2019ರಲ್ಲಿ ಪಂಜಾಬ್ – ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಹಗರಣ ಹಾಗೂ 2020ರಲ್ಲಿ ಯೆಸ್ ಬ್ಯಾಂಕ್ ದಿವಾಳಿಯಿಂದ ಸಾವಿರಾರು ಠೇವಣಿದಾರರು ತಾವಿಟ್ಟ ಹಣ ತೆಗೆದುಕೊಳ್ಳಲಾಗದೆ ಕಂಗಾಲಾಗಿದ್ದರು. ಆ ಸಂದರ್ಭದಲ್ಲಿ ಬ್ಯಾಂಕ್‌ನಲ್ಲಿಟ್ಟ ತಮ್ಮ ಠೇವಣಿ ಹಣ ಎಷ್ಟು ಸುರಕ್ಷಿತ ಎನ್ನುವ ಚಿಂತೆಯಲ್ಲಿ ಇತರ ಬ್ಯಾಂಕ್‌ಗಳ ಗ್ರಾಹಕರು ಚಿಂತಿತರಾಗಿದ್ದರು. ಆಗಲೇ ದೊಡ್ಡ ಮಟ್ಟದಲ್ಲಿ ಸಾರ್ವಜನಿಕರಿಗೆ ಬ್ಯಾಂಕ್ ಠೇವಣಿ ಹಣದ ಸುರಕ್ಷತೆಯ ಬಗ್ಗೆ ಆತಂಕ ಶುರುವಾಗಿತ್ತು.
ಸಾರ್ವಜನಿಕರು ತಾವು ಕೂಡಿಟ್ಟಿರುವ ಬಹುಪಾಲು ಹಣವನ್ನು ತೊಡಗಿಸಲು ಸುರಕ್ಷತೆ, ಭವಿಷ್ಯತ್ತಿನ ದೃಷ್ಟಿಯಿಂದ ನಿಶ್ಚಿತ ಠೇವಣಿ, ಆರ್‌ಡಿ, ಚಾಲ್ತಿ ಖಾತೆಗಳು ಮತ್ತು ಹಣದ ಮಾರುಕಟ್ಟೆ ಖಾತೆಗಳನ್ನು ತೆರೆಯತ್ತಾರೆ. ಖಾತೆದಾರರಿಗೆ ಖಾತೆ ಒಪ್ಪಂದವನ್ನು ನಿಯಂತ್ರಿಸುವ ನಿಯಮಗಳು ಮತ್ತು ಷರತ್ತುಗಳಲ್ಲಿ ಸೂಚಿಸಿರುವಂತೆ ಠೇವಣಿ ಮಾಡಿದ ಹಣವನ್ನು ಹಿಂಪಡೆಯುವ ಹಕ್ಕಿದೆ.
ಒಂದು ವೇಳೆ ಬ್ಯಾಂಕ್‌ಗಳು ದಿವಾಳಿಯಾದರೆ ಅಥವಾ ನಷ್ಟವುಂಟಾದರೆ ಕೇಂದ್ರದಿಂದ ಸಾರ್ವಜನಿಕರಿಗೆ ಎಷ್ಟು ಬ್ಯಾಂಕ್ ಠೇವಣಿ ಹಣ ವಾಪಸ್ ಬರುತ್ತದೆ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ಕೇಂದ್ರ ಹಣಕಾಸು ಇಲಾಖೆ ಹಾಗೂ ಆರ್‌ಬಿಐ ನಿಯಮಗಳ ಪ್ರಕಾರ ಬ್ಯಾಂಕ್‌ನಲ್ಲಿರುವ ಸಾರ್ವಜನಿಕರ ಹಣಕ್ಕೆ ಒಂದಿಷ್ಟು ಭದ್ರತೆ ನೀಡಲಾಗುತ್ತದೆ. ಆದರೆ ಇದೊಂದು ರೀತಿ ಆಮ್ಲಜನಕವೇ ಹೊರತು ನೀವು ಕೂಡಿಟ್ಟ ಎಲ್ಲ ಹಣ ಖಂಡಿತಾ ವಾಪಸ್ ಬರುವುದಿಲ್ಲ. ನೀವು ಠೇವಣಿಯಿಟ್ಟ ಬ್ಯಾಂಕುಗಳು ಕೂಡ ಆರ್‌ಬಿಐನ ನಿಯಮಗಳು ಹಾಗೂ ಕಾನೂನುಗಳಿಗೆ ಬದ್ಧವಾಗಿರಬೇಕು. ಆಗ ಮಾತ್ರ ಕೇಂದ್ರದಿಂದ ಆರ್ಥಿಕ ಪ್ಯಾಕೇಜ್ ದೊರಕುತ್ತದೆ.
