ಪತಿಯೊಬ್ಬ ಸಾರ್ವಜನಿಕ ಸ್ಥಳದಲ್ಲೇ ಪತ್ನಿಯನ್ನು ವಾಹನ ಸಮೇತ ಪೆಟ್ರೋಲ್ ಹಾಕಿ ಸುಟ್ಟು ಕೊಂದ ಭೀಕರ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕೊಲ್ಲಂ ಜಿಲ್ಲೆಯ ಚೆಮ್ಮಾಮುಖ್ ಎಂಬಲ್ಲಿ ಪತಿರಾಯನೋರ್ವ ತನ್ನ ಪತ್ನಿಯನ್ನು ಪೆಟ್ರೋಲ್ ಹಾಕಿ ಕೊಂದಿದ್ದು, ಜನರು ಭಯಭೀತಗೊಳ್ಳುವಂತೆ ಮಾಡಿದ್ದಾನೆ.
ಪತ್ನಿ ಅನಿಲ ಎಂಬಾಕೆಯನ್ನು ಪತಿ ಪದ್ಮರಾಜ್ ವಾಹನ ಸಮೇತ ಪೆಟ್ರೋಲ್ ಸುರಿದು ಕೊಂದಿದ್ದು, ನಂತರ ಹತ್ತಿರದಲ್ಲೇ ಇದ್ದ ಪೋಲಿಸ್ ಠಾಣೆಗೆ ತೆರಳಿ ಶರಣಾಗತನಾಗಿದ್ದಾನೆ.
ಮಂಗಳವಾರ ರಾತ್ರಿ ಸುಮಾರು ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಪತ್ನಿಯ ಬೇಕರಿ ಉದ್ಯಮ ವ್ಯವಹಾರ ಹಾಗೂ ವಿವಾಹೇತರ ಸಂಬಂಧದ ಬಗ್ಗೆ ಶಂಕೆಗೊಂಡು ಈ ಕೃತ್ಯ ನಡೆಸಿದ್ದಾನೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಘಟನೆಯ ಸಂದರ್ಭದಲ್ಲಿ ಪತ್ನಿ ಅನಿಲ ಚಲಾಯಿಸುತ್ತಿದ್ದ ವಾಹನದಲ್ಲಿ ಮತ್ತೊಬ್ಬ ವ್ಯಕ್ತಿಯೂ ಇದ್ದು, ಆತನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಬೆಂಕಿ ಹಚ್ಚಿ ಕೊಂದ ಘಟನೆಯ ಹಿಂದೆ ಉದ್ಯಮ ಆರಂಭಿಸಿದ ವಿಚಾರವೇ ಕಾರಣ ಎಂಬ ಮಾಹಿತಿ ಹೊರಬಿದ್ದಿದೆ. ಸ್ನೇಹಿತ ಹನೀಶ್ ಎಂಬಾತನೊಂದಿಗೆ ಬೇಕರಿ ಆರಂಭಿಸಿದ್ದೇ ಅನಿಲಾಳ ಕೊಲೆಗೆ ಪ್ರಮುಖ ಕಾರಣ ಎಂದು ಸ್ಥಳೀಯ ನಿವಾಸಿಯೋರ್ವರು ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
ಆರೋಪಿ ಪದ್ಮರಾಜ್, ತನ್ನ ಪತ್ನಿಯೊಂದಿಗೆ ಹನೀಶ್ ಆರಂಭಿಸಿದ್ದ ಬೇಕರಿ ಉದ್ಯಮದ ಪಾರ್ಟ್ನರ್ ಶಿಪ್ ಬಿಟ್ಟುಕೊಡುವಂತೆ ಒತ್ತಾಯಿಸಿದ್ದ. ಆದರೆ ಬೇಕರಿ ಆರಂಭಿಸಲು ವ್ಯಯಿಸಿದ್ದ 1.49 ಲಕ್ಷ ರೂಪಾಯಿ ವಾಪಸ್ ನೀಡಿದರೆ ತೊರೆಯುತ್ತೇನೆ ಎಂದು ಹನೀಶ್ ತಿಳಿಸಿದ್ದ. ಇದಕ್ಕೆ ಪ್ರತಿಕ್ರಿಯಿಸಿದ್ದ ಆರೋಪಿ ಪದ್ಮರಾಜನ್, ಡಿ. 10ರಂದು ಹಣ ನೀಡುವುದಾಗಿ ಭರವಸೆ ನೀಡಿದ್ದ ಎಂದು ತಿಳಿದು ಬಂದಿದೆ. ಇದಾದ ಬಳಿಕ ಪದ್ಮರಾಜ್, ಇಬ್ಬರನ್ನೂ ಕೊಲ್ಲಲು ಯತ್ನಿಸಿದ್ದಾನೆ ಎಂದು ಸ್ಥಳೀಯ ನಿವಾಸಿ ಮಾಹಿತಿ ನೀಡಿದ್ದಾನೆ.
ಸದ್ಯ ಆರೋಪಿ ಪದ್ಮರಾಜನ್ ಶರಣಾಗತನಾದ್ದರಿಂದ ಆತನನ್ನು ಪೊಲೀಸರು ಬಂಧಿಸಿದ್ದು, ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.
