ಒಡಿಶಾದ ಜಾಜ್‌ಪುರ ಜಿಲ್ಲೆಯ ರತ್ನಿಗಿರಿಯಲ್ಲಿ ಇತ್ತೀಚೆಗೆ ಬುದ್ಧದ ಮೂರು ತಲೆಗಳು ತಲೆಗಳು, ಒಂದು ದೈತ್ಯ ತಾಳೆ ಮರ ಹಾಗೂ ಪ್ರಾಚೀನ ಗೋಡೆ ಮತ್ತು ಕೆಲವು ಶಾಸನಗಳು ಪತ್ತೆಯಾಗಿವೆ. ಇವು ಬೌದ್ಧ ಧರ್ಮದ ಐತಿಹಾಸಿಕ ತಾಣವಾಗಿದ್ದ ರತ್ನಗಿರಿಯ ಮಹತ್ವವನ್ಉ ಒತ್ತಿ ಹೇಳುತ್ತಿವೆ. ಇದೀಗ ಭಾರತೀಯ ಪುರಾತತ್ವ ಸಮೀಕ್ಷೆ (ASI) ಸಂಸ್ಥೆ ಹೊಸ ಸಮೀಕ್ಷೆಗಳನ್ನು ನಡೆಸಲು ಮುಂದಾಗಿದೆ.
ರತ್ನಗಿರಿ ತಾಣ ಮತ್ತು ಅದರ ಮಹತ್ವ, ಬೌದ್ಧಧರ್ಮದ ಇತಿಹಾಸ ಹಾಗೂ ಬೌದ್ಧ ಪರಂಪರೆಯ ಬಗ್ಗೆ ಅಧ್ಯಯನವನ್ನು ನಡೆಸಲು ನಿರ್ಧರಿಸಿದೆ. ‘ರತ್ನಗಿರಿ’ಯು ಬ್ರಾಹ್ಮಣಿ ಮತ್ತು ಬಿರುಪಾ ನದಿಗಳ ನಡುವೆ ಇದ್ದು, ಈ ಪ್ರದೇಶದಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಉತ್ಖನನಗಳು ದೊರೆಯಬಹುದು ಎಂದು ಎಎಸ್‌ಐ ಭಾವಿಸಿದೆ.
ಒಡಿಶಾದಲ್ಲಿ ಹೆಚ್ಚಾಗಿ ಉತ್ಖನನ ಮಾಡಲಾದ ಬೌದ್ಧ ತಾಣಗಳಲ್ಲಿ ರತ್ನಗಿರಿ, ಉದಯಗಿರಿ ಮತ್ತು ಲಲಿತಗಿರಿ ಪ್ರಮುಖ ಪ್ರದೇಶಗಳು. ಈ ಮೂರು ಪ್ರದೇಶಗಳು ಬೌದ್ಧ ಪರಂಪರೆಯ ಹಲವಾರು ಐತಿಹಾಸಿಕ ದಾಖಲೆಗಳನ್ನು ಹೊಂದಿವೆ.
ಈ ಪ್ರದೇಶಗಳು 5ನೇ ಶತಮಾನದಲ್ಲಿ ನರಸಿಂಹಗುಪ್ತ ಬಾಲಾದಿತ್ಯನ ಆಳ್ವಿಕೆಯಲ್ಲಿದ್ದವು. ಆದಾಗ್ಯೂ, 8ರಿಂದ 10ನೇ ಶತಮಾನಗಳ ವರೆಗೆ ಭೌಮ-ಕರ (ಅಥವಾ ಕರ) ರಾಜವಂಶದ ಆಳ್ವಿಕೆಯಲ್ಲಿ ಈ ಪ್ರದೇಶದಲ್ಲಿ ಬೌದ್ಧಧರ್ಮವು ಹೆಚ್ಚಿನ ಪ್ರಚಾರ ಪಡೆಯಿತು. ಆದರೆ, 13ನೇ ಶತಮಾನದ ನಂತರ ಬೌದ್ಧ ಧರ್ಮವು ಇಲ್ಲಿ ಕ್ಷೀಣಿಸಲಾರಂಭಿಸಿತು ಎಂದು ಬೌದ್ಧಧರ್ಮದ ಸಂಶೋಧಕ, ಒಡಿಶಾ ಇನ್‌ಸ್ಟಿಟ್ಯೂಟ್ ಆಫ್ ಮ್ಯಾರಿಟೈಮ್‌ನ ಕಾರ್ಯದರ್ಶಿ ಸುನಿಲ್ ಪಟ್ನಾಯಕ್ ಹೇಳಿದ್ದಾರೆ.