ಅಮೆರಿಕದಂತಹ ಆರ್ಥಿಕವಾಗಿ ಮುಂದುವರೆದ ದೇಶಗಳಲ್ಲಿ ಬ್ಯಾಂಕ್‌ಗಳು ದಿವಾಳಿಯೆದ್ದರೆ ಅಲ್ಲಿನ ಸರ್ಕಾರಗಳು ಬೇಲ್‌ಔಟ್ ಹಾಗೂ ಬೇಲ್‌ಇನ್ ರೀತಿಯಲ್ಲಿ ಆರ್ಥಿಕ ನೆರವನ್ನು ಒದಗಿಸುತ್ತವೆ. ಬೇಲ್‌ಔಟ್ ಹಾಗೂ ಬೇಲ್‌ಇನ್‌ಗಳ ಬಗ್ಗೆ ಸರಳವಾಗಿ ಹೇಳುವುದಾದರೆ ನಷ್ಟ ಹೊಂದಿದ ಬ್ಯಾಂಕುಗಳ ಠೇವಣಿದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಬೆಂಬಲಿಸುವುದು ಹಾಗೂ ಮಧ್ಯಸ್ಥಿಕೆದಾರರ ಬೆಂಬಲದೊಂದಿಗೆ ಬ್ಯಾಂಕುಗಳನ್ನು ರಕ್ಷಿಸುವುದು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕದಲ್ಲಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಪ್ರತೀಕಾರ ಕ್ರಮವಾಗಿ ಅತ್ಯಾಚಾರ; ಬಯಲಿಗೆ ಬಾರದ ನೂರಾರು ಪ್ರಕರಣಗಳು
ಪೂರ್ತಿ ಹಣ ಬರುವುದಿಲ್ಲ
ಒಂದು ಬ್ಯಾಂಕ್ ಅಥವಾ ಬ್ಯಾಂಕಿಂಗ್ ವಲಯ ತೀವ್ರ ಸಂಕಷ್ಟದಲ್ಲಿದೆ ಎಂದಾದರೆ ಸರಕಾರ ಅದರ ನೆರವಿಗೆ ಧಾವಿಸಿ, ಒಂದಷ್ಟು ಪ್ರಮಾಣದ ಹಣವನ್ನು ನೀಡುತ್ತದೆ. ಭಾರತದಲ್ಲಿ 2017ರ ಏಪ್ರಿಲ್‌ನಿಂದ 2020 ಮಾರ್ಚ್‌ವರೆಗೆ 2.66 ಲಕ್ಷ ಕೋಟಿ ರೂ.ಗಳಷ್ಟು ಹಣವನ್ನು ಸಾರ್ವಜನಿಕ ಬ್ಯಾಂಕ್‌ಗಳಿಗೆ ಬೇಲೌಟ್ ನೀಡಲಾಗಿದೆ.
ಇದು ಎಂತಹ ವಿರೋಧಾಭಾಸವೆಂದರೆ, ಆಡಳಿತಶಾಹಿಗಳು ಹಾಗೂ ಉದ್ಯಮಿಗಳು ಮಾಡಿದ ಭ್ರಷ್ಟಾಚಾರ ಹಾಗೂ ವಂಚನೆಯಿಂದ ನಷ್ಟಕ್ಕೊಳಗಾದ ಬ್ಯಾಂಕುಗಳ ಸಾರ್ವಜನಿಕರ ಠೇವಣಿಗಳನ್ನು ರಕ್ಷಿಸಲು ಸಾರ್ವಜನಿಕರ ತೆರಿಗೆ ಹಣವನ್ನೇ ಬಳಸಬೇಕಾಗಿದೆ. ಸರ್ಕಾರವು ಸಾರ್ವಜನಿಕರ ಠೇವಣಿಗಳನ್ನು ರಕ್ಷಿಸಲು ಜನರ ಹಣವನ್ನೇ ನೀಡುತ್ತದೆ. ಆದರೆ ಸಾರ್ವಜನಿಕರು ಎಲ್ಲ ಕೂಡಿಟ್ಟ ಹಣ ಹಿಂತಿರುಗಿ ಬರುವುದಿಲ್ಲ.
