ಪುರಸಭೆಯ ಸದಸ್ಯೆಯನ್ನು ಆಕೆಯ ಪತಿ ಬರ್ಬರವಾಗಿ ಕೊಚ್ಚಿ ಕೊಂದಿರುವ ಘಟನೆ ಚೆನ್ನೈನ ಪಶ್ಚಿಮ ಉಪನಗರದಲ್ಲಿರುವ ತಿರುನಿನ್ರವೂರ್‌ನಲ್ಲಿ ನಡೆದಿದೆ.
ತಿರುನಿವ್ರವೂರ್ ಪುರಸಭೆಯ ಮಹಿಳಾ ಕೌನ್ಸಿಲರ್ ಎಸ್ ಗೋಮತಿ (38) ಅವರನ್ನು ಆಕೆಯ ಪತಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ವೈಯಕ್ತಕ ಕಾರಣದಿಂದಾಗಿ ಕೊಲೆ ನಡೆದಿದೆ ಎಂದು ಹೇಳಲಾಗಿದೆ.
ತಿರುನಿನ್ರವೂರಿನ ಪೆರಿಯಾರ್ ಕಾಲೋನಿ ನಿವಾಸಿಯಾಗಿರುವ ಗೋಮತಿ ಅವರು ಪುರಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಪುರಸಭೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು.
ಗುರುವಾರ ರಾತ್ರಿ, ಗೋಮತಿ ಅವರ ಮೇಲೆ ಅವರ ಪತಿ ಸ್ಟೀಫನ್ ರಾಜ್ ಬರ್ಬರವಾಗಿ ದಾಳಿ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೋಮತಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಲಾಗಿದ್ದು, ಆ ವೇಳೆಗೆ ಅವರು ಮೃತಪಟ್ಟಿದ್ದಾರೆ. ಆರೋಪಿ ರಾಜ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ದಂಪತಿಗಳು ಸುಮಾರು ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಕೆ ನಡೆಸುತ್ತಿದ್ದಾರೆ.