ಬಿಜೆಪಿ ಸರ್ಕಾರದ ಕಪಿಮುಷ್ಟಿಯಲ್ಲಿ ED: ಪ್ರಕರಣಗಳು ಏರಿಕೆ – ಶಿಕ್ಷೆಗಳು ಬೆರಳೆಣಿಕೆ

Date:

Advertisements

ದೆಹಲಿ ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಿಆರ್‌ಎಸ್ ನಾಯಕಿ ಕೆ ಕವಿತಾ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೆ ಇದೇ ಪ್ರಕರಣದಲ್ಲಿ ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಸರ್ವೋಚ್ಚ ನ್ಯಾಯಾಲಯ ಜಾಮೀನು ನೀಡಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೂ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ದೊರೆತರೂ ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಸೆರೆಮನೆಯಲ್ಲಿದ್ದಾರೆ.

ಈ ಪ್ರಕರಣವನ್ನು ದಾಖಲಿಸಿದ್ದು ಕೇಂದ್ರದ ಸ್ವಾಯತ್ತ ಸಂಸ್ಥೆಯಾಗಿರುವ ಇ.ಡಿ (ಜಾರಿ ನಿರ್ದೇಶನಾಲಯ). ಇ.ಡಿ ಸಂಸ್ಥೆಯು ಅಬಕಾರಿ ನೀತಿಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 20 ತಿಂಗಳು ವಿಚಾರಣೆ ನಡೆಸಿದೆ. ಅದಲ್ಲದೆ 493 ಸಾಕ್ಷಿಗಳು ಹಾಗೂ 50 ಸಾವಿರ ಪುಟಗಳ ದಾಖಲೆಗಳನ್ನು ಕಲೆ ಹಾಕಿದೆ. ಲಕ್ಷಕ್ಕೂ ಹೆಚ್ಚು ಪುಟಗಳಷ್ಟು ಡಿಜಿಟಲ್ ದಾಖಲೆಗಳನ್ನು ಈ ಪ್ರಕರಣ ಒಳಗೊಂಡಿದೆ. ಆದರೂ ಪ್ರಕರಣದಲ್ಲಿ ಮುಖ್ಯವಾದ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಸುಪ್ರೀಂ ಕೋರ್ಟ್ ಇ.ಡಿ ವಿರುದ್ಧ ಚಾಟಿ ಬೀಸಿದೆ.

ಸುಪ್ರೀಂ ಕೋರ್ಟ್‌ನ ಮುಖ್ಯ ತಕರಾರು ಏನೆಂದರೆ, ಬಿಜೆಪಿಯ ರಾಜಕೀಯ ದ್ವೇಷದ ಕಾರಣದಿಂದ ತಾನೊಂದು ಸ್ವಾಯತ್ತ ಸಂಸ್ಥೆ ಎಂಬುದನ್ನು ಮರೆತು ಇ.ಡಿ ಮನೀಶ್‌ ಸಿಸೋಡಿಯಾ ಅವರನ್ನು 17 ತಿಂಗಳು, ಕೆ ಕವಿತಾ ಅವರಿಗೆ 5 ತಿಂಗಳು ಹಾಗೂ ದೆಹಲಿ ಮುಖ್ಯಮಂತ್ತಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೆಲವು ತಿಂಗಳು ಸೆರೆಮನೆಯಲ್ಲಿಟ್ಟಿದ್ದು ಬಿಟ್ಟರೆ ಮತ್ತೆ ಏನನ್ನೂ ಸಾಧಿಸಲಿಲ್ಲ.

Advertisements

ಕಳೆದ 2014ರಿಂದ, 10 ವರ್ಷಗಳ ಹಿಂದೆ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳನ್ನು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಹತ್ತಿಕ್ಕುವ ಕೆಲಸಗಳು ಚಲಾವಣೆಗೆ ಬಂದವು. ಆ ನಂತರ ಅವು ತೀವ್ರಗತಿಯಲ್ಲಿ ಏರಿಕೆಯಾಗತೊಡಗಿದವು. ಜಾರಿ ನಿರ್ದೇಶನ ಮಾತ್ರವಲ್ಲ ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಗಳಂಥ ತನಿಖಾ ಸಂಸ್ಥೆಗಳನ್ನೂ ದುರ್ಬಳಕೆ ಮಾಡಿಕೊಳ್ಳಲಾಯಿತು. ಬಿಜೆಪಿ ಸರ್ಕಾರ ಹೇಳಿದಂತೆ ಕೇಳಿದ ಈ ಸಂಸ್ಥೆಗಳು ಬಿಜೆಪಿ ಅಧಿಕಾರದ ಅವಧಿಯಲ್ಲಿ ವಿರೋಧ ಪಕ್ಷಗಳ ನಾಯಕರನ್ನು ಗುರಿಯನ್ನಾಗಿಸಿಕೊಂಡು ಹೆಚ್ಚು ಆಸಕ್ತಿ ವಹಿಸಿದವು.