5 ಲಕ್ಷ ರೂ. ಮಾತ್ರ ವಾಪಸ್
ಬ್ಯಾಂಕುಗಳು ದಿವಾಳಿಯೆದ್ದರೆ ಸಾರ್ವಜನಿಕರು ಎಷ್ಟೇ ದೊಡ್ಡ ಮಟ್ಟದ ಹಣ ಠೇವಣಿಯಿಟ್ಟಿದ್ದರೂ 5 ಲಕ್ಷ ರೂ ಮಾತ್ರ ಖಾತೆದಾರನಿಗೆ ನೀಡಲಾಗುತ್ತದೆ. 2020ರ ಮೊದಲು 1993, ಮೇ1 ರಿಂದ ಜಾರಿಯಲ್ಲಿದ್ದಂತೆ 1 ಲಕ್ಷ ರೂ ಮಾತ್ರ ನೀಡಲಾಗುತ್ತಿತ್ತು. 2020ರ ಫೆಬ್ರವರಿ 4ರ ಆರ್‌ಬಿಐನ ಕಾನೂನಿನ ಮಾರ್ಪಾಡಿನಂತೆ 5 ಲಕ್ಷ ರೂ.ಗಳಿಗೆ ಏರಿಸಲಾಗಿದೆ.
ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಬ್ಯಾಂಕ್‌ನ ಹಲವು ಶಾಖೆಗಳಲ್ಲಿ ಠೇವಣಿಗಳಿದ್ದರೆ ಅವೆಲ್ಲವನ್ನೂ ಪರಿಗಣಿಸಿ ‘ಡಿಐಸಿಜಿಸಿ’ ಠೇವಣಿ ವಿಮೆಗಳನ್ನು ನಿರ್ಧರಿಸುತ್ತದೆ. ಅಂದರೆ, ಈ ಸಮಯದಲ್ಲಿ ನಿಮ್ಮ ಹಣಕ್ಕೆ 5 ಲಕ್ಷ ವಿಮೆ ಕವರೇಜ್ ಮಾತ್ರ ಸಿಗುತ್ತದೆ. ಆದರೆ ಠೇವಣಿಗಳು ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿದ್ದರೆ ಅಥವಾ ಬೇರೆ ಬೇರೆ ಬ್ಯಾಂಕ್ ಖಾತೆಗಳಲ್ಲಿ ಇದ್ದರೆ ಅದಕ್ಕೆ ಪ್ರತ್ಯೇಕ ವಿಮಾ ಸುರಕ್ಷತೆ ಇರುತ್ತದೆ.
ಬ್ಯಾಂಕ್ ಹಾಗೂ ಆರ್ಥಿಕ ತಜ್ಞರ ಪ್ರಕಾರ ಹೆಚ್ಚು ಹಣವನ್ನು ಬ್ಯಾಂಕಿನಲ್ಲಿ ಠೇವಣಿಯಿಡಬೇಕೆಂದರೆ ಎಲ್ಲ ಹಣವನ್ನೂ ಒಂದೆಡೆ ಇಡುವುದಕ್ಕಿಂತ ಮೂರು – ನಾಲ್ಕು ಬ್ಯಾಂಕ್‌ಗಳಲ್ಲಿ ವಿಭಜಿಸಿ ಇಡಬೇಕು. ಒಂದು ವೇಳೆ ಬ್ಯಾಂಕ್ ಮುಳುಗಿದರೆ, ನಿಮಗೆ ಸಿಗುವುದು 5 ಲಕ್ಷ ರೂ. ಮಾತ್ರ.
