ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿರುವ ವಿಡಂಬನಾತ್ಮಕ ರಾಜಕೀಯ ಚಳವಳಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆ ವೇಳೆ ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಅಥವಾ ಚಳವಳಿಯ ಇತರೆ ಸದಸ್ಯರನ್ನು ಬಂಧಿಸಿದರೆ 42 ದಿನಗಳ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪರಿಸರವಾದಿ, ಲಡಾಖ್ ಹೋರಾಟಗಾರ ಸೋನಮ್ ವಾಂಗ್‌ಚುಕ್ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ ಯಾವೂ ಈ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ವಿಡಿಯೋ ಒಂದನ್ನು ಶುಕ್ರವಾರ ರಾತ್ರಿ ಪೋಸ್ಟ್ ಮಾಡಿದ್ದಾರೆ. “ನಾಳೆ ಜೂನ್ 6ರಂದು ನಾನು ನಿಮ್ಮೆಲ್ಲರನ್ನೂ ಭೇಟಿ ಮಾಡಲು ಲಡಾಖ್‌ನಿಂದ ದೆಹಲಿಗೆ ಬರುತ್ತೇನೆ. ನಾವು ಜಂತರ್ ಮಂತರ್‌ನಲ್ಲಿ ಸಿಗೋಣ. ಆದರೆ ಯಾವುದೇ ಕಾರಣಕ್ಕೂ ಅವರನ್ನು (ಸಿಜೆಪಿ ಸದಸ್ಯರನ್ನು) ನಾಳೆ ಬಂಧಿಸಿದರೆ, ನಾನು ಬಯಸದ ಹೆಜ್ಜೆ ಇಡಬೇಕಾಗುತ್ತದೆ. ಅವರ ಬಂಧನ ಮಾಡಿದರೆ ನಾನು ನಾಳೆಯಿಂದಲೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸುತ್ತೇನೆ. ಈ ಬಾರಿ ಆರು ವಾರಗಳು ಅಥವಾ 42 ದಿನಗಳವರೆಗೆ ಉಪವಾಸ ನಡೆಸುತ್ತೆನೆ. ನಾನು ಅದಕ್ಕಾಗಿ ಸಿದ್ಧನಾಗಿದ್ದೇನೆ. ನನ್ನ ಪ್ರಶ್ನೆ ನೀವು ಏನು ಮಾಡುತ್ತೀರಿ” ಎಂದು ಕೇಳಿದ್ದಾರೆ.
ಇದನ್ನು ಓದಿದ್ದೀರಾ? ಕಾಕ್ರೋಚ್ ಜನತಾ ಪಾರ್ಟಿ ಸೇರಿದ್ದು ಯಾಕೆ? -ಸೋನಮ್ ವಾಂಗ್‌ಚುಕ್ ಹೇಳಿದ್ದು ಇಲ್ಲಿದೆ ನೋಡಿ…
ಹಾಗೆಯೇ ಶಾಂತಿಯುತ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದ್ದಾರೆ. “ನೀವು ಈ ಚಳವಳಿಯನ್ನು ಶಾಂತಿಯುತವಾಗಿ ನಡೆಸಿ ಎಂಬುದು ನನ್ನ ವಿನಮ್ರ ವಿನಂತಿ. ಬಂದು ಚಳವಳಿಗೆ ಸೇರಿ, ಆದರೆ ನೀರಿನ ಬಾಟಲಿ, ನಿಮ್ಮ ಮೊಬೈಲ್ ಫೋನ್ ಮತ್ತು ಕೆಲವು ಹೂವುಗಳನ್ನು ಮಾತ್ರ ತನ್ನಿ. ಕೋಲುಗಳು, ಕಲ್ಲುಗಳು ಅಥವಾ ಬೇರೆ ಯಾವುದನ್ನೂ ತರಬೇಡಿ. ಯಾರಾದರೂ ಅಂತಹ ವಸ್ತುಗಳನ್ನು ತಂದರೆ, ಜಾಗರೂಕರಾಗಿರಿ. ಹಿಂಸಾಚಾರವನ್ನು ಪ್ರಚೋದಿಸುವ ಶಸ್ತ್ರಾಸ್ತ್ರಗಳು ಅಥವಾ ವಸ್ತುಗಳನ್ನು ಹೊಂದಿರುವ ಯಾರಾದರೂ ಕಂಡರೆ ಅವರ ಫೋಟೋ ತೆಗೆಯಿರಿ ಅಥವಾ ಅವರ ವಿಡಿಯೋ ಮಾಡಿ ಹತ್ತಿರದ ಪೊಲೀಸ್ ಸಿಬ್ಬಂದಿಗೆ ತಿಳಿಸಿ” ಎಂದು ಹೇಳಿದ್ದಾರೆ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ಪರೀಕ್ಷೆಗಳ ಅಧ್ವಾನಕ್ಕೆ ಕಾರಣವಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಗೆ ಆರಂಭದಲ್ಲಿ ಅನುಮತಿ ನೀಡಿರಲಿಲ್ಲ. ಆದರೆ ಇಂದು ಬೆಳಿಗ್ಗೆ ಅಭಿಜೀತ್ ದೀಪ್ಕೆ ಅಮೆರಿಕದಿಂದ ಭಾರತಕ್ಕೆ ಬಂದಿಳಿಯುತ್ತಿದ್ದಂತೆ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ.
ಇನ್ನು 2018ರ ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿರುವ ಶಿಕ್ಷಣ ಸುಧಾರಕ ಸೋನಮ್ ವಾಂಗ್‌ಚುಕ್ ಸಿಜೆಪಿ ಆರಂಭವಾದಾಗಿನಿಂದ ನಿರಂತರವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. ತಮ್ಮನ್ನು ತಾವು “ಗೌರವಾನ್ವಿತ ಜಿರಳೆ” ಎಂದು ಕರೆದುಕೊಂಡಿದ್ದಾರೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಪರೋಕ್ಷವಾಗಿ ಮತ್ತೆ ಬಂಧನದ ಎಚ್ಚರಿಕೆ ನೀಡಿದ ಲಡಾಖ್ ಉಪರಾಜ್ಯಪಾಲರನ್ನೂ ತರಾಟೆಗೆ ತೆಗೆದುಕೊಂಡು ಸಿಜೆಪಿಗೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದ್ದಾರೆ.