ವಿಪಕ್ಷ ನಾಯಕರ ಮೇಲೆ ಹೆಚ್ಚು ಪ್ರಕರಣಗಳು

ಜಾರಿ ನಿರ್ದೇಶನಾಲಯವು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಎಫ್‌ಇಎಂಎ) ಹಾಗೂ ಹಣ ಅಕ್ರಮ ವರ್ಗಾವಣೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸುತ್ತದೆ. ಬಹುತೇಕ ಸಂದರ್ಭಗಳಲ್ಲಿ ಎನ್‌ಜಿಒಗಳ ಮೇಲೆ, ಸಂಘ ಸಂಸ್ಥೆಗಳ ಮೇಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಇ.ಡಿ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ನಾಯಕರ ಮೇಲೆ ಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ.

ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ವಿರೋಧ ಪಕ್ಷಗಳ ನಾಯಕರ ವಿರುದ್ಧವೇ ಹೆಚ್ಚಿನ ಅಂದರೆ, ಶೇ 95ರಷ್ಟು ಪ್ರಕರಣಗಳನ್ನು ದಾಖಲಿಸಲಾಗಿದೆ. 2014ರಿಂದ ಇಲ್ಲಿಯವರೆಗೆ ಇ.ಡಿ ಅಧಿಕಾರಿಗಳು ವಿರೋಧ ಪಕ್ಷಗಳ 150ಕ್ಕೂ ಹೆಚ್ಚು ನಾಯಕರ ಮನೆ ಮೇಲೆ ದಾಳಿ ನಡೆಸಿದ್ದಾರೆ. 2014ಕ್ಕೂ ಮೊದಲು ಶೇ 93ರಷ್ಟು ದಾಳಿಗಳು ವ್ಯಕ್ತಿಗಳು ನೀಡಿದ ದೂರಿನ ಅನ್ವಯ ನಡೆಯುತ್ತಿದ್ದವು. ಈಗ ಈ ಪ್ರಮಾಣ ಶೇ 29ಕ್ಕೆ ಇಳಿದಿದೆ. ಹಾಗಿದ್ದರೆ, ಅಧಿಕಾರಿಗಳು ಈಗ ಯಾವ ಆಜ್ಞೆ, ಯಾರ ಆದೇಶಗಳನ್ನು ಪಾಲಿಸಿ ದಾಳಿ ನಡೆಸುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡದಿರದು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದರ್ಶನಾತಿಥ್ಯ- ಪೊಲೀಸರಿಂದ ಪೊಲೀಸರಿಗಾದ ಅವಮಾನ

ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ, ವಿರೋಧಿಗಳನ್ನು ಬಗ್ಗುಬಡಿಯುವುದಕ್ಕಾಗಿಯೇ ಜಾರಿ ನಿರ್ದೇಶನಾಲಯಕ್ಕೆ ಹೆಚ್ಚು ‘ಶಕ್ತಿ’ ತುಂಬಲಾಯಿತು. 2014ರ ಬಳಿಕ ಇ.ಡಿ ಅಧಿಕಾರಿಗಳು ದಾಖಲಿಸುತ್ತಿದ್ದ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಸಂಸತ್ತಿಗೆ ನೀಡಿದ ಮಾಹಿತಿ ಪ್ರಕಾರ, ಹಣ ಅಕ್ರಮ ವರ್ಗಾವಣೆ ಕಾಯ್ದೆ ಜಾರಿಯಾದ ಬಳಿಕ, ಅಂದರೆ, 2005ರಿಂದ 2024ರವರೆಗೆ 6,500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 19 ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 10 ವರ್ಷಗಳ ಅವಧಿಯಲ್ಲಿಯೇ 4,500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2005ರಿಂದ 2014ಕ್ಕೂ ಮೊದಲು ಕಾಯ್ದೆ ಜಾರಿಯಾದ 8 ವರ್ಷಗಳಲ್ಲಿ ದಾಖಲಾದ ಪ್ರಕರಣ ಸಂಖ್ಯೆ 1,845 ಮಾತ್ರ. ಆದರೆ ಕಳೆದ 10 ವರ್ಷಗಳಲ್ಲಿ ಇ.ಡಿ ದಾಖಲಿಸುತ್ತಿರುವ ಪ್ರಕರಣಗಳ ಸಂಖ್ಯೆ ಸುಮಾರು ಶೇ 144ರಷ್ಟು ಏರಿಕೆಯಾಗಿದೆ. ಇಷ್ಟೊಂದು ಭಾರಿ ಸಂಖ್ಯೆಯ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಪಟ್ಟವರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ. 2018-19ರಿಂದ 2022-23ರವರೆಗೆ ಐದು ವರ್ಷಗಳಲ್ಲಿ ಕೇವಲ 32 ಮಂದಿ ಶಿಕ್ಷೆಗೆ ಒಳಗಾಗಿದ್ದಾರೆ. ಇದೇ ಅವಧಿಯಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 354. ಈ ಅವಧಿಯಲ್ಲಿ ದಾಖಲಾದ ಪ್ರಕರಣಗಳು 3,867.