ರತ್ನಗಿರಿ ಮಠವು ವಕ್ರರೇಖೆಯ ಛಾವಣಿಯನ್ನು ಹೊಂದಿರುವ ಭಾರತದ ಏಕೈಕ ಬೌದ್ಧ ಮಠವಾಗಿದೆ. ಐತಿಹಾಸಿಕ ಪುರಾವೆಗಳು ಹೇಳುವಂತೆ ಬೌದ್ಧಧರ್ಮದ ತಂತ್ರಯಾನ ರೂಪವನ್ನು ಅನುಸರಿಸುವ ಸುಮಾರು 500 ಸನ್ಯಾಸಿಗಳಿಗೆ ಇದು ನೆಲೆಯಾಗಿತ್ತು ಎಂದು ಅವರು ಹೇಳಿದ್ದಾರೆ.
ಈ ಸ್ಥಳವನ್ನು 1905ರಲ್ಲಿ ಐತಿಹಾಸಿಕ ಬೌದ್ಧ ತಾಣವೆಂದು ದಾಖಲೆಯಲ್ಲಿ ಸೇರಿಸಲಾಗಿತ್ತು. ಆದಾಗ್ಯೂ, ಇಲ್ಲಿ ಮೊದಲ ಉತ್ಖನನಗಳು ನಡೆದದ್ದು 1958 ಮತ್ತು 1961ರ ನಡುವೆ ಎಂದು ಎಎಸ್‌ಐನ ಮೊದಲ ಮಹಿಳಾ ಮಹಾನಿರ್ದೇಶಕಿ, ಪುರಾತತ್ವಶಾಸ್ತ್ರಜ್ಞೆ ದೇಬಾಲಾ ಮಿತ್ರಾ ಹೇಳಿದ್ದಾರೆ.
ಗಮನಾರ್ಹವೆಂದರೆ, 1961ರ ನಂತರ ಈ ಸ್ಥಳಗಳಲ್ಲಿ ಮತ್ತೆ ಉತ್ಖನನ ಮಾಡಲಾಗಿಲ್ಲ. ಇದೀಗ, ಬುದ್ಧದ ತಲೆಯ ಬೃಹತ್ ಶಿಲ್ಪಗಳು ಪತ್ತೆಯಾದ ಹಿನ್ನೆಲೆ ಎಎಸ್‌ಐ ಮತ್ತೆ ಸಮೀಕ್ಷೆ ನಡೆಸಲು, ಉತ್ಖನನ ಮಾಡಲು ಮುಂದಾಗಿದೆ.
ಹೊಸ ಉತ್ಖನನಗಳ ಉದ್ದೇಶ ಭಾಗಶಃ ಗೋಚರಿಸುತ್ತಿರುವ ರಚನೆಗಳನ್ನು ಸಂಪೂರ್ಣವಾಗಿ ಹೊರತೆಗೆಯುವುದು. ಈಗಾಗಲೇ, ಬುದ್ಧದ ತಲೆಯ ಮೂರು ಬೃಹತ್ ಶಿಲ್ಪಗಳನ್ನು ಹೊರತೆಗೆಯಲಾಗಿದೆ ಎಂದು ಎಎಸ್‌ಐನ ಪುರಿ ವೃತ್ತದ ಅಧೀಕ್ಷಕ ಡಿ ಬಿ ಗಾರ್ನಾಯಕ್ ಹೇಳಿದ್ದಾರೆ.
