ನನ್ನ ರಾಜಕೀಯ ಆರಂಭದ ದಿನಗಳಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗಾಗಿ ಒಂಬತ್ತು ಜನರನ್ನು ಕೊಲೆ ಮಾಡಿಸಿದ್ದೆ ಎಂಬ ಜೆಡಿಯು ಶಾಸಕ ಅನಂತ್ ಸಿಂಗ್ ಹೇಳಿಕೆಯು ಸದ್ಯ ರಾಜಕೀಯ ಸಂಚಲನ ಸೃಷ್ಟಿಸಿದೆ. ‘ಚೋಟೆ ಸರ್ಕಾರ್’ ಎಂದೇ ಪ್ರಸಿದ್ದರಾಗಿರುವ ಮೊಕಾಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರ ಈ ಹೇಳಿಕೆಯ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ಉಂಟಾಗಿದೆ.
ಪಟನಾ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ (MLC) ಚುನಾವಣೆಗೆ ಜೆಡಿಯು ಸಂಸ್ಥೆಯು ನಿರಾಜ್ ಕುಮಾರ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದಕ್ಕೆ ಅನಂತ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ನಿರ್ಧಾರವನ್ನು ವಿರೋಧಿಸಿ ಬೆಂಬಲಿಗರ ಸಭೆಯನ್ನೂ ನಡೆಸಿದ್ದರು.
ಈ ಸಭೆಯಲ್ಲಿ ಮಾತನಾಡಿದ ಅನಂತ್ ಸಿಂಗ್, “ನನ್ನಷ್ಟು ತ್ಯಾಗವನ್ನು ಪಕ್ಷಕ್ಕಾಗಿ ಯಾರೂ ಮಾಡಿಲ್ಲ. ನಿತೀಶ್ ಕುಮಾರ್ ಅವರು ಆರಂಭದಲ್ಲಿ ಏನೂ ಆಗಿರಲಿಲ್ಲ, ಸುಮ್ಮನೆ ಅಲೆದಾಡುತ್ತಿದ್ದರು. ಆ ಸಂದರ್ಭದಲ್ಲಿ ಅವರ ಪರವಾಗಿ ನಿಂತು ನಾನು ಒಂಬತ್ತು ಜನರನ್ನು ಕೊಲೆ ಮಾಡಿಸಿದೆ. ಆದರೂ ನಿತೀಶ್ ಅಧಿಕಾರಕ್ಕೆ ಬಂದ ಮೇಲೆ ನನ್ನ ಮನೆ ಮೇಲೆಯೇ ಗುಂಡಿನ ದಾಳಿ ನಡೆಸಿದರು” ಎಂದು ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಬಿಹಾರ ರಾಜಕಾರಣದಲ್ಲಿ ಮಹತ್ವದ ತಿರುವು; ಶಾಸಕ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ
ಈ ವಿಡಿಯೋ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಂತೆ ಮತ್ತು ವಿರೋಧ ಪಕ್ಷಗಳು ನಿತೀಶ್ ಕುಮಾರ್ ಅವರನ್ನು ಗುರಿಯಾಗಿಸಲು ಆರಂಭಿಸುತ್ತಿದ್ದಂತೆ ಅನಂತ್ ಸಿಂಗ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಯೂ-ಟರ್ನ್ ಹೊಡೆದಿದ್ದಾರೆ.
“ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ. ಲಾಲು ಪ್ರಸಾದ್ ಯಾದವ್ ಆಡಳಿತಾವಧಿಯಲ್ಲಿ ನಾನು ನಿತೀಶ್ ಕುಮಾರ್ ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ಲಾಲು ಬೆಂಬಲಿಗರು ನನ್ನ ಒಂಬತ್ತು ಮಂದಿ ಸಹಚರರನ್ನು ಹತ್ಯೆ ಮಾಡಿದ್ದರು. ನನ್ನ ಮೇಲೆಯೂ ಗುಂಡಿನ ದಾಳಿ ನಡೆದಿತ್ತು ಮತ್ತು ಈ ಆಘಾತದಿಂದ ನನ್ನ ತಂದೆಯೂ ಸತ್ತರು. ನಾನು ಮಾಡಿರುವ ತ್ಯಾಗದ ಬಗ್ಗೆ ವಿವರಿಸಲು ಹಾಗೆ ಹೇಳಿದ್ದೆನೇ ಹೊರತು ನಾನು ಯಾರನ್ನೂ ಕೊಲ್ಲಿಸಿಲ್ಲ” ಎಂದು ಹೇಳಿಕೊಂಡಿದ್ದಾರೆ.
ಅನಂತ್ ಸಿಂಗ್ ಅವರ ವಿವಾದಾತ್ಮಕ ಹೇಳಿಕೆಯ ಬಳಿಕ ರಾಷ್ಟ್ರೀಯ ಜನತಾ ದಳ (RJD) ನಾಯಕರು ನಿತೀಶ್ ಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರ್ಜೆಡಿ ವಕ್ತಾರ ಶಕ್ತಿ ಸಿಂಗ್ ಯಾದವ್ ಪ್ರತಿಕ್ರಿಯಿಸಿದ್ದು, “ಅನಂತ್ ಸಿಂಗ್ ಅವರು ಸಾರ್ವಜನಿಕವಾಗಿ ಒಂಬತ್ತು ಜನರನ್ನು ಕೊಲೆ ಮಾಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಪಾಪದಿಂದ ಯಾವುದೇ ಕಾರಣಕ್ಕೂ ಮುಕ್ತಿ ಸಿಗುವುದಿಲ್ಲ. ಇದರ ಹೊಣೆಯನ್ನು ಎನ್ಡಿಎ ಸರ್ಕಾರ ಮತ್ತು ನೇರವಾಗಿ ನಿತೀಶ್ ಕುಮಾರ್ ಹೊರಬೇಕಾಗುತ್ತದೆ, ಮತ್ತು ಅವರು ಈ ಬಗ್ಗೆ ಸ್ಪಷ್ಟನೆ ನೀಡಲೇಬೇಕು” ಎಂದು ಹೇಳಿದ್ದಾರೆ.