ಹೈಕೋರ್ಟ್‌ಗಳ ವಿರುದ್ಧ ಸುಪ್ರೀಂ ಬೇಸರ

ದೆಹಲಿ ಅಬಕಾರಿ ಪ್ರಕರಣದಲ್ಲಿ ಆರೋಪಿಗಳು ಎನಿಸಿಕೊಂಡವರನ್ನು ಹೆಚ್ಚು ದೀರ್ಘ ಅವಧಿಯ ಕಾಲ ಬಂಧನಕ್ಕೊಳಪಡಿಸಿದ ಕ್ರಮಕ್ಕೆ ಹೈಕೋರ್ಟ್‌ಗಳನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ವಿಚಾರಣೆ ಇಲ್ಲದೇ ದೀರ್ಘಕಾಲ ಸೆರೆಯಲ್ಲಿ ಇಡುವ ಮೂಲಕ, ಅವರ ತ್ವರಿತ ನ್ಯಾಯದ ಹಕ್ಕು ಮತ್ತು ಮೂಲಭೂತ ಹಕ್ಕಾದ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಂಡಂತಾಗಿದೆ. ಹಲವು ತಿಂಗಳುಗಳಷ್ಟು ದೀರ್ಘಕಾಲ ಸೆರೆವಾಸದಲ್ಲಿಡುವ ಮೂಲಕ ಮೇಲ್ಮನವಿದಾರರಿಗೆ ತ್ವರಿತ ವಿಚಾರಣೆಯ ಹಕ್ಕನ್ನು ವಂಚಿಸಲಾಗಿದೆ. ತ್ವರಿತ ವಿಚಾರಣೆಯ ಹಕ್ಕು ಮತ್ತು ಸ್ವಾತಂತ್ರ್ಯದ ಹಕ್ಕುಗಳು ಪವಿತ್ರವಾದ ಹಕ್ಕುಗಳು. ಇವುಗಳನ್ನು ನಿರಾಕರಿಸಲು, ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳು ಸಮರ್ಪಕವಾದ ಕಾರಣಗಳನ್ನು ನೀಡಬೇಕು. ಜಾಮೀನು ತಡೆಹಿಡಿಯುವುದನ್ನೇ ಶಿಕ್ಷೆಯನ್ನಾಗಿಸಬಾರದು ಎಂಬ ಕಾನೂನಿನ ತತ್ವವನ್ನು ವಿಚಾರಣಾ ನ್ಯಾಯಾಲಯಗಳು ಮತ್ತು ಹೈಕೋರ್ಟ್‌ಗಳು ಮರೆತಿವೆ. ಹೈಕೋರ್ಟ್ ಕಾನೂನಿನ ಸಂಬಂಧಿತ ಸೆಕ್ಷನ್‌ನ್ನು ಸಂಪೂರ್ಣವಾಗಿ ತಪ್ಪಾಗಿ ಅನ್ವಯಿಸಿದೆ. ನ್ಯಾಯಾಲಯಗಳು ಇಂತಹ ವಿಷಯಗಳಲ್ಲಿ ನ್ಯಾಯಾಂಗದ ವಿವೇಚನೆಯನ್ನು ಚಲಾಯಿಸಬೇಕು. ಜನಪ್ರತಿನಿಧಿ ಎಂಬ ಕಾರಣ ಹೇಳಿ ಜಾಮೀನು ನಿರಾಕರಿಸುವಂತಿಲ್ಲ. ಬಂಧಿತ ಪ್ರತಿಯೊಬ್ಬ ಮಹಿಳೆಗೂ ಜಾಮೀನು ಸಿಗಬೇಕು ಎಂದು ಸುಪ್ರೀಂ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ.