ಆರ್‌ಬಿಐನ ಅಂಗ ಸಂಸ್ಥೆಯಾಗಿರುವ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ಡಿಐಸಿಜಿಸಿ) ನಿರ್ದಿಷ್ಟ ಪ್ರೀಮಿಯಂ ಪಾವತಿಸುವ ಮೂಲಕ ಬ್ಯಾಂಕುಗಳು ಗ್ರಾಹಕರ ಠೇವಣಿಗಳಿಗೆ ಭದ್ರತೆ ಒದಗಿಸುತ್ತದೆ. ಬ್ಯಾಂಕುಗಳು ದಿವಾಳಿಯಾದರೆ 5 ಲಕ್ಷದವರೆಗಿನ ಹಣ ಮಾತ್ರ ನಿಮಗೆ ದೊರಕುತ್ತದೆ.
ಸದ್ಯ ಡಿಐಸಿಜಿಸಿನಲ್ಲಿ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು (12), ಖಾಸಗಿ ಬ್ಯಾಂಕುಗಳು (21), ವಿದೇಶಿ ಬ್ಯಾಂಕುಗಳು (44), ಸಣ್ಣ ಹಣಕಾಸು ಬ್ಯಾಂಕುಗಳು (12), ಪಾವತಿ ಬ್ಯಾಂಕುಗಳು (6),ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (43), ಸ್ಥಳೀಯ ಪ್ರದೇಶದ ಬ್ಯಾಂಕುಗಳು (2), ರಾಜ್ಯ ಸಹಕಾರಿ ಬ್ಯಾಂಕುಗಳು (33), ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕುಗಳು (352) ಮತ್ತು ನಗರ ಸಹಕಾರಿ ಬ್ಯಾಂಕುಗಳು (1,497) ವಿಮೆ ಮಾಡಿಸಿರುವ (ಡಿಐಸಿಜಿಸಿ ವೆಬ್‌ಸೈಟಿನಲ್ಲಿರುವಂತೆ) ಬ್ಯಾಂಕ್‌ಗಳಾಗಿವೆ.

ಈ ಸುದ್ದಿ ಓದಿದ್ದೀರಾ? ಪುಟಿನ್ ಬಾಣಸಿಗ ಪ್ರಿಗೋಷಿನ್ ಯಾರು? ಪುಟಿನ್ ವಿರುದ್ಧವೇ ಬಂಡಾಯವೆದ್ದಿದ್ದೇಕೆ?
ಡಿಐಸಿಜಿಸಿ ಉಗಮ
ಬ್ಯಾಂಕುಗಳ ಸಂಕಷ್ಟದ ಸಮಯದಲ್ಲಿ ಠೇವಣಿದಾರರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್, ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ಡಿಐಸಿಜಿಸಿ)ವನ್ನು ಸ್ಥಾಪಿಸಿದೆ. 1948 ರಲ್ಲಿ ಬಂಗಾಳದಲ್ಲಿ ಬ್ಯಾಂಕಿಂಗ್ ಬಿಕ್ಕಟ್ಟು ಸಂಭವಿಸಿದಾಗ ದೇಶದಲ್ಲಿ ಈ ರೀತಿಯ ವೈಫಲ್ಯಗಳು ಮರುಕಳಿಸದಂತೆ ಠೇವಣಿದಾರರಿಗೆ ಒಂದಿಷ್ಟು ರಕ್ಷಣೆ ಒದಗಿಸುವ ಬಗ್ಗೆ ಸರ್ಕಾರವು 1950ರಲ್ಲಿ ಗ್ರಾಮೀಣ ಬ್ಯಾಂಕಿಂಗ್ ವಿಚಾರಣಾ ಸಮಿತಿಯನ್ನು ನೇಮಿಸಿತು. ಆದರೆ ಸಮಿತಿಯಿಂದ ತಕ್ಷಣದ ಕ್ರಮ ಸಾಧ್ಯವಾಗಲಿಲ್ಲ.
