ನಾನಾ ಪ್ರಕರಣಗಳಲ್ಲಿ ಅಪರಾಧಿಗಳ ಮನೆ, ನಿವಾಸ, ಆಸ್ತಿಗಳನ್ನು ಕೆಡವುವ ‘ಬುಲ್ಡೋಜರ್ ನ್ಯಾಯ’ದ ವಿರುದ್ಧ ಸುಪ್ರೀಂ ಕೋರ್ಟ್ ಕಿಡಿಕಾರಿದೆ. “ಅಪರಾಧ ಪ್ರಕರಣಗಳಲ್ಲಿ ಆರೋಪಿಯು ಅಪರಾಧಿಯೇ ಆಗಿದ್ದರೂ, ಆತನ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ” ಎಂದು ಹೇಳಿದ್ದು, ಸರ್ಕಾರಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಕೆಲವು ಗಂಭೀರ ಪ್ರಕರಣಗಳಲ್ಲಿ ಅಪರಾಧಿಗಳ ಮನೆಗಳನ್ನು ಅಧಿಕಾರಿಗಳು ಕೆಡವುವುದು ದೇಶಾದ್ಯಂತ ವರದಿಯಾಗುತ್ತಿವೆ. ಅದರಲ್ಲೂ ಮಧ್ಯಪ್ರದೇಶದಲ್ಲಂತೂ ಅಪರಾಧಿಗಳ ನಿವಾಸಗಳನ್ನು ಧ್ವಂಸಗೊಳಿಸುವುದು ಎಗ್ಗಿಲ್ಲದೆ ನಡೆಯುತ್ತಿದೆ. ಇಂತಹ ಬುಲ್ಡೋಜರ್ ಕ್ರಮವನ್ನು ತಡೆಯಬೇಕೆಂದು ಹಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠವು ಅರ್ಜಿಗಳ ವಿಚಾರಣೆ ನಡೆಸಿದೆ. ಸರ್ಕಾರಗಳು ಮತ್ತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ.
“ವ್ಯಕ್ತಿಯು ಅಪರಾಧಿಯೆಂದು ಘೋಷಿಸಲ್ಪಟ್ಟರೂ, ಆತನ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಆರೋಪಿಯಾಗಿರುವ ಮಾತ್ರಕ್ಕೆ ಅವರ ಮನೆಯನ್ನು ಹೇಗೆ ಕೆಡವುತ್ತೀರಿ” ಎಂದು ಅಧಿಕಾರಿಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಕಾನೂನಿನಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸದೆ ಅಪರಾಧಿಗಳ ಮನೆಗಳನ್ನು ಕೆಡವಲು ಸಾಧ್ಯವಿಲ್ಲ ಎಂದು ಹೇಳಿದೆ.
“ಓರ್ವ ವ್ಯಕ್ತಿ ದಂಗೆಕೋರ ಆಗಿರಬಹುದು. ಆ ಕಾರಣಕ್ಕೆ ಆತನ ತಂದೆಯ ಮನೆ ಕೆಡವಿದರೆ? ಅವರು ಎಲ್ಲಿ ಹೋಗಬೇಕು. ಏನು ಮಾಡಬೇಕು. ಇದು ಸರಿಯಾದ ನಡೆಯಲ್ಲ. ನಾವು ಪ್ಯಾನ್-ಇಂಡಿಯಾ ಆಧಾರದ ಮೇಲೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲು ಪ್ರಸ್ತಾಪಿಸುತ್ತೇವೆ” ಎಂದು ಪೀಠವು ಹೇಳಿದೆ.
“ಅಪರಾಧಿ ಅಥವಾ ಆರೋಪಿಗಳ ಕಟ್ಟಡವು ಕಾನೂನುಬಾಹಿರವಾಗಿದ್ದರೆ ಮಾತ್ರ ಅಂತಹ ಮನೆಗಳನ್ನು ನೆಲಸಮವನ್ನು ಮಾಡಬಹುದು. ಅಂತಹ ಪ್ರಕರಣಗಳಲ್ಲಿಯೂ ಮೊದಲ ನೋಟಿಸ್ ನೀಡಿ, ಉತ್ತರಿಸಲು ಸಮಯ ಕೊಡಬೇಕು. ನಂತರ ಕ್ರಮ ಕೈಗೊಳ್ಳಬೇಕು” ಎಂದು ಪೀಠ ಹೇಳಿದೆ.