆಹಲಿ ಬಿಜೆಪಿ ಸರ್ಕಾರದ ಸಚಿವ ಮಜಿಂದರ್ ಸಿಂಗ್ ಸಿರ್ಸಾ ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಗಳು ಸುಳ್ಳು ಎಂದು ಪಂಜಾಬ್ ಹಣಕಾಸು ಸಚಿವ ಹರ್‌ಪಾಲ್ ಸಿಂಗ್ ಚೀಮಾ ಮತ್ತು ಎಎಪಿ ಪಂಜಾಬ್ ಮಾಧ್ಯಮ ಉಸ್ತುವಾರಿ ಬಲ್ತೇಜ್ ಹೇಳಿದ್ದಾರೆ. “ಭತ್ತದ ಹುಲ್ಲು ನಿರ್ವಹಣೆಯಲ್ಲಿ ಪಂಜಾಬ್ ಸರ್ಕಾರವು ಮಹತ್ವದ ಸಾಧನೆ ಮಾಡಿದ್ದು, ಕಳೆದ ವರ್ಷದ ಋತುವಿನಲ್ಲಿ 80%ರಷ್ಟು ಭತ್ತದ ಹುಲ್ಲು ಸುಡುವುದು ಕಡಿಮೆಯಾಗಿದೆ ಎಂಬುದನ್ನು ಸಂಸತ್ತಿನಲ್ಲಿಯೇ ಅಧಿಕೃತವಾಗಿ ಕೇಂದ್ರ ಸರ್ಕಾರ ಹೇಳಿದೆ” ಎಂಬುದನ್ನು ನೆನಪಿಸಿದ್ದಾರೆ.
ಎಎಪಿಯ ಇಬ್ಬರೂ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, “ಭತ್ತದ ಹುಲ್ಲು ನಿರ್ವಹಣೆಗಾಗಿ ರಾಜ್ಯ ಸರ್ಕಾರವು ಕಳೆದ ಐದು ವರ್ಷಗಳಿಂದ ನಿರಂತರವಾಗಿ ರೈತರಿಗೆ ಬೆಂಬಲ ನೀಡುತ್ತಾ ಬಂದಿದೆ. ರಾಜ್ಯ ಬೊಕ್ಕಸದಿಂದ 800 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಯಂತ್ರೋಪಕರಣಗಳನ್ನು ರೈತರಿಗೆ ವಿತರಿಸಿದೆ. ಮಾತ್ರವಲ್ಲದೆ, ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಪಂಜಾಬ್‌ನಲ್ಲಿ ಹುಲ್ಲು ಸುಡುವ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
“ಬಿಜೆಪಿ ಮೊದಲಿನಿಂದಲೂ ರೈತ ವಿರೋಧಿ ಧೋರಣೆ ಹೊಂದಿರುವ ಪಕ್ಷ. ಮಜಿಂದರ್ ಸಿಂಗ್ ಸಿರ್ಸಾ ಸೇರಿದಂತೆ ಬಿಜೆಪಿ ನಾಯಕರು ರೈತರ ಮೇಲೆ ಪ್ರಕರಣಗಳನ್ನು ದಾಖಲಿಸಬೇಕೆಂದು ಆಗ್ರಹಿಸುತ್ತಿರುವುದು ಅವರ ರೈತ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ದೇಶದ ಜನರಿಗೆ ಅನ್ನ ನೀಡುವ ಅನ್ನದಾತರನ್ನು ಬೆಂಬಲಿಸುವ ಬದಲು, ಬಿಜೆಪಿ ನಾಯಕರು ಅವರನ್ನು ಬೆದರಿಸುವ ಮತ್ತು ಹೀಯಾಳಿಸುವ ರಾಜಕಾರಣ ಮಾಡುತ್ತಿದ್ದಾರೆ, ಪಂಜಾಬ್‌ನಲ್ಲಿ ಎಲ್ಲೋ ಒಂದೆಡೆ ಸಣ್ಣಪುಟ್ಟ ಘಟನೆಗಳು ನಡೆದರೆ ಅದನ್ನು ಇಡೀ ರಾಜ್ಯದಾದ್ಯಂತ ದೊಡ್ಡ ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.
ಈ ಲೇಖನ ಓದಿದ್ದೀರಾ?: ಇಂಟರ್ನೆಟ್‌ನಿಂದ AIವರೆಗೆ.. ದಶಕಗಳ ಹಿಂದೆಯೇ ಜಗತ್ತಿನ ಭವಿಷ್ಯ ಕಂಡಿದ್ದ ಗೀತೆಗಳಿವು!
“ರಾಜ್ಯದಲ್ಲಿ ಭತ್ತದ ಕಟಾವೇ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಆದರೂ ಬಿಜೆಪಿ ನಾಯಕರು ಪಂಜಾಬ್‌ನಿಂದ ದೆಹಲಿಗೆ ಹೊಗೆ ತಲುಪುತ್ತಿದೆ ಎಂದು ಸೋಗಲಾಡಿತನದ ರಾಜಕಾರಣ ಮಾಡುತ್ತಿದ್ದಾರೆ. ಪಂಜಾಬ್‌ನಲ್ಲಿ ಬೆಂಕಿ ಹತ್ತಿಕೊಂಡೇ ಇಲ್ಲ ಎಂದ ಮೇಲೆ, ಅಲ್ಲಿಂದ ಬರುವ ಹೊಗೆ ಮಧ್ಯದಲ್ಲಿರುವ ಹರಿಯಾಣವನ್ನು ದಾಟಿಕೊಂಡು ನೇರವಾಗಿ ದೆಹಲಿಗೆ ತಲುಪಲು ಪಂಜಾಬ್‌ನಿಂದ ದೆಹಲಿಗೆ ಏನಾದರೂ ಪ್ರತ್ಯೇಕ ಪೈಪ್‌ಲೈನ್ ಇದೆಯೇ” ಎಂದು ಅವರು ಪ್ರಶ್ನಿಸಿದ್ದಾರೆ. ಬಿಜೆಪಿಗರ ಸುಳ್ಳು ಆರೋಪಗಳನ್ನು ಲೇವಡಿ ಮಾಡಿದ್ದಾರೆ.
“ಪಂಜಾಬ್ ಅನ್ನು ‘ಮಾದಕ ವ್ಯಸನಿಗಳ ರಾಜ್ಯ’ ಅಥವಾ ‘ಮಾಲಿನ್ಯಕಾರಕ ರಾಜ್ಯ’ ಎಂದು ಬಿಂಬಿಸುವ ಮೂಲಕ ರಾಜ್ಯದ ಜನರಿಗೆ ಮತ್ತು ಇಡೀ ದೇಶಕ್ಕೆ ಅನ್ನನೀಡುವ ರೈತರ ಪರಿಶ್ರಮಕ್ಕೆ ಅಪಮಾನ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ಪಂಜಾಬ್ ಅನ್ನು ಗುರಿಯಾಗಿಸಿಕೊಂಡು ರಾಜಕೀಯ ದುರುದ್ದೇಶದ ಅಪಪ್ರಚಾರ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. ತಮ್ಮದೇ ಆಡಳಿತವಿರುವ ಹರಿಯಾಣ ಮತ್ತು ಉತ್ತರ ಪ್ರದೇಶದ ಕಡೆ ಗಮನಹರಿಸಿ ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸುವತ್ತ ಗಮನಹರಿಸಲಿ” ಎಂದಿದ್ದಾರೆ.




