ರಾಜಸ್ಥಾನದ ಚಿರು ಜಿಲ್ಲೆಯ ಭಾನೊಡಾ ಗ್ರಾಮದ ಬಳಿ ಭಾರತೀಯ ವಾಯು ಪಡೆಯ ಫೈಟರ್ ಜೆಟ್ ವಿಮಾನ ಪತನವಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ ಹೊಲವೊಂದರಲ್ಲಿ ಪೈಲಟ್ ಮೃತದೇಹ ಒಳಗೊಂಡು ವಿಮಾನದ ಅವಶೇಷಗಳು ಪತ್ತೆಯಾಗಿವೆ. ಆನಂತರದಲ್ಲಿ ಸೇನೆ ಹಾಗೂ ಸ್ಥಳೀಯ ಆಡಳಿತ ಇಬ್ಬರು ಮೃತಪಟ್ಟಿರುವುದಾಗಿ ಅಧಿಕೃತವಾಗಿ ಘೋಷಿಸಿದೆ.
ಮೂಲಗಳ ಪ್ರಕಾರ ಫೈಟರ್ ಜಟ್ ತರಬೇತಿಯಲ್ಲಿದ್ದಾಗ ಅಪಘಾತ ಸಂಭವಿಸಿದೆ. ವಾಯುಪಡೆಯು ರಾಜಸ್ಥಾನದ ಜೋದ್‌ಪುರ ಹಾಗೂ ಬಿಕನೇರ್ ಒಳಗೊಂಡು ಹಲವು ಕಡೆಗಳಲ್ಲಿ ಐಎಎಫ್ ನೆಲೆಗಳನ್ನು ಹೊಂದಿ ಕಾರ್ಯನಿರ್ವಹಿಸುತ್ತಿದೆ.
ಘಟನೆಯ ನಂತರ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಆಕಾಶದಲ್ಲಿ ದೊಡ್ಡ ಶಬ್ದ ಉಂಟಾಗಿ ಆನಂತರದಲ್ಲಿ ಮೈದಾನದಲ್ಲಿ ಬೆಂಕಿ ಮತ್ತು ಹೊಗೆ ಆವರಿಸಿದೆ. ಅಪಘಾತದ ನಂತರ ಹೊಲಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಂದಿಸಲು ಸ್ಥಳೀಯರು ಪ್ರಯತ್ನಿಸಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ವಿಶ್ವಾಸಾರ್ಹತೆ ಕಳೆದುಕೊಂಡ ಚುನಾವಣಾ ಆಯೋಗದ ಅವಶ್ಯಕತೆ ಇದೆಯೇ?
ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಪೊಲೀಸರು ಆಗಿಮಿಸಿದ್ದು, ಸೇನಾ ರಕ್ಷಣಾ ಕಾರ್ಯಾಚರಣಾ ತಂಡ ಶೀಘ್ರದಲ್ಲೇ ಸ್ಥಳಕ್ಕೆ ಆಗಮಿಸಿ ತನಿಖೆಯನ್ನು ಆರಂಭಿಸಲಿದೆ. ಅಪಘಾತಕ್ಕೆ ಕಾರಣವೇನೆಂಬುದು ಕೂಡ ಪತ್ತೆಯಾಗಬೇಕಿದೆ. ಪ್ರಾಥಮಿಕ ತನಿಖೆ ಪೂರ್ಣಗೊಂಡ ನಂತರ ಸೇನೆಯು ಅಧಿಕೃತ ಹೇಳಿಕೆಯನ್ನು ನೀಡಲಿದೆ.
ಮಧ್ಯಾಹ್ನ 1.25ರ ಸಮಯದಲ್ಲಿ ಭಾನೊಡಾ ಗ್ರಾಮದ ಕೃಷಿ ಭೂಮಿಯಲ್ಲಿ ಜೆಟ್ ವಿಮಾನ ಪತನವಾಗಿದ್ದು, ಮೃತದೇಹಗಳನ್ನು ಅಪಘಾತದ ಸ್ಥಳದಲ್ಲಿ ಪತ್ತೆಹಚ್ಚಲಾಯಿತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
