ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿನ(ಹೆಚ್‌ಸಿಎ) ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ(ಇ.ಡಿ) ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ಮೊಹಮ್ಮದ್ ಅಜರುದ್ದೀನ್ ಅವರಿಗೆ ಸಮನ್ಸ್ ನೀಡಿದ್ದು, ತನಿಖೆಗೆ ಇಂದು ಹಾಜರಾಗಬೇಕೆಂದು ತಿಳಿಸಲಾಗಿದೆ.
ಅಜರುದ್ದೀನ್ ಈ ಮೊದಲು ಹೆಚ್‌ಸಿಎನಲ್ಲಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿ ಬಂದಿತ್ತು. ಇ.ಡಿ ಅಜರುದ್ದೀನ್ ಅವರಿಗೆ ನೀಡುತ್ತಿರುವ ಮೊದಲ ಸಮನ್ಸ್ ಆಗಿದೆ.
ಪ್ರಕರಣವು 20 ಕೋಟಿ ರೂ. ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ್ದಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರಿಕೆಟ್ ಕ್ರೀಡಾಂಗಣದ ಅಭಿವೃದ್ದಿಗಾಗಿ ಖರೀದಿಸಲಾಗಿದ್ದ ಡೀಸೆಲ್ ಜನರೇಟರ್‌ಗಳು, ಅಗ್ನಿ ಶಾಮಕ ವ್ಯವಸ್ಥೆಗಳು ಹಾಗೂ ಮತ್ತಿತ್ತರ ಸಾಮಗ್ರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪವಿದೆ.
ಈ ಮೊದಲು ಮೊಹಮ್ಮದ್ ಅಜರುದ್ದೀನ್ ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ (ಎಚ್‌ಸಿಎ) ಕೆಲ ಮಾಜಿ ಪದಾಧಿಕಾರಿಗಳ ವಿರುದ್ಧ ಹಣವನ್ನು ದುರುಪಯೋಗಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಹರಿಯಾಣದಲ್ಲಿ ಆಡಳಿತ ವಿರೋಧಿ ಗಾಳಿ- ಇಳಿಜಾರಿನಲ್ಲಿ ಬಿಜೆಪಿ
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನೀಲ್ ಕಾಂತೆ ಬೋಸ್ ಅವರು ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್‌ನ ಉಪ್ಪಳ ಪೊಲೀಸ್ ಠಾಣೆಯಲ್ಲಿ ಎಚ್‌ಸಿಎ ಮಾಜಿ ಅಧ್ಯಕ್ಷ ಅಜರುದ್ದೀನ್ ಮತ್ತು ಇತರ ಮಾಜಿ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಮಾರ್ಚ್ 3, 2021 ರಂದು ನಡೆದ 9 ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಸಂಘದ ಆಗಿನ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಅವರು ಅಗ್ನಿಶಾಮಕ ಉಪಕರಣಗಳ ಬಗ್ಗೆ ಚರ್ಚೆ ಮಾಡಿದ್ದರು. ಆದರೆ, ನಂತರ ಯಾವುದೇ ಕಾರಣ ನೀಡದೆ ಯಾವುದೇ ಬಿಡ್‌ದಾರರಿಗೆ ಟೆಂಡರ್ ಹಂಚಿಕೆ ಮಾಡಿರಲಿಲ್ಲ. ನಂತರ, ಅದೇ ಕೆಲಸಕ್ಕಾಗಿ ಎಚ್‌ಸಿಎ ಎರಡನೇ ಟೆಂಡರ್ ಅನ್ನು ಕರೆಯಿತು. ಎಚ್‌ಸಿಎಗೆ ಎಷ್ಟು ನಷ್ಟವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿವರವಾದ ತನಿಖೆಯ ಅಗತ್ಯವಿದೆ ಎಂದು ದೂರುದಾರರು ಹೇಳಿದ್ದಾರೆ.