1960ರಲ್ಲಿ ದೇಶದ ಮತ್ತೆರಡು ಬ್ಯಾಂಕುಗಳಾದ ಲಕ್ಷ್ಮಿ ಬ್ಯಾಂಕ್ ಮತ್ತು ಪಲೈ ಸೆಂಟ್ರಲ್ ಬ್ಯಾಂಕ್ ದಿವಾಳಿಯಾದ ನಂತರ ಸರ್ಕಾರವು ಠೇವಣಿದಾರರ ವಿಮಾ ನಿಗಮ (ಡಿಐಸಿ) ಮಸೂದೆಯನ್ನು 1961ರಲ್ಲಿ ಪರಿಚಯಿಸಿತು. ಇದು ಸಂಸತ್ತಿನಲ್ಲಿ ಅಂಗೀಕಾರಗೊಂಡು ರಾಷ್ಟ್ರಪತಿಗಳ ಒಪ್ಪಿಗೆಯೊಂದಿಗೆ 1962, ಜನವರಿಯಲ್ಲಿ ಜಾರಿಗೆ ಬಂದಿತು. ಠೇವಣಿ ವಿಮಾ ಕಾಯಿದೆಯು ಹೆಸರೆ ಸೂಚಿಸುವಂತೆ ಸಾರ್ವಜನಿಕರ ಕನಿಷ್ಠ ಠೇವಣಿಗಳನ್ನು ರಕ್ಷಿಸುತ್ತದೆ ವಿನಃ ಸಾಲಗಳನ್ನು ಒಳಗೊಂಡಿರುವುದಿಲ್ಲ.
ಆರಂಭದಲ್ಲಿ ವಾಣಿಜ್ಯ ಬ್ಯಾಂಕ್ ಠೇವಣಿಗಳನ್ನು ಮಾತ್ರ ಒಳಗೊಂಡಿರುವ ಡಿಐಸಿ, 1968ರ ತಿದ್ದುಪಡಿಯ ನಂತರ ಸಹಕಾರಿ ಬ್ಯಾಂಕ್ ಠೇವಣಿಗಳನ್ನು ಸೇರಿಸಲು ಪ್ರಾರಂಭಿಸಲಾಯಿತು. ಅಂತಿಮವಾಗಿ 1978ರಲ್ಲಿ ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮವಾಗಿ (ಡಿಐಸಿಜಿಸಿ) ಮಾರ್ಪಡಿಸಲಾಯಿತು. ಆರಂಭದಲ್ಲಿ ಠೇವಣಿ ನೀಡಿಕೆ ಮೊತ್ತವು 1,500 ರೂ. ಒಳಗೊಂಡಿತ್ತು. 2020 ರಲ್ಲಿ 5 ಲಕ್ಷ ರೂ.ಗೆ ಏರಿಸಲಾಗಿದೆ.
ಠೇವಣಿಗಳಲ್ಲಿ 190.35 ಲಕ್ಷ ಕೋಟಿ ರೂ. ಹಣ
ಕೇಂದ್ರ ಸರ್ಕಾರದ ವರದಿಯ ಪ್ರಕಾರ, ಭಾರತದಲ್ಲಿ 2023ರ ಮಾರ್ಚ್ ವೇಳೆಗೆ ವಾಣಿಜ್ಯ ಬ್ಯಾಂಕುಗಳಲ್ಲಿ ಸಾರ್ವಜನಿಕರು ವಿವಿಧ ಠೇವಣಿಗಳಲ್ಲಿ 190.35 ಲಕ್ಷ ಕೋಟಿ ರೂ. ಹಣ ಹೂಡಿಕೆ ಮಾಡಿದ್ದಾರೆ. ಇದರಲ್ಲಿ ಶೇ. 62.5 ಹಣ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‌ಗಳಲ್ಲಿದೆ. ಇನ್ನುಳಿದ ಹಣ ಗ್ರಾಮೀಣ, ಸಹಕಾರಿ, ವಿದೇಶಿ ಹಾಗೂ ಅರೆ ಪಟ್ಟಣ ಪ್ರಾಂತ್ಯಗಳ ಬ್ಯಾಂಕ್‌ಗಳಲ್ಲಿ ಹೂಡಿಕೆಯಾಗಿದೆ. ಇದು ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ದ ಶೇ.70.80 ರಷ್ಟಿರಬಹುದು ಎಂದು ಅಂದಾಜಿಸಲಾಗಿದೆ.