ಸಿಬಿಐ, ಐಟಿಯಿಂದಲೂ ದುರ್ಬಳಕೆ

ಬಿಜೆಪಿ ಸರ್ಕಾರ ಸಿಬಿಐ ಅನ್ನು ಕೂಡ ತನ್ನ ಆಣತಿಯಂತೆ ನಿರ್ವಹಿಸುವ ಸಂಸ್ಥೆಯನ್ನಾಗಿ ಮಾರ್ಪಡಿಸಿಕೊಂಡಿದೆ. 2014ರ ನಂತರ ಸಿಬಿಐ ವಿರೋಧಿ ಪಾಳಯದ ನಾಯಕರ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದೆ. 2004ರಿಂದ 2014ರವರೆಗೆ 72 ರಾಜಕೀಯ ನಾಯಕರ ಮೇಲೆ ಸಿಬಿಐ ತನಿಖೆ ನಡೆಸಿದೆ. ಈ ಸಂಖ್ಯೆಯಲ್ಲಿ ವಿರೋಧ ಪಕ್ಷಗಳ ನಾಯಕರ ಸಂಖ್ಯೆ 43, ಅಂದರೆ ಶೇ 60ರಷ್ಟು. ಆದರೆ, ಈಗಿನ ಈ ಪ್ರಮಾಣ ಶೇ 95ಕ್ಕೆ ಏರಿದೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣ, ಶಾಲಾ ಶಿಕ್ಷಕರ ನೇಮಕಾತಿ ಹಗರಣ ಪ್ರಕರಣಗಳನ್ನು ಸಿಬಿಐ ದಾಖಲಿಸಿಕೊಂಡಿವೆ. ಯುಪಿಎ ಅವಧಿಯ 2ಜಿ ಹಗರಣದಲ್ಲಿ ಖುಲಾಸೆಯಾಗಿದ್ದ ಡಿಎಂಕೆ ನಾಯಕರ ವಿರುದ್ಧ ಮತ್ತೆ ತನಿಖೆಗೆ ಅನುಮತಿ ಕೋರಲಾಗಿದೆ. ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಶಿರೋಮಣಿ ಅಕಾಲಿ ದಳದ ಹಲವು ನಾಯಕರ ವಿರುದ್ಧ, ಆದು ಎನ್‌ಡಿಎ ಮೈತ್ರಿಕೂಟ ತೊರೆದ ನಂತರ ಸಿಬಿಐ ಪ್ರಕರಣಗಳನ್ನು ದಾಖಲಿಸಿದೆ. ಕರ್ನಾಟಕ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್ ವಿರುದ್ಧವೂ ಸಿಬಿಐನಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಈ ಅವಧಿಯಲ್ಲಿ ಸಿಬಿಐ ತನಿಖೆಗೆ ಒಳಪಟ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಬಿಜೆಪಿಯವರು ಯಾರೂ ಸಿಗುವುದಿಲ್ಲ. ಬಿಜೆಪಿ ನಾಯಕರ ವಿರುದ್ಧ 2014ಕ್ಕೂ ಮುನ್ನ ದಾಖಲಾಗಿದ್ದ ಪ್ರಕರಣಗಳಲ್ಲಿ ತನಿಖೆ ಸ್ಥಗಿತವಾಗಿದೆ ಅಥವಾ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ.     

ಅದೇ ರೀತಿ ಆದಾಯ ತೆರಿಗೆ ಇಲಾಖೆಯನ್ನೂ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಂಡು, ವಿರೋಧ ಪಕ್ಷಗಳ ನಾಯಕರನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಐಟಿ ದಾಳಿಗೆ ಒಳಗಾಗಿರುವವರಲ್ಲಿ ಎನ್‌ಡಿಎಯೇತರ ಪಕ್ಷಗಳ ನಾಯಕರೆ ಹೆಚ್ಚಾಗಿದ್ದಾರೆ ಎಂದು ಹಲವು ವರದಿಗಳು ಹೇಳುತ್ತವೆ.

ಅಂದರೆ, ಬಿಜೆಪಿ ಆಡಳಿತದ 10 ವರ್ಷಗಳಲ್ಲಿ ಕೇಂದ್ರದ ಸ್ವಾಯತ್ತ ಸಂಸ್ಥೆಗಳನ್ನು ಮೋದಿ ಮತ್ತು ಅಮಿತ್ ಶಾಗಳು ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಂಡಿದ್ದಾರೆ. ಅಧಿಕಾರ ಬಳಸಿ ವಿರೋಧ ಪಕ್ಷಗಳ ನಾಯಕರನ್ನು ಹಣಿದಿದ್ದಾರೆ. ಹೈರಾಣಾಗುವಂತೆ ಮಾಡಿದ್ದಾರೆ. ಹತ್ತಿಕ್ಕಲು ನೋಡಿದ್ದಾರೆ. ಇದನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

Download Eedina App Android / iOS

X