ಇತ್ತೀಚಿನ ವಿಧಾನಸಭಾ ಚುನಾವಣೆಗಳ ಬಳಿಕ ಬದಲಾದ ರಾಜಕೀಯ ಸನ್ನಿವೇಶದಲ್ಲಿ, ಬಿಜೆಪಿಯನ್ನು ಎದುರಿಸಲು ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳ ‘ಇಂಡಿಯಾ’ (I.N.D.I.A.) ಮೈತ್ರಿಕೂಟದ 23 ರಾಜಕೀಯ ಪಕ್ಷಗಳ ಮಹತ್ವದ ಸಭೆ ಇಂದು(ಜೂ.08) ದೆಹಲಿಯಲ್ಲಿ ನಡೆಯುತ್ತಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಭೆಯಲ್ಲಿ ಪಾಲ್ಗೊಂಡಿದ್ದರೆ, ಡಿಎಂಕೆ ಮತ್ತು ಆಮ್ ಆದ್ಮಿ ಪಕ್ಷ (ಆಪ್) ಸಭೆಯಿಂದ ದೂರ ಉಳಿದಿವೆ. ಇದೇ ವೇಳೆ ನಟ ವಿಜಯ್ ನೇತೃತ್ವದ ಟಿವಿಕೆ ಮೈತ್ರಿಕೂಟ ಸೇರುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಮತ್ತು ಡಿಎಂಕೆ ಸೋಲಿನ ನಂತರ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಶಮನ ಮಾಡುವ ಉದ್ದೇಶದಿಂದ ಈ ಸಭೆ ಕರೆಯಲಾಗಿದೆ. ಆದರೆ, ಸಭೆಗೂ ಮುನ್ನವೇ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಡಿಎಂಕೆ ನಾಯಕ ಟಿ.ಕೆ.ಎಸ್. ಇಳಂಗೋವನ್, “ಕಾಂಗ್ರೆಸ್ ಈಗ ನಂಬಿಕಾರ್ಹ ಪಕ್ಷವಾಗಿ ಉಳಿದಿಲ್ಲ, ಹೀಗಾಗಿ ಮುಂಬರುವ ದಿನಗಳಲ್ಲಿ ಹೆಚ್ಚಿನ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟದಿಂದ ಹೊರಬರುವ ನಿರೀಕ್ಷೆಯಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ದೀದಿ ಪಾಳಯದಲ್ಲಿ ಬಂಡಾಯದ ಬೆಂಕಿ: ಸೋದರಳಿಯ ವರವೋ, ಶಾಪವೋ?
“ಕಾಂಗ್ರೆಸ್ ಪಕ್ಷವು ಡಿಎಂಕೆ ಬೆಂಬಲದಿಂದ ಗೆದ್ದು, ಈಗ ಮೈತ್ರಿಕೂಟದಲ್ಲೇ ಇಲ್ಲದ ಟಿವಿಕೆ ಪಕ್ಷದ ಜೊತೆ ನಿಷ್ಠೆ ಬದಲಾಯಿಸಿದೆ. ಮುಂಬರುವ ಸ್ಥಳೀಯ ಸಂಸ್ಥೆ ಮತ್ತು ಸಂಸತ್ ಚುನಾವಣೆಗಳಲ್ಲಿ ಟಿವಿಕೆ ಜೊತೆ ಇರುವುದಾಗಿ ಹೇಳುತ್ತಿದೆ. ಹೀಗಿರುವಾಗ ಸಭೆಯಲ್ಲಿ ಪಾಲ್ಗೊಳ್ಳಲು ನಮ್ಮ ಕಾರ್ಯಕರ್ತರು ಹೇಗೆ ಒಪ್ಪುತ್ತಾರೆ? ಹೀಗಾಗಿಯೇ ನಾವು ಸಭೆಯಲ್ಲಿ ಭಾಗವಹಿಸುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಕೂಡ, ಕೇರಳ ವಿಧಾನಸಭಾ ಚುನಾವಣೆ ವೇಳೆ ಎಡರಂಗದ (LDF) ವಿರುದ್ಧ ಕಾಂಗ್ರೆಸ್ ನಾಯಕರು ನೀಡಿದ್ದ ಹೇಳಿಕೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಕರ್ನಾಟಕದ ರಾಜ್ಯಸಭಾ ಚುನಾವಣೆ ಕುರಿತಂತೆಯೂ ರಾಜಕೀಯ ವಾಕ್ಸಮರ ನಡೆದಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್ ನಿರಾಕರಿಸಿ, ಜಿಲ್ಲಾ ಕಟ್ಟಡ ನಿರ್ಮಾಣ ವಿಭಾಗದ ಉಪಾಧ್ಯಕ್ಷ ಎಂ. ನಾಗರಾಜ ಅವರಿಗೆ ಮಣೆಹಾಕಿರುವ ಬಿಜೆಪಿ ನಡೆಯನ್ನು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲಾ ಕಟುವಾಗಿ ಟೀಕಿಸಿದ್ದಾರೆ. “ಬಿಜೆಪಿ ಹಾಗೂ ಅದರ ನಾಯಕತ್ವವು ಪದೇ ಪದೇ ಜೆಡಿಎಸ್ ಅನ್ನು ಅವಮಾನಿಸುತ್ತಿದೆ. ಆದರೆ, ಕೇವಲ ಸಚಿವ ಸ್ಥಾನ ಉಳಿಸಿಕೊಳ್ಳುವ ಉದ್ದೇಶದಿಂದ ಎಚ್.ಡಿ. ಕುಮಾರಸ್ವಾಮಿ ಅವರು ಈ ನಿರಂತರ ಅವಮಾನವನ್ನು ಸಹಿಸಿಕೊಳ್ಳುತ್ತಿರುವುದು ಅಚ್ಚರಿ ಮೂಡಿಸಿದೆ. ಇದು ಅವಮಾನದ ಪರಮಾವಧಿ” ಎಂದು ಸುರ್ಜೆವಾಲಾ ಎಕ್ಸ್ ಖಾತೆಯಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಇಂಡಿಯಾ’ ಮೈತ್ರಿಕೂಟದ ಮಹತ್ವದ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖ ನಾಯಕರು ಒಗ್ಗೂಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಭೆಯಲ್ಲಿ ಉಪಸ್ಥಿತರಿದ್ದಾರೆ. ಇವರ ಜೊತೆಗೆ ಪ್ರಾದೇಶಿಕ ಪಕ್ಷಗಳ ಬಲಿಷ್ಠ ನಾಯಕರಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ನಾಯಕ ಉಮರ್ ಅಬ್ದುಲ್ಲಾ ಅವರು ಪಾಲ್ಗೊಂಡಿದ್ದಾರೆ. ಮೈತ್ರಿಕೂಟದ ಈ ಹಿರಿಯ ನಾಯಕರು ಸಭೆಯಲ್ಲಿ ಹಾಜರಾಗಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.