ನಷ್ಟಕ್ಕೆ ಬ್ಯಾಂಕ್ ವಿಲೀನ
ಆರ್ಥಿಕ ಪ್ಯಾಕೇಜ್‌ಗೂ ಮೊದಲು ಸಂಕಷ್ಟದಲ್ಲಿರುವ ಬ್ಯಾಂಕ್‌ಗಳ ವ್ಯವಹಾರದಲ್ಲಿ ಬ್ಯಾಂಕ್ ವಿಲೀನಗೊಳಿಸುವ ಮೂಲಕ ಆರ್‌ಬಿಐ ಮಧ್ಯ ಪ್ರವೇಶಿಸುತ್ತದೆ. 1993ರಲ್ಲಿ ಖಾಸಗಿ ಬ್ಯಾಂಕ್ ಆದ ನ್ಯೂ ಬ್ಯಾಂಕ್ ಆಪ್ ಇಂಡಿಯಾ ದಿವಾಳಿ ಎದ್ದು ಹೋಗುವ ಸ್ಥಿತಿಯಲ್ಲಿದ್ದಾಗ, ಅದನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆಗೆ ವಿಲೀನಗೊಳಿಸಿತ್ತು. 2004ರಲ್ಲಿ, ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ಸಂಕಷ್ಟದಲ್ಲಿದ್ದಾಗ ಮಧ್ಯ ಪ್ರವೇಶಿಸಿ, ಅದನ್ನು ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜೊತೆಗೆ ವಿಲೀನಗೊಳಿಸಿತ್ತು.
ಕೆಲವೊಮ್ಮೆ ಸದೃಢತೆಯ ನೆಪವೊಡ್ಡಿ ಲಾಭದಲ್ಲಿರುವ ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ್ದೂ ಉಂಟು. ಕರ್ನಾಟಕ ಮೂಲದ ಪ್ರತಿಷ್ಠಿತ ವಿಜಯಾ ಬ್ಯಾಂಕ್ ಅನ್ನು 2019ರಲ್ಲಿ ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನಗೊಳಿಸಲಾಗಿತ್ತು. ಹಾಗೆಯೇ 2020ರಲ್ಲಿ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗಿತ್ತು.
ಕೆಟ್ಟ ಸಾಲ
ಎಸ್‌ಬಿಐ, ಪಿಎನ್‌ಬಿ ಸೇರಿದಂತೆ ಎಲ್ಲ ಬ್ಯಾಂಕ್‌ಗಳಲ್ಲೂ ಭಾರಿ ಪ್ರಮಾಣದ ಸುಸ್ಥಿ ಸಾಲ ವಂಚನೆಯಾಗುತ್ತಿದೆ. ಸೆ.2019ರವರೆಗೆ ಖಾಸಗಿ ವಲಯದ ಬ್ಯಾಂಕ್‌ಗಳ ಕೆಟ್ಟ ಸಾಲದ (ಎನ್‌ಪಿಎ) ಮೊತ್ತ 7.8 ಲಕ್ಷ ಕೋಟಿ ರೂ.ಗಳಷ್ಟಿದೆ. ಇದಕ್ಕೆಲ್ಲ ದೊಡ್ಡ ದೊಡ್ಡ ಉದ್ಯಮಿಗಳೆ ಕಾರಣವಾಗಿದ್ದು. ಸಣ್ಣಪುಟ್ಟ ಸಾಲ ಪಡೆಯುವವರಿಗೆ ಹಲವು ನಿರ್ಬಂಧ ಹೇರುವ ಬ್ಯಾಂಕುಗಳು ಪ್ರತಿಷ್ಠಿತ ಉದ್ಯಮಿಗಳ ವಿಷಯದಲ್ಲಿ ಗರಿಷ್ಠ ಕರಾರು ವಿಧಿಸುವುದಿಲ್ಲ. ಇವು ಸುಸ್ಥಿ ಸಾಲ ಹೆಚ್ಚಾಗಲು ಕಾರಣವಾಗಿವೆ. ಸಾಲ ಪಡೆದ ಇಂತಹವರು ಹಣ ಕಟ್ಟದೇ ವಿದೇಶಗಳಿಗೆ ಪಲಾಯನ ಮಾಡುತ್ತಿದ್ದಾರೆ. ಸರ್ಕಾರ ಕೂಡ ಕಠಿಣ ಕ್ರಮಗಳನ್ನು ಜರುಗಿಸುತ್ತಿಲ್ಲ.