ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷಕ್ಕೆ ಮತ್ತೊಂದು ಬಹುದೊಡ್ಡ ಆಘಾತ ಎದುರಾಗಿದೆ. ಪಕ್ಷದ ಹಿರಿಯ ನಾಯಕ ಹಾಗೂ ದೀರ್ಘಕಾಲದ ರಾಜ್ಯಸಭಾ ಸದಸ್ಯ ಸುಖೇಂದು ಶೇಖರ್ ರಾಯ್ ಅವರು ಇಂದು (ಜೂನ್ 8) ರಾಜ್ಯಸಭಾ ಸದಸ್ಯತ್ವ ಹಾಗೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ, ರಾಜ್ಯದಲ್ಲಿ ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿ ಸರ್ಕಾರವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸುಖೇಂದು ಶೇಖರ್ ರಾಯ್, “ಕಳೆದ 15 ವರ್ಷಗಳ ಟಿಎಂಸಿಯ ಅರಾಜಕತೆಯ ಆಡಳಿತಕ್ಕೆ ಬೇಸತ್ತು ಬಂಗಾಳದ ಜನತೆ, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಜೆಪಿಗೆ ಅಭೂತಪೂರ್ವ ಜನಾದೇಶ ನೀಡಿದ್ದಾರೆ. ಟಿಎಂಸಿ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ, ಮಹಿಳೆಯರ ಮೇಲಿನ ಮಿತಿಮೀರಿದ ದೌರ್ಜನ್ಯವಿತ್ತು. ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕಾನೂನು ಸುವ್ಯವಸ್ಥೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಪಕ್ಷವು ಸಂಪೂರ್ಣವಾಗಿ ವಿಫಲವಾಗಿತ್ತು” ಎಂದು ಟೀಕಿಸಿದ್ದಾರೆ.
ಇದನ್ನು ಓದಿದ್ದೀರಾ? ದೀದಿ ಪಾಳಯದಲ್ಲಿ ಬಂಡಾಯದ ಬೆಂಕಿ: ಸೋದರಳಿಯ ವರವೋ, ಶಾಪವೋ?
ಅದೇ ವೇಳೆ, ನೂತನವಾಗಿ ರಚನೆಯಾಗಿರುವ ಬಿಜೆಪಿ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, “ಹೊಸ ಜನಪರ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಂತೆ ಪಶ್ಚಿಮ ಬಂಗಾಳದ ಸಮಗ್ರ ಅಭಿವೃದ್ಧಿ ಮತ್ತು ಪುನರ್ನಿರ್ಮಾಣಕ್ಕಾಗಿ ಈಗಾಗಲೇ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಜನತೆಯ ಈ ಐತಿಹಾಸಿಕ ತೀರ್ಪನ್ನು ಗೌರವಿಸಿ ನಾನು ರಾಜ್ಯಸಭೆಗೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡುವ ನಿರ್ಧಾರ ಕೈಗೊಂಡಿದ್ದೇನೆ” ಎಂದು ಸ್ಪಷ್ಟಪಡಿಸಿದ್ದಾರೆ.





