ಗೋಮೂತ್ರದಲ್ಲಿ ಆಂಟಿಬ್ಯಾಕ್ಟೀರಿಯಲ್, ಆಂಟಿಫಂಗಲ್ ಹಾಗೂ ಜೀರ್ಣಕಾರಿ ಗುಣಲಕ್ಷಣಗಳು ಇವೆ. ಗೋಮೂತ್ರ ಕುಡಿಯುವುದು ಒಳ್ಳೆಯೆದು ಎಂದು ಮದ್ರಾನ್‌ನ ಐಐಟಿ ನಿರ್ದೇಶಕ ವಿ ಕಾಮಕೋಟಿ ಹೇಳಿದ್ದಾರೆ. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಕಾಮಕೋಟಿ ಅವರನ್ನು ಟೀಕಿಸಿದ್ದಾರೆ.
‘ಮಾಟು ಪೊಂಗಲ್’ ಆಚರಣೆಯ ಸಮಯದಲ್ಲಿ ಚೆನ್ನೈನ ಗೋ ಸಂರಕ್ಷಣಾ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕಾಮಕೋಟಿ ಭಾಗವಹಿಸಿ, ಮಾತನಾಡಿದ್ದರು. “ಗೋಮೂತ್ರವು ‘ಔಷಧೀಯ’ ಗುಣಗಳನ್ನು ಹೊಂದಿದೆ. ಅದನ್ನು ಸೇವನೆ ಮಾಡುವುದರಿಂದ ಇರಿಟೇಬಲ್ ಬೊವೆಲ್ ಸಿಂಡ್ರೋಮ್ ರೀತಿಯ ಸಮಸ್ಯೆಗಳು ನಿವಾರಣೆಯಾಗುತ್ತವೆ” ಎಂದು ಹೇಳಿದ್ದಾರೆ.
ಅವರ ಹೇಳಿಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಕಾರ್ತಿ ಪಿ ಚಿದಂಬರಂ, ‘ಐಐಟಿ ಮದ್ರಾಸ್ ನಿರ್ದೇಶಕರು ಹುಸಿ ವಿಜ್ಞಾನವನ್ನು ಪ್ರಚಾರ ಮಾಡುತ್ತಿದ್ದಾರೆ. ಇದು ಆಘಾತಕಾರಿ”ಯಾಗಿದೆ’” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Peddling pseudoscience by @iitmadras Director is most unbecoming @IMAIndiaOrg https://t.co/ukB0jwBh8G
— Karti P Chidambaram (@KartiPC) January 18, 2025
“ಈ ರೀತಿಯಲ್ಲಿ ಪ್ರಚಾರ ಮಾಡುವುದು, ಗೋಮೂತ್ರ ಸೇವನೆಯನ್ನು ಉತ್ತೇಜಿಸುವುದು ನಿಜಕ್ಕೂ ಕಾನೂನುಬಾಹಿರ ಮತ್ತು ಅನೈತಿಕ. ಇವರು ತಮ್ಮ ಕುಟುಂಬ ಅನಾರೋಗ್ಯಕ್ಕೆ ಒಳಗಾದಾಗ ಆಧುನಿಕ ಔಷಧಿಗಳ ಮೊರೆ ಹೋಗುತ್ತಾರೆ. ಬಡ ಜನರು ಕಳಪೆ ವೈದ್ಯಕೀಯ ಮೂಲಸೌಕರ್ಯದಲ್ಲೇ ಇರಬೇಕೆಂದು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ನೆಟ್ಟಿಗರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.