“ಪ್ರಾಚೀನ ಕಳಿಂಗ (ಈಗಿನ ಒಡಿಶಾ) ಶ್ರೀಮಂತ ಕಡಲ ಸಂಸ್ಕೃತಿಯನ್ನು ಹೊಂದಿತ್ತು. ಜಾವಾ, ಸುಮಾತ್ರಾ, ಬೊರ್ನಿಯೊ, ಬರ್ಮಾ (ಮ್ಯಾನ್ಮಾರ್) ಮತ್ತು ಸಿಲೋನ್ (ಶ್ರೀಲಂಕಾ) ಸೇರಿದಂತೆ ಆಗ್ನೇಯ ಏಷ್ಯಾದೊಂದಿಗೆ ಸಂಪರ್ಕ ಸಾಧಿಸಿತ್ತು. ರತ್ನಗಿರಿಯಂತಹ ತಾಣಗಳಿಂದ, ಬೌದ್ಧಧರ್ಮವು ಬಂಗಾಳಕೊಲ್ಲಿಯ ಪ್ರದೇಶದಾದ್ಯಂತ ಹರಡಿತು. ಹೀಗಾಗಿ, ಆಗ್ನೇಯ ಏಷ್ಯಾ ಮೂಲದ ಅಥವಾ ಅದರಾಚೆಗಿನ ಭೌತಿಕ ವಸ್ತುಗಳು ಮತ್ತು ವಾಸ್ತುಶಿಲ್ಪ ಪುರಾವೆಗಳನ್ನು ಸಹ ಎಎಸ್‌ಐ ಹುಡುಕುತ್ತದೆ” ಎಂದು ಗಾರ್ನಾಯಕ್ ಹೇಳಿದ್ದಾರೆ.
“ಕಳಿಂಗದ ಬೌದ್ಧ ವಿದ್ವಾಂಸರು ಆಗ್ನೇಯ ಏಷ್ಯಾದಾದ್ಯಂತ ಪ್ರಯಾಣಿಸಿದ್ದಾರೆ ಎಂದು ಐತಿಹಾಸಿಕ ಪುರಾವೆಗಳು ಸೂಚಿಸುತ್ತವೆ. ಕಳಿಂಗದಿಂದ ಸಾಂಸ್ಕೃತಿಕ ಆಚರಣೆಗಳ ಪುರಾವೆಗಳು ಜಾವಾ, ಬಾಲಿ, ಸುಮಾತ್ರಾ ಮತ್ತು ಸಿಲೋನ್‌ನಲ್ಲಿ ಕಂಡುಬಂದಿವೆ. ಕಳಿಂಗ ಮತ್ತು ಬಾಲಿ ಮತ್ತು ಬಂಗಾಳಕೊಲ್ಲಿಯ ಸುತ್ತಮುತ್ತಲಿನ ಇತರ ಪ್ರದೇಶಗಳಲ್ಲಿ 2,000 ವರ್ಷಗಳಷ್ಟು ಹಳೆಯದಾದ ಕಡಲ ಮತ್ತು ಸಾಂಸ್ಕೃತಿಕ ಸಂಪರ್ಕಗಳಿರುವುದನ್ನು ಐತಿಹಾಸಿಕ ದಾಖಲೆಗಳು ಸೂಚಿಸುತ್ತವೆ” ಎಂದು ಅವರು ಹೇಳಿದ್ದಾರೆ.
ಒಡಿಶಾವು ವಜ್ರ ತ್ರಿಕೋನದ ಹೊರತಾಗಿ, ಭುವನೇಶ್ವರ ಬಳಿಯ ಧೌಲಿ, ಕೊನಾರ್ಕ್ ಸೂರ್ಯ ದೇವಾಲಯದ ಬಳಿಯ ಕುರುಮ, ಜಾಜ್‌ಪುರ ಜಿಲ್ಲೆಯ ಲಂಗುಡಿ ಮತ್ತು ಕಯಾಮಾ, ಪುರಿ ಜಿಲ್ಲೆಯ ತಾರಾಪುರ ಮುಂತಾದ ಹಲವಾರು ಜನಪ್ರಿಯ ಬೌದ್ಧ ತಾಣಗಳನ್ನು ಹೊಂದಿದೆ